ಹೌದು. ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗ್ತೀನಿ. ಯಾವ ಅಪರಾಧ ಸುದ್ದಿಯೂ ನನ್ನ ಕಣ್ತಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್ ವಲ್ರ್ಡ್ ಯಾವುದಾದರೂ ಸರಿ.
ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ನನಗೆ ಬೇಕಾದ ಸುದ್ದಿ ಹೊರ ತರಬಲ್ಲೆ. ಅಂಡರ್ ವರ್ಲ್ಡ್ ಡಾನ್ ಎಂದು ಎನ್ನಿಸಿಕೊಂಡವರು ಸಹ ನನಗೇನೂ ದೂರವಲ್ಲ. ಆದರೆ ಯಾವಾಗ ಬೇಕಾದರೂ, ಯಾರ ವಿರುದ್ಧ ಕೂಡ ತಿರುಗಿ ಬೀಳಬಲ್ಲೆ. ನನ್ನ ಕೈಯಲ್ಲಿ ಆಗದ ಕೆಲಸವಿಲ್ಲ ಎನ್ನುವ ಹಮ್ಮು ಬೇರೆ. ಯಾರ ಹಂಗಿನಲ್ಲೂ ನಾನಿಲ್ಲ ಎನ್ನುವ ದುರಹಂಕಾರ.
ಆದರೆ ತಾನು ಯಾವ ವೇಶ್ಯಾವಾಟಿಕೆ, ಡ್ರಗ್ ಗಳ ವಿರುದ್ಧ ಪುಟಗಟ್ಟಲೆ ಬರೆದಿದ್ದೆನೋ, ಅದೇ ಆ ವೃತ್ತದೊಳಗೆ ಸ್ನೇಹಿತರ ಜೊತೆ ಪರೋಕ್ಷವಾಗಿ ಭಾಗಿಯಾದಾಗ? ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಹೀರೋಗಳಂತೆ ಪ್ರತಿಬಿಂಬಿಸಿ, ಕೊನೆಗೆ ಸತ್ಯ ತಿಳಿದಾಗ? ಇಷ್ಟೆಲ್ಲಾ ಅಧಿಕಾರದಲ್ಲಿರುವವರ ಸಂಪರ್ಕವಿದ್ದರೂ, ನಿಜವಾಗಿ ನೊಂದವರಿಗೆ ಸಾಂತ್ವನ ಹೇಳಲೂ ಆಗದಿದ್ದಾಗ?
ಇದೆಲ್ಲಾ ಇರಲಿ... ಇಡೀ ವ್ಯವಸ್ಥೆಯೇ ತನ್ನನ್ನು ಹೀರೋ ಎಂದು ಹೊಗಳುತ್ತಾ, ತಮಗೆ ಬೇಕಾದಂತೆ ಕಥೆಗಳನ್ನು ಕಟ್ಟುತ್ತಾ ಹೋದಾಗ? ತನ್ನನ್ನು ಟಾಯ್ಲೆಟ್ನಲ್ಲಿ ಟಿಶ್ಯೂ ಪೇಪರ್‌ನಂತೆ ಉಪಯೋಗಿಸಿ ಎಸೆದಂತ ಅನುಭವವಾಗುತ್ತದೆ. ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ.
ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್...
ಮಾಕೋನಹಳ್ಳಿ ವಿನಯ್ ಮಾಧವ್