ಗಡಿಯಾರದೊಂದಿಗೆ ಸ್ಪರ್ಧೆಗಿಳಿಯುವ ಧಾವಂತದ ಬದುಕಿನ ಹಾದಿಯಲ್ಲಿ ಕೆಲಕ್ಷಣ ಹೊರಗೆ ನಿಂತು ನೋಡಿದಾಗ , ಹಲವು ತಿರುವುಗಳ ಹಾದಿಯನ್ನ ಸವಿನೆನಪುಗಳು ಸಿಂಗರಿಸುತ್ತ ಸಾಗುತ್ತವೆ. ಒತ್ತಡದಲ್ಲಿನ ನಮ್ಮ ವರ್ತನೆಗಳು ನಗು ತರಿಸುತ್ತವೆ. ಕಲಿಯುವ ಪಾಠಗಳು ಬೆರಗು ಮೂಡಿಸುತ್ತವೆ. ನೋವು, ದುಃಖಗಳಿಗೆ ಸಮಯದ ಮುಲಾಮಿನ ಮಹಿಮೆ ಹುಬ್ಬೇರುವಂತೆ ಮಾಡುತ್ತದೆ. ಭೇಟಿಯಾಗುವ ಒಬ್ಬೊಬ್ಬರ ಗುಣ ಸ್ವಭಾವಗಳು ಒಂದೊಂದು ಬಣ್ಣ ನೀಡಿ, ಬದುಕು ಕಾಮನಬಿಲ್ಲಿನ ತೋರಣ ಕಟ್ಟುತ್ತದೆ.ಬದುಕಿನೊಂದಿಗೆ ಪ್ರಕೃತಿ, ಸಮಾಜ, ಸಂಸ್ಕೃತಿಗಳು ಹಾಸುಹೊಕ್ಕಾಗಿ ಕಣ್ಣಿಗೆ ತಂಪಾಗಿ, ಕರಣಕೆ ಇಂಪಾಗಿ, ಮನಸು ಹಗುರವಾದಾಗ ನಿರಮ್ಮಳವಾಗಿ ಹೊಮ್ಮುವ ಭಾವನೆಗಳನ್ನ ಭಾಷೆಯ ಎಳೆಯೊಂದಿಗೆ ನೇಯ್ದಾಗ ಲಘು ಹಾಸ್ಯದ ಲೇಪದೊಂದಿಗೆ ಮೂಡಿಬಂದ ಲಲಿತ ಪ್ರಬಂಧಗಳ ಸಂಗ್ರಹಕ್ಕೆ ನನ್ನದೇ ದ್ವನಿಯನ್ನ ನೀಡಿ ಈ ಧ್ವನಿ ಪುಸ್ತಕವನ್ನ ಸಾರಸ್ವತ ಲೋಕಕ್ಕೆ ಅರ್ಪಿಸುತ್ತಿದ್ದೇನೆ. ಇದರಲ್ಲಿ ಬಹುತೇಕ ಪ್ರಬಂಧಗಳು "ವಿಶ್ವವಾಣಿ", " ಪಂಜು" ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಸೊಳ್ಳೆಕಿರಿದೆನ್ನಬಹುದೇ?" ಪ್ರಬಂಧ ಪ್ರತಿಲಿಪಿಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಕೇಳುತ್ತ ಹೋದಂತೆ ತಮ್ಮ ಮನಸ್ಸನ್ನೂ ಹಗುರ ಗೊಳಿಸಿ, ಮಂದಹಾಸ ಮೂಡಿಸಬಲ್ಲ , ಪ್ರಬಂಧದ ಪಾತ್ರಗಳೊಟ್ಟಿಗೆ ತಮ್ಮನ್ನೂ ಸೆಳೆದುಕೊಂಡು ಹೋಗಬಲ್ಲ, ನನ್ನೊಂದಿಗೆ ನಿಮ್ಮನ್ನ ಸಮೀಕರಿಸಬಲ್ಲ ಈ ಪುಸ್ತಕವನ್ನ ಆಶೀರ್ವದಿಸುವ ಸದಾಶಯದೊಂದಿಗೆ....