ನನ್ನ ಬಾಳಿನ ಇಪ್ಪತ್ತು ಮೂವತ್ತು ವರ್ಷಗಳ ಸಾರ್ವಜನಿಕ ಜೀವನವನ್ನು ಕುರಿತು ಬಹು ಹಿಂದೆಯೇ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಎಂಬುದರಲ್ಲಿ ಕಾಲಕ್ರಮದ ಅನುಭವಗಳ ಸರಣಿಯನ್ನು ಬರೆದು ಮುಗಿಸಿದ್ದೆ ಮತ್ತೊಂದು ದಶಕದ ಬಳಿಕ, ಅದಕ್ಕೇನೆ ಮುಂದಣ ವರ್ಷಗಳ ಅನುಭವಗಳನ್ನು ಸೇರಿಸಿ, ಅದೇ ಬರಹದ ಎರಡನೆಯ ಆವೃತ್ತಿಯನ್ನು ಕನ್ನಡಿಗರಿಗೆ ಒಪ್ಪಿಸಿದೆ. ಅನಂತರದ ವರ್ಷಗಳು ಸಂದಂತೆ - ತಿರುಗಿ ಹಳೆಯದಕ್ಕೆ ಒಂದಿಷ್ಟು ಕಾಲಕ್ರಮದ ಅನುಭವಗಳನ್ನು ಸೇರಿಸುವ ಇಷ್ಟವಾಗದೆ, ಬೇರೊಂದು ರೀತಿಯಲ್ಲಿ ಹೇಳಿದ್ದನ್ನೇ ತಿರುಗಿ ಹೇಳಲು ಹೊರಟಿದ್ದೇನೆ. ಅದು 'ಸ್ಮೃತಿಪಟಲದಿಂದ' ಎಂಬ ಆಖ್ಯೆಯ ಕೆಳಗೆ. ಇದು ವಿಷಯಗಳ ದೃಷ್ಟಿಯಿಂದ ನನ್ನ ಅನುಭವಗಳನ್ನೂ ವಿಚಾರ ಸರಣಿಯನ್ನೂ ನಿಮ್ಮ ಮುಂದಕ್ಕಿರಿಸಲು ಮಾಡಿರುವ ಪ್ರಯತ್ನವಾಗಿದೆ.
ಮೊದಲನೆಯ ಸಂಪುಟದಲ್ಲಿ ನಿಸರ್ಗ ಮತ್ತು ನಾನು, ನಾಟಕ ಮತ್ತು ನಾನು, ಶಿಕ್ಷಣ ಮತ್ತು ನಾನು ಎಂಬ ಮೂರು ಖಂಡಗಳನ್ನು ಪ್ರಕಟಿಸಿದ್ದಾಗಿದೆ. ಈ ಯಾವತ್ತು ಬರಹವನ್ನು ಮೂರು ಸಂಪುಟಗಳಲ್ಲಿ ಮುಗಿಸುವ ಹಂಬಲ ನನ್ನದು. ಎರಡನೆಯ ಸಂಪುಟದಲ್ಲಿ ಸಾಹಿತ್ಯ ಮತ್ತು ನಾನು, ಲಲಿತಕಲೆ ಮತ್ತು ನಾನು, ವ್ಯವಹಾರ ಮತ್ತು ನಾನು ಎಂಬ ಖಂಡಗಳನ್ನು ಈಗ ಒಪ್ಪಿಸುತ್ತಿದ್ದೇನೆ. ಇವುಗಳನ್ನು ನಿಮ್ಮ ಮುಂದಕ್ಕೆ ಇರಿಸುವ ಕಾಲದಲ್ಲಿ ಹಲವಾರು ಘಟನೆಗಳ ಪುನರಕ್ತಿ ಕಾಣಿಸಬಹುದು. ಹೇಳುವ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳೋ, ಘಟನೆಗಳೋ ಬಂದರೆ, ಅಥವಾ ವಿಷಯಕ್ಕೆ ಬೇಕಾದ ಹಿನ್ನೆಲೆಯನ್ನು ಒದಗಿಸುವಾಗ, ಅವುಗಳು ತಿರುಗಿ ಬಂದರೆ ಹೇಳದೆ ಉಪಾಯವಿಲ್ಲ. ದೀರ್ಘಾವಧಿಯಲ್ಲಿ ನೆನಪಾದಾಗ ಬರೆಯುತ್ತಿರುವ ಈ ಬರಹದಲ್ಲಿ ಬರೆದ ಕೆಲವು ಭಾಗ ಇನ್ನೂ ಅಚ್ಚಾಗಬೇಕಿದೆ. ಕೆಲವನ್ನು ಮುದ್ರಣದ ಕಾಲಕ್ಕೇನೆ ಬರೆಯುವ ಅನಿವಾರ್ಯ ಬಂದಿದೆ. ಬರೆಯುತ್ತ, ಬರೆಯುತ್ತ ಅಥವಾ ಬರೆದ ಅಧ್ಯಾಯಗಳ ಅಚ್ಚನ್ನು ತಿದ್ದುತ್ತ ಮರೆತುಹೋದ ಅಂಶಗಳನ್ನು ತಿರುಗಿ ಸೇರಿಸುವ ಒತ್ತಡವೂ ಕಾಣಿಸಿದೆ. ಇಂಥ ಮರುಕಳಿಕೆಗಳ ವಿಷಯದಲ್ಲಿ ಓದುಗರ ಸಹನೆಯನ್ನು ನಾನು ಯಾಚಿಸಲೇಬೇಕು.
ಈ ಸಂಪುಟದಲ್ಲಿ ಬರುವ 'ಸಾಹಿತ್ಯ ಮತ್ತು ನಾನು' ಎಂಬ ಖಂಡ ಸುಮಾರು ಐದು ದಶಕಗಳ ಕಾಲಕ್ಕಿಂತ ಹೆಚ್ಚಾಗಿ ಲೇಖನ ವೃತ್ತಿ ನಡೆಸಿದ ನನ್ನ ಬರಹಗಳ ಉದ್ದೇಶವನ್ನು ಹಿನ್ನೆಲೆಯನ್ನು ಬದಲಿಸುತ್ತಾ ಸಾಗಿದ ದೃಷ್ಟಿಯನ್ನು ಸಾಕಷ್ಟು ವಿವರಿಸುತ್ತದೆ. ಒಬ್ಬ ಲೇಖಕನ ಗುರಿ ಇನ್ನೊಬ್ಬನದಾಗಬೇಕಿಲ್ಲ. ಒಬ್ಬನ ಜೀವನದ ದೃಷ್ಟಿಯಾಗಲಿ, ಬಗೆಯಾಗಲಿ ಇನ್ನೊಬ್ಬನದಾಗಬೇಕಿಲ್ಲ ಎಂಬುದು ನಮ್ಮ ಗಮನದಲ್ಲಿರಬೇಕಾದ ವಿಷಯ. ನಾನು ನನ್ನ ದೃಷ್ಟಿಯನ್ನು ಹಿನ್ನೆಲೆಯನ್ನು, ಅನುಭವಗಳನ್ನು ತೋಚಿದ ಮಟ್ಟಿಗೆ ಪ್ರಾಮಾಣಿಕವಾಗಿ ನಿಮ್ಮ ಮುಂದಕ್ಕಿರಿಸಲು ಪ್ರಯತ್ನಿಸಿದ್ದೇನೆ. ಅದು ಎಂದೂ ಸಾಹಿತ್ಯವನ್ನು ಕುರಿತ ಕೊನೆಯ ಮಾತಾಗಲಾರದು.
- ಶಿವರಾಮ ಕಾರಂತ
ಪುಟಗಳು: 448
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !