ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
೧೫ರಿಂದ ೨೦ ವರ್ಷ ಅವಧಿಯ ವಯಸ್ಸು, ವ್ಯಕ್ತಿತ್ವ ವಿಕಸನದ ಕಡೆಯ ಹಂತ. ವ್ಯಕ್ತಿಯ ಆಸೆ-ಆಕಾಂಕ್ಷೆಗಳು, ಆಲೋಚನೆ ವಿಚಾರಗಳು, ಧೋರಣೆ, ನೀತಿ-ಮೌಲ್ಯಗಳು ಯಾವುದೇ ಸಾಮಾನ್ಯ ವಿಷಯ, ವಸ್ತು, ವ್ಯಕ್ತಿ, ಸಂದರ್ಭಕ್ಕೆ ತೋರಬೇಕಾದಂತಹ ಪ್ರತಿಕ್ರಿಯೆಗಳು ನಿರ್ದಿಷ್ಟ ರೂಪ ಪಡೆದು ಗಟ್ಟಿಗೊಳ್ಳುವ ಅವಧಿ. ಬಾಲ್ಯದ ಮುಗ್ಧತೆ, ಬೆರಗು ಕರಗಿ, ಪ್ರೌಢತೆಯ ಬೆಳಕು, ಶಕ್ತಿ ಚತುರತೆಗಳು ಪಕ್ವಗೊಳ್ಳುವ ಕಾಲ. ಹುಟ್ಟುವಾಗ ಮತ್ತು ಆನಂತರ, ಮಗು ಅಮ್ಮನ ಹಾಗೋ, ಅಪ್ಪನ ಹಾಗೋ, ಅಜ್ಜಿಯ ಹಾಗೋ ತಾತನ ಹಾಗೋ ಎಂದು ಎಲ್ಲರಿಂದ ವಿಮರ್ಶೆಗೊಳ್ಳುತ್ತದೆ. ೨೦ನೇ ವರ್ಷ ಮುಟ್ಟಿದಾಗ ಅದು ಎಲ್ಲರಿಂದ ಅಷ್ಟು ಇಷ್ಟನ್ನು ಪಡೆದು ಶಿಕ್ಷಣ, ಸಮಾಜ ಪರಿಸರದ ಮೂಸೆಯಲ್ಲಿ ಬೆಂದು, ಒಂದು ನಿರ್ದಿಷ್ಟ ರೂಪವನ್ನು ಪಡೆದಾಗ, ಅದಕ್ಕೆ ತನ್ನದೇ ಆದ ವಿಶಿಷ್ಟತೆ ಇರುತ್ತದೆ. ಪ್ರತಿಯೊಂದು ವ್ಯಕ್ತಿಯ ಸಹಿ ಅವನಿಗೇ ವಿಶಿಷ್ಟವಾಗಿರು ವಂತೆ, ವ್ಯಕ್ತಿತ್ವವೂ ವಿಶಿಷ್ಟವಾಗಿರುತ್ತದೆ. ವ್ಯಕ್ತಿತ್ವದಲ್ಲಿ ಪಾಸಿಟಿವ್ ಅಂಶಗಳು ಹೆಚ್ಚೇ, ನೆಗೆಟಿವ್ ಅಂಶಗಳು ಹೆಚ್ಚೇ, ಯಾವುದು ಆನುವಂಶಿಕವಾಗಿ ಬಂದದ್ದು, ಯಾವುದು ತಂದೆ-ತಾಯಿಯ ಲಾಲನೆ ಪಾಲನೆಯಿಂದ ಬಂದದ್ದು, ಯಾವುದು ಶಾಲೆ-ಕಾಲೇಜಿನ ಶಿಕ್ಷಣದಿಂದ ಬಂದದ್ದು, ಯಾವುದು ಈಗ ಅತ್ಯಂತ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಂದ ಬಂದದ್ದು, ಯಾವುದು ಸಮಾಜ-ಸಂಸ್ಕೃತಿ ಸಂಪ್ರದಾಯಗಳಿಂದ ಬಂದದ್ದು ಎಂದು ಹೇಳುವುದು ಬಲುಕಷ್ಟ. ನಿತ್ಯ ಪರಿವರ್ತನೆ, ನಿತ್ಯ ವಿಕಾಸದ ಹಾದಿಯಲ್ಲಿರುವ ಯುವ ಪುರುಷ - ಸ್ತ್ರೀಯ ಮಾತು ವರ್ತನೆಗಳು ಅವರಿಗೆ ಹಿತವೇ ಅಹಿತವೇ, ಕುಟುಂಬದವರಿಗೆ ಹಿತವೇ ಅಹಿತವೇ, ಎಂಬುದನ್ನು ಅನೇಕ ಆಂತರಿಕ ಮತ್ತು ಬಾಹ್ಯ ಪ್ರಚೋದನೆಗಳು ನಿರ್ಧರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹಿಂದೆಂದಿ ಗಿಂತಲೂ ಅಧಿಕವಾಗಿ ಯುವಜನರ ಮಾತುಗಳು ಮತ್ತು ವರ್ತನೆಗಳಲ್ಲಿ ಏರುಪೇರು, ಅಸಹಜತೆ ಅಸಾಮಾನ್ಯ ಗುಣಗಳು ಕಾಣಿಸಿಕೊಳ್ಳುತ್ತಿವೆ. ಯುವಜನರ ಧೋರಣೆ - ವರ್ತನೆಗಳು ಕುಟುಂಬ ಮತ್ತು ಸಮಾಜಕ್ಕೆ ಅಹಿತವನ್ನುಂಟುಮಾಡುತ್ತಿವೆ. ಸವಾಲಾಗುತ್ತಿವೆ. ಕೆಲವರ ನಡೆನುಡಿಗಳು ವಿಕೃತವಾಗಿ, ವಿಚಿತ್ರವಾಗಿ ದಿಗ್ಭ್ರಮೆಯನ್ನುಂಟುಮಾಡುತ್ತಿವೆ. ಸಂಬಂಧಪಟ್ಟವರಿಗೆ ಕ್ಷೋಭೆಯನ್ನುಂಟುಮಾಡುತ್ತಿವೆ. ಉದಾಹರಣೆಗೆ, ಯುವ ಜನರು -
* ಶ್ರದ್ಧೆಯಿಂದ ಕಲಿಯಬೇಕಾದ್ದನ್ನು ಕಲಿಯುವುದಿಲ್ಲ.
* ಕಲಿಯಬಾರದ್ದನ್ನು ಕಲಿಯಲು ಆಸಕ್ತಿ ತೋರುತ್ತಾರೆ. ಅದನ್ನು ಶ್ರದ್ಧೆಯಿಂದ ಕಲಿಯುತ್ತಾರೆ.
* ಬುದ್ಧಿ ಸಾಮರ್ಥ್ಯಗಳಿದ್ದರೂ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಯೋಗ್ಯತೆಗೆ ಅನುಗುಣವಾಗಿ ಗುರಿಮುಟ್ಟುವುದಿಲ್ಲ.
* ಮನರಂಜನಾ ಪ್ರಧಾನ ಚಟುವಟಿಕೆಗಳು, ವಸ್ತು - ವಿಶೇಷಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ತಮ್ಮ ಸಮಯ ಸಂಪನ್ಮೂಲವನ್ನು ಬಳಸುತ್ತಾರೆ. ಸಕ್ರಿಯ ಮನರಂಜನೆಗಿಂತ ನಿಷ್ಕ್ರಿಯ ಮನರಂಜನೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಮೋಜು ಮಸ್ತಿ ಮಾಡುತ್ತಾರೆ.
* ನೀತಿ-ನಿಯಮಗಳನ್ನು, ಸಂಪ್ರದಾಯ-ಕಾನೂನುಗಳನ್ನು ಪಾಲಿಸುವುದಿಲ್ಲ. ಭಂಗ ಮಾಡುವುದರಲ್ಲಿಯೇ ಆನಂದವನ್ನು ಅನುಭವಿಸುತ್ತಾರೆ. ಸುಳ್ಳು, ಕಳ್ಳತನ, ಮೋಸ, ವಂಚನೆ ಮಾಡಲು ಹಿಂಜರಿಯುವುದಿಲ್ಲ.
* ಗುರು-ಹಿರಿಯರ ಮಾತು-ಸಲಹೆಗಳನ್ನು ಕೇಳುವುದಿಲ್ಲ. ಗೌರವವನ್ನು ತೋರುವುದಿಲ್ಲ. ಬುದ್ಧಿ ಮಾತುಗಳನ್ನು ನಿರ್ಲಕ್ಷಿಸುತ್ತಾರೆ.
* ಹಕ್ಕುಗಳ ಬಗ್ಗೆ ಆಸಕ್ತಿ ಇದ್ದಷ್ಟು ಬಾಧ್ಯತೆಗಳ ಬಗ್ಗೆ ಇರುವುದಿಲ್ಲ. ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಾರೆ.
* ಆಸೆ ಬೆಟ್ಟದಷ್ಟಿರುತ್ತದೆ. ಪ್ರಯತ್ನ ತುಂಬಾ ಕಡಿಮೆ. ಬಾಯಿ ಮೊಸರಾಗ ಬೇಕು. ಆದರೆ ಕೈಗಳು ಕೆಸರಾಗಬಾರದು. ಶ್ರಮಪಡದೇ, ಸೌಲಭ್ಯ- ಸಲವತ್ತುಗಳನ್ನು ಬಯಸುತ್ತಾರೆ.
* ಅನೇಕರಿಗೆ ಗುರಿ ಒಂದೇ. ಸದಾಕಾಲ, ಪ್ರತಿಕ್ಷಣ ಖುಷಿ ಪಡುವುದು. ಅದಕ್ಕೆ ಬೇಕಾದ ಹಣವನ್ನು ಹೇಗೋ ಹೊಂದಿಸಿಕೊಳ್ಳುವುದು.
* ಅಲ್ಪಕಾರಣಗಳಿಗೆ, ಸುಲಭಕ್ಕೆ ಭಾವೋದ್ವೇಗಗಳಿಗೆ ಒಳಗಾಗುತ್ತಾರೆ. ನಕಾರಾತ್ಮಕ ಭಾವನೆಗಳಾದ ದುಃಖ, ಕೋಪ, ಭಯಗಳನ್ನು ಅನುಭವಿಸುತ್ತಾರೆ. ಹಾಗೂ ಅವನ್ನು ಇತರರಿಗೆ ನೋವುಂಟುಮಾಡುವ ಹಾಗೆ ಪ್ರಕಟಿಸುತ್ತಾರೆ.
* ಅಪಾಯ, ಹಾನಿಕಾರಕ ಎಂಬ ಅರಿವಿದ್ದರೂ, ಅಪಾಯಕಾರಿ ಮತ್ತು ಹಾನಿಕಾರಕ ಕೆಲಸ - ಹವ್ಯಾಸ - ಚಟುವಟಿಕೆಗಳಲ್ಲಿ ತೊಡಗುತ್ತಾರೆ.
* ಕುಟುಂಬದಲ್ಲಿ ಮತ್ತು ಹೊರಗಡೆ, ಜವಾಬ್ದಾರಿಗಳನ್ನು ಹೊರಲು ನಿರಾಕರಿಸುತ್ತಾರೆ. ಹೇಗೋ ನುಣುಚಿಕೊಳ್ಳುತ್ತಾರೆ.
ಉದಾ: ಕುಟುಂಬ, ಪಾಲಕರು, ಶಾಲಾ - ಕಾಲೇಜು ಶಿಕ್ಷಣ ಸಂಸ್ಥೆಗಳು, ವಿವಿಧ ಕ್ಷೇತ್ರದ ನಾಯಕರು, ಯುವಜನರ ಐಕಾನ್‌ಗಳು ಒಳ್ಳೆಯ ಮಾದರಿಯಾಗುವ ಬದಲು ಕೆಟ್ಟ ಮಾದರಿಯಾಗುತ್ತಿದ್ದಾರೆ.
ಒಟ್ಟಿನಲ್ಲಿ ಯುವ ಜನರ ಮನಸ್ಸು ಹೆಚ್ಚೆಚ್ಚು ಕ್ಷೋಭೆಗಳಿಗೆ ಒಳಗಾಗಿ ಅವರ ಮಾತು-ವರ್ತನೆಗಳು ಅಸಹಜ, ಅಹಿತ ಮತ್ತು ತೊಂದರೆದಾಯಕವಾಗುತ್ತಿವೆ.
ಈ ಪುಸ್ತಕದಲ್ಲಿ ಈ ಎಲ್ಲ ವಿಚಾರಗಳನ್ನು ಉದಾಹರಣೆ ಸಹಿತ ಚರ್ಚಿಸಲಾಗಿದೆ. ಪರಿಹಾರ ಮಾರ್ಗಗಳನ್ನು ಸೂಚಿಸಲಾಗಿದೆ. ಮನಶ್ಶಾಸ್ತ್ರಜ್ಞರು ಆಪ್ತ ಸಮಾಲೋಚಕರು ಮನೋವೈದ್ಯರು ಈ ದಿಸೆಯಲ್ಲಿ ನೆರವಾಗಬಲ್ಲರು. ಅವರ ನೆರವನ್ನು ಪಡೆಯಿರಿ. ಬಾಲ್ಯದಿಂದಲೇ ಮಕ್ಕಳ ಲಾಲನೆ ಪಾಲನೆಯನ್ನು ಸರಿಯಾಗಿ ಮಾಡಿದರೆ ಶಾಲೆಯಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನ ಮಾಡಿದರೆ, ಮಾಧ್ಯಮದವರು ಸಹಕರಿಸಿದರೆ, ಯುವಜನರ ಮಾತು-ವರ್ತನೆಗಳು ಆರೋಗ್ಯಕರವಾಗಿ, ಹಿತಕರವಾಗಿ ಹಾಗೂ ಸಮಾಜಮುಖಿಯಾಗಿರಲು ಸಾಧ್ಯವಿದೆ. ಈ ಪುಸ್ತಕವು ಪಾಲಕರ, ಶಿಕ್ಷಕರ ಮಾರ್ಗದರ್ಶಕವಾಗಿರಲಿ.
ಪುಟಗಳು: 104
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !