ಲೇಖಕರು:
ಮರಾಠಿ ಮೂಲ ಡಾ|| ದತ್ತಪ್ರಸಾದ ದಾಭೋಲ್ಕರ್
ಕನ್ನಡಕ್ಕೆ ಚಂದ್ರಕಾಂತ ಪೋಕಳೆ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಡಾ|| ದತ್ತಪ್ರಸಾದ ದಾಭೋಲ್ಕರ್ ಮರಾಠಿಯ ಚಿಂತನಶೀಲ ಲೇಖಕರು. ಅವರು ಸ್ವಾಮಿ ವಿವೇಕಾನಂದರ ಬಗೆಗೆ ಉಳಿದವರಿಗಿಂತ ಭಿನ್ನವಾದ ರೀತಿಯಲ್ಲಿ ತಮ್ಮ ವೈಚಾರಿಕ ನಿಲುವನ್ನು ಮಂಡಿಸಿದ್ದಾರೆ. ನಿಜವಾಗಿ ಸ್ವಾಮಿ ವಿವೇಕಾನಂದರು ಯಾರು? ಎಂಬ ಪರಾಮರ್ಶೆಯನ್ನು ಇಲ್ಲಿ ಕೈಕೊಂಡಿದ್ದಾರೆ. ಅವರೊಬ್ಬ ಧಾರ್ಮಿಕ ಗುರುವೇ, ಪ್ರವಚನಕಾರರೇ, ದಕ್ಷ ಹಿಂದೂವೇ? ಪರಿವರ್ತನೆಯ ಚಳುವಳಿಯ ಅಗ್ರದೂತರೆ? ಅಥವಾ ದೇಶದ ಮೊದಲ ಸಾಮ್ಯವಾದಿಯೇ? ಎಂಬ ಚರ್ಚೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ಈವರೆಗೆ ವಿವೇಕಾನಂದರ ಬಗೆಗೆ ನೂರಾರು ಗ್ರಂಥಗಳು, ಲೇಖನಗಳು ಬಂದಿವೆ. ಒಬ್ಬೊಬ್ಬರು ಒಂದೊಂದು ದೃಷ್ಟಿಯಿಂದ ವ್ಯಾಖ್ಯಾನಿಸಿದ್ದಾರೆ. ಇದಾವುದನ್ನು ಅಲ್ಲಗಳೆಯುವಂತಿಲ್ಲ. ಈ ಎಲ್ಲ ವೈರುಧ್ಯಗಳನ್ನು ಎದುರಿಸಿಕೊಂಡು ವಿವೇಕಾನಂದರನ್ನು ಅರಿಯುವ ಪ್ರಯತ್ನವನ್ನು ಮಾಡಿದ್ದಾರೆ. ವಿವೇಕಾನಂದರಲ್ಲಿದ್ದ ಗೊಂದಲ, ಗಲಿಬಿಲಿ, ಕಸಿವಿಸಿ, ಚಡಪಡಿಕೆಯನ್ನು ದಾಖಲಿಸುತ್ತ, ಇದಕ್ಕಿರುವ ಕಾರಣವೇನು ಎಂಬ ಶೋಧವನ್ನೂ ಕೈಕೊಳ್ಳುತ್ತಾರೆ. ಹೀಗಿರಬಹುದೇ ಎಂಬ ಅನುಮಾನವನ್ನೂ ಎದುರಿಗಿಡುತ್ತಾರೆ. ಉತ್ತರ ಹೇಳಿದರೂ, ತಮ್ಮದೇ ಸತ್ಯವೆಂಬ ಹಠ ಹಿಡಿಯುವದಿಲ್ಲ. ಪ್ರಶ್ನೆಗಳ ಬಗೆಗೆ ಚರ್ಚಿಸುವಾಗ ಸರಿಯೆನಿಸದಿದ್ದರೆ ತನಗೆ ಉತ್ತರ ‘ಗೊತ್ತಿಲ್ಲ’ವೆಂದು ನೇರವಾಗಿಯೇ ಒಪ್ಪಿಕೊಳ್ಳುತ್ತಾರೆ. ಉದಾಹರಣೆಗಾಗಿ - ಸಂನ್ಯಾಸಿ, ವಿಧವೆಯರ ಸಮಸ್ಯೆ, ಮತಾಂತರ, ವಿವಾಹ ಸಂಸ್ಥೆ, ಬ್ರಹ್ಮಚರ್ಯೆ - ಮುಂತಾದ ವಿಷಯಗಳ ಬಗೆಗಿನ ವಿಚಾರವನ್ನು ಗಮನಿಸಬಹುದು.
ವಿವೇಕಾನಂದರು ತಮ್ಮನ್ನು ಒಂದೆಡೆ ಸಾಮ್ಯವಾದಿ ಎಂದು ಕರೆದುಕೊಂಡರೂ, ಅದರ ಇತಿಮಿತಿಯ ಬಗೆಗೂ ಹೇಳುತ್ತಾರೆ. ಹಿಂದೂವೆಂದು ಕರೆದುಕೊಳ್ಳುವಾಗಲೂ, ಅಲ್ಲಿರುವ ಲೋಪ-ದೋಷವನ್ನು ವಿರೋಧಿಸುತ್ತಾರೆ. ಧರ್ಮಶಾಸ್ತ್ರವನ್ನು ಬದಿಗಿರಿಸಿ ಹೊಸ ವಿಚಾರಗಳಿಗೆ ಮುಖಾಮುಖಿಯಾಗುತ್ತಾರೆ. ಹಿಂದೂ-ಮುಸ್ಲಿಂ ಸಮನ್ವಯ, ದಲಿತೋದ್ಧಾರ, ಮೀಸಲಾತಿ - ಮುಂತಾದ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಜ್ಞಾನದ ವಿವಿಧ ಜ್ಞಾನಶಾಖೆಗಳೊಂದಿಗೆ ಅವರು ನಡೆಸಿದ ಸಂವಾದ ಅನನ್ಯವಾದುದು. ಧರ್ಮ-ವಿಜ್ಞಾನದ ಸಮನ್ವಯದ ಬಗೆಗೂ ಹೇಳಿದ್ದಾರೆ. ದಲಿತರಿಗೆ ನ್ಯಾಯ, ಹಕ್ಕು ನೀಡುವಂತೆ ಬ್ರಾಹ್ಮಣರಿಗೆ ಕರೆ ನೀಡಿದ್ದಾರೆ. ಬುದ್ಧನ ಮಾನವೀಯ ಗುಣವನ್ನು ಮೆಚ್ಚುತ್ತಾರೆ. ಸಂನ್ಯಾಸ ಧರ್ಮವನ್ನು ಪರೀಕ್ಷೆಗೊಡ್ಡುತ್ತಾರೆ. ಸಾಮ್ಯವಾದಿ ಸಿದ್ಧಾಂತಕ್ಕೆ ಆಧ್ಯಾತ್ಮಿಕ ಅನುಷ್ಠಾನ ಬೇಕು ಎನ್ನುತ್ತಾರೆ. ಧರ್ಮ ಸತ್ಯಪ್ರಿಯವಲ್ಲ, ಗತಿಪ್ರಿಯ ಎನ್ನುತ್ತಾರೆ. ಧರ್ಮದ ಮೇಲಲ್ಲ, ಧರ್ಮದ ಕೆಟ್ಟ ಪ್ರವೃತ್ತಿಯ ಮೇಲೆ ಆಘಾತ ಮಾಡಿ ಎನ್ನುತ್ತಾರೆ. ವಿವೇಕಾನಂದರಿಗೆ ತಮ್ಮ ಇತಿಮಿತಿಯ ಅರಿವೂ ಇತ್ತು.
ಡಾ|| ದತ್ತಪ್ರಸಾದ ದಾಭೋಲ್ಕರರು ಅಸಂಖ್ಯಾತ ಪತ್ರ, ಟಿಪ್ಪಣಿ, ಗ್ರಂಥ, ಸ್ವತಃ ವಿವೇಕಾನಂದರೇ ಬರೆದ ಲೇಖನ, ಮಾಡಿದ ಭಾಷಣ, ಪ್ರತಿಕ್ರಿಯೆ - ಹೀಗೆ ಎಲ್ಲ ದಾಖಲೆಗಳನ್ನು ಎದುರಿಸಿ ನಡೆಸಿದ ಚರ್ಚೆ ಹೆಚ್ಚು ಮೌಲಿಕವಾಗಿದೆ. ಹಿಂದೂ ಧರ್ಮವೇ ಆಗಿರಲಿ, ಸಾಮ್ಯವಾದಿಗಳೇ ಆಗಿರಲಿ, ಪ್ರಗತಿಪರ ಚಳುವಳಿಗಾರರೇ ಆಗಿರಲಿ - ಇವರೆಲ್ಲರೂ ವಿವೇಕಾನಂದರನ್ನು ತಲಸ್ಪರ್ಶಿಯಾಗಿ ಅರ್ಥ ಮಾಡಿಕೊಂಡರೆ ಈ ಚಳವಳಿಗೆ ಹೊಸ ತಿರುವು ಸಿಗಬಹುದು ಎಂಬ ಆಶಾವಾದವನ್ನು ವ್ಯಕ್ತಮಾಡಿದ್ದಾರೆ.
- ಚಂದ್ರಕಾಂತ ಪೋಕಳೆ
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !