ಪಾಂಡವರು ಗೆದ್ದು ಗೆಲ್ಲಲಿಲ್ಲ, ಕೌರವರು ಸೋತು ಸೋಲಲಿಲ್ಲ. ಇದು ಕುರುಕ್ಷೇತ್ರ ಯುದ್ಧದ ಪರಿಣಾಮ? ಇರಬಹುದು, ಕೌರವರು ಪಾಂಡವರನ್ನು ಪಕ್ಕಕ್ಕಿಟ್ಟು ಸಾಮಾನ್ಯ ಜನರ ದೃಷ್ಟಿಯಲ್ಲಿ ಸ್ಥಿತಿಯನ್ನು ಪರಿಶೀಲಿಸಿದಾಗ, ಅವು ನಮಗೆ ನಮ್ಮದೇ ಪ್ರತಿಬಿಂಬದಂತೆ ಕಾಣುತ್ತವೆ.
ಯುದ್ಧ ಮತ್ತು ಹಿಂಸೆಯೇ ಎಲ್ಲ ಪ್ರಶ್ನೆಗಳಿಗೂ, ಸನ್ನಿವೇಶಗಳಿಗೂ ಉತ್ತರ ಎಂದು ಬಡಿದಾಡುವ ಮನುಜ ರೂಪದ ರಕ್ಕಸರಿಗೆ, ಕೌರವರಂತವರಿಗೆ ಸಿಗುವುದು ನೀರಿಗೆ ಬದಲು ರಕ್ತ, ಔತಣದ ಬದಲು ಕೊಳಕು ನರಮಾಂಸ. ದಾಯಾದಿಗಳ ಕದನದೊಳ್ ಸೋತು ಸತ್ತದ್ದು ಕೇವಲ ಭೀಷ್ಮ, ಕರ್ಣ, ದ್ರೋಣ, ಕೌರವನಲ್ಲ, ಅಥವಾ ಪಾಂಡವರಲ್ಲಿ ಅಭಿಮನ್ಯು, ಘಟೋತ್ಕಚರು ಅಲ್ಲ. ಇಬ್ಬರ ಕಡೆಯಲ್ಲೂ ವಿಧಿ ಹೆಣಗಳ ಗೋಪುರವೇ ಕಟ್ಟಿತ್ತು. ನೀರು ಸಿಗದೇ ಜಿಗುಟು ರಕ್ತ ಸಿಗುತಿತ್ತು. ತಾಯಿ ತನ್ನ ಸತ್ತ ಮಗನನ್ನು ಹುಡುಕಿಕೊಂಡು ಅಥವಾ ಮಗು ತನ್ನ ಸತ್ತ ತಂದೆಯನ್ನು ಶ್ಮಶಾನದಲ್ಲಿ ಹುಡುಕಿಕೊಂಡು ಬರುವ ಆ ದೃಶ್ಯ ಮೂಡಿಸಿ, ನಾವು ಮಾನವರೇ? ಎಂಬ ಪ್ರಶ್ನೆ ಹುಟ್ಟಿ ಹಾಕುತ್ತದೆ. ಇವೆಲ್ಲದರ ಚಿತ್ರಣ ಈ ಅಮೋಘ ನಾಟಕ.
ಕುವೆಂಪು ಪೌರಾಣಿಕ ನಾಟಕ ಬರೆದರೂ ಅದನ್ನು ವರ್ತಮಾನದಲ್ಲಿ ನಡೆಯುತ್ತಿರುವ ಅಥವಾ ಭವಿಷ್ಯದಲ್ಲಿ ಮನುಜರು ಎದರಿಸುವ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದು ಅವರ ಹೆಚ್ಚುಗಾರಿಕೆ. ನಾಟಕ ಕಾವ್ಯಮಯವಾಗಿದ್ದರೂ, ನಾಟಕೀಯ ಸನ್ನಿವೇಶಗಳು ಈ ನಾಟಕವನ್ನು ಇನ್ನೂ ಗಟ್ಟಿ ಮಾಡುತ್ತದೆ. ಒಂದಷ್ಟು ಉದಾಹರಣೆ ಕೊಡುತ್ತೇನೆ.
1. ಭೀಮನು ಅಭಿಮನ್ಯು, ಘಟೋತ್ಕಚರ ಅಂತ್ಯ ಕಾರ್ಯ ಮಾಡುವ ಸಂದರ್ಭದಲ್ಲಿ ದೃತರಾಷ್ಟ್ರ ಮತ್ತು ಗಾಂಧಾರಿಯ ನೋವು ತಿಳಿಯುತ್ತದೆ, ಅಲ್ಲಿಯವರೆಗೂ ಇದ್ದ ಅವನ ಮೊಂಡು ವೀರತನ ನಾಶವಾಗುತ್ತದೆ.
2. ಕೌರವರ ಪಡೆಯ ಒಬ್ಬ ಸೈನಿಕ, ತನ್ನ ಅಂತಿಮ ಕ್ಷಣದಲ್ಲಿ ನೀರನ್ನು ಹರಸಿ ಸಾಯುವ ಪರಿಸ್ಥಿತಿಯಲ್ಲಿದ್ದಾಗ ಯುದಿಷ್ಟಿರ ನೀರು ಕುಡಿಸುತ್ತಾನೆ, ಆ ಸೈನಿಕ ನೀರು ಕುಡಿಸಿದವ ಪಾಂಡವ ಎಂದು ತಿಳಿದಾಗ, ಅಂತಿಮ ಕಾಲದಲ್ಲಿ ತನ್ನ ಸ್ವಾಮಿಗೆ ದ್ರೋಹ ಬಗೆದೆ ಎಂದೆನೆಸಿ ಪ್ರಾಣ ತ್ಯಜಿಸುತ್ತಾನೆ.
3. ಇನ್ನೂ ಭೂಮಿ ತೂಕಕ್ಕೆ ನಿಲ್ಲಬಲ್ಲ ದೃಶ್ಯವೆಂದರೆ ಹತ್ತನೇ ದೃಶ್ಯ. ಇಲ್ಲಿ ಕೃಷ್ಣ, ರುದ್ರನಿಗೆ ಕಲಿಯುಗದಲ್ಲಿ ನಡೆಯುವ ಪ್ರಮುಖ ಘಟನೆಗಳ ದಿವ್ಯದರ್ಶನವನ್ನು ತೋರಿಸುತ್ತಾರೆ. ಆ ದೃಶ್ಯದ ಸಂಭಾಷಣೆ ಮತ್ತು ವಸ್ತು ಭವ್ಯ ಮತ್ತು ಅನಂತ.
ಬಹುಷಃ ನನ್ನ ಮಟ್ಟಿಗೆ ಇದು ಕುವೆಂಪುರವರು ಬರೆದಿರುವ ಶ್ರೇಷ್ಠ ನಾಟಕ. ಕೆಲವು ಪುಸ್ತಕಗಳನ್ನು ಸಮಯವನ್ನು ಕಳೆಯುವದಕ್ಕೆ, ಮನ ಹಗುರಗೊಳ್ಳಿಸುವದಕ್ಕೆ ಓದಿ ಮರೆಯಬಹುದು, ಕೆಲ ಪುಸ್ತಕಗಳನ್ನು ನಾವು ಹೃದಯದಲ್ಲಿ ಆಳವಾದ ಗುಣಿ ತೆಗೆದು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅವು ನಮಗೆ ಅಗ್ಗದ ಬೆಲೆಯಲ್ಲಿ ಸಿಗಬಹುದಾದ ಅನರ್ಘ್ಯ ರತ್ನಗಳು. ಮನಸ್ಸು ಮಾನವೀಯತೆ ಮರೆತು ನಶಿಸಿ ಹೋಗುವ ಸಂದರ್ಭದಲ್ಲಿ ಇಂತಹ ಪುಸ್ತಕಗಳು ನಮ್ಮನ್ನು ಕಾಪಾಡುತ್ತವೆ, ನಮ್ಮನ್ನು ರೂಪಿಸುತ್ತವೆ.
ಈ ನಾಟಕದ ರಂಗಪ್ರಯೋಗಕ್ಕೆ ಸಿಕ್ಕ ಯಶಸ್ಸು ಮತ್ತು ವಿಮರ್ಶೆ, ಮುದ್ರಿತ ರೂಪಕ್ಕೆ ಏಕೋ ಸಿಗಲಿಲ್ಲ. ಈ ಪುಸ್ತಕದ ಬಗ್ಗೆ ವಿಮರ್ಶಕರು, ಓದುಗರು ಚರ್ಚಿಸಿದ್ದು ಕಡಿಮೆಯೇ. ಚರ್ಚಿಸಿ ಬಹಳಷ್ಟು ಮನಗಳನ್ನು ತಲುಪಬಹುದಿತ್ತು. ನಮ್ಮ ಕಿರಿಯರಿಗೆ, ಬರುವ ಚೇತನಗಳಿಗೆ ಮಹಾಭಾರತ ಕಥೆ ಹೇಳುವಷ್ಟೇ ಮುಖ್ಯ, ಅದರ ಪರಿಣಾಮವನ್ನು ವಿವರಿಸುವುದು ಸಹ. ನಮಗೋಸ್ಕರ ಆ ಕಾರ್ಯವನ್ನು ನಮ್ಮ ಮಹಾಕವಿ ಮಾಡಿಕೊಟ್ಟಿದ್ದಾರೆ. ನಾವು ಆ ವಿಚಾರದ ದೀವಿಗೆಯನ್ನು ಸಾಧ್ಯವಾದಷ್ಟು ಮನಗಳಲ್ಲಿ ಹಚ್ಚೋಣ, ಅಂಚೋಣ.