ವೈಜ್ಞಾನಿಕ ಕತೆಗಳನ್ನು ಹಲವರು ಕಟ್ಟುಕತೆ, ಭ್ರಮಾಲೋಕದ ವೃತ್ತಾಂತಗಳು ಎಂದು ನಿರ್ಧರಿಸಿರುತ್ತಾರೆ. ಇನ್ನು ಕೆಲವರಿಗೆ ವಿಜ್ಞಾನವನ್ನು ಕಲಿತವರಿಗೆ ಮಾತ್ರ ಈ ಕಥೆಗಳು ಅರ್ಥವಾಗುತ್ತವೆ ಎಂಬ ತಪ್ಪು ಪರಿಕಲ್ಪನೆ ಇದೆ. ಬಹುಶಃ ಈ ಕಾರಣಕ್ಕೆ, ಈ ಪ್ರಕಾರದ ಕತೆಗಳು ಬೆಂಗಾಲಿ ಹಾಗೂ ಮರಾಠಿಯಲ್ಲಿ ಜನಪ್ರಿಯವಾದಷ್ಟು ಕನ್ನಡದಲ್ಲಿ ಆಗಿಲ್ಲವೇನೋ. ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಆವಿಷ್ಕಾರಗಳಿಂದ ಅದೆಷ್ಟು ಅನುಕೂಲವಾಗಿದೆ. ಆದರೆ ಅವುಗಳನ್ನು ಬಹಳ ಸಹಜವೆಂದು, ಅದರ ಹಿಂದಿನ ಶ್ರಮ, ಬೆವರು, ತ್ಯಾಗಗಳನ್ನು ಮರೆತೇ ಹೋಗಿದ್ದೇವೆ! ವಿಜ್ಞಾನದ ಸಾಧ್ಯತೆ ಆಗಾಧ. ಪ್ರತಿದಿನವೂ ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಹೀಗೆ ನಿರಂತರವಾಗಿ ತನ್ನ ಹರಿವನ್ನು ಹೆಚ್ಚಿಸುತ್ತಾ ಹೋಗುವ ಕ್ಷೇತ್ರದಲ್ಲಿ ಹಲವು ಕೂತುಹಲ ಭರಿತ ಪರಿಕಲ್ಪನೆಗಳು ಮನಸಿಗೆ ಬರುವುದು ಸಹಜ. ಅಂತಹ ಕೆಲವು ಕಲ್ಪನೆಗಳ ಬಗ್ಗೆ ಮತ್ತಷ್ಟು ಚಿಂತಿಸಿ, ಇನ್ನಷ್ಟು ಓದಿ, ತಿಳಿದುಕೊಂಡು, ಕತೆಗಳ ರೂಪದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.
ಭವಿಷ್ಯತ್ತಿನ ಕಥೆಗಳನ್ನು ಬರೆಯುವುದೆಂದರೆ, ದಿಗಂತವನ್ನು ನೋಡಿ, ಅನುಭವಿಸಿದ ಹಾಗೆ! ದಿಗಂತದತ್ತ ನಡೆದಷ್ಟೂ, ಅದು ಮತ್ತಷ್ಟು ದೂರ ಸರಿದು, ಇನ್ನಷ್ಟು ವಿಸ್ತರಿಸಿಕೊಂಡು, ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ರೋಚಕತೆ, ವಿಸ್ಮಯ ಹಾಗೂ ಜ್ಞಾನಗಳನ್ನು ಹೆಚ್ಚಿಸುವ ತಾಣವೇ ಆ ಬಾನಂಚು!!