ಬರಹಗಾರರು: ಸತ್ಯೇಶ್ ಬೆಳ್ಳೂರ್
ನಿಮ್ಮ ವೃತ್ತಿ ಜಗತ್ತಿನಲ್ಲಿ ನೀವು ಯಶಸ್ವಿಯಾಗಬೇಕಾದರೆ ನೀವು ನಿಮ್ಮ ಕ್ಷೇತ್ರದಲ್ಲಿ ಬುದ್ಧಿವಂತರಾಗಿದ್ದರಷ್ಟೇ ಸಾಕು ಎನ್ನುವ ನಂಬಿಕೆ ಕೆಲವು ದಶಕಗಳ ಹಿಂದೆ ಬಲವಾಗಿತ್ತು. ಆರ್ಥಿಕ ಜಾಗತೀಕರಣ ಮತ್ತು ಇಂಟರ್‌ನೆಟ್ ಕ್ರಾಂತಿಯ ಈ ದಿನಗಳಲ್ಲಿ ಆ ನಂಬಿಕೆ ಎಷ್ಟು ಹುಸಿಯೆಂಬುದು ನಮಗೆ ಅರಿವಾಗಿದೆ. ಬುದ್ಧಿಮತ್ತೆ (ಐಕ್ಯೂ) ಇದ್ದರಷ್ಟೇ ಸಾಲದು; ನಿಮ್ಮ ವೃತ್ತಿ ಜಗತ್ತಿನಲ್ಲಿ ಗೆಲ್ಲಲು ಭಾವಮತ್ತೆ (ಈಕ್ಯೂ - ಎಮೋಷನಲ್ ಕೋಷಂಟ್/ಎಮೋಷನಲ್ ಇಂಟೆಲಿಜೆನ್ಸ್) ಕೂಡ ಅಷ್ಟೇ ಬಲವಾಗಿ ಬೇಕು ಮತ್ತು ಅದರ ಮಹತ್ವ ವೃತ್ತಿಕ್ಷೇತ್ರದ ತಾಂತ್ರಿಕ ಪರಿಣತಿಗಿಂತಲೂ ಹೆಚ್ಚಿನದು ಎನ್ನುವುದನ್ನು ನಾವೀಗ ಸ್ಪಷ್ಟವಾಗಿ ಕಂಡುಕೊಂಡಿದ್ದೇವೆ.
ಸತ್ಯೇಶರ ಈ ಪುಸ್ತಕದ ಬಹುಪಾಲು ಲೇಖನಗಳು ಈ ರೀತಿಯ ಭಾವಮತ್ತೆಗೆ ಸೇರಿದ್ದು. ಬಾಂಗ್ಲಾದ ಒಬ್ಬ ಗ್ರಾಹಕನೊಂದಿಗೆ ವ್ಯವಹರಿಸುವಾಗಿನ ಚತುರತೆ ಇಸ್ರೇಲಿನ ಗ್ರಾಹಕನೊಂದಿಗೆ ವ್ಯವಹರಿಸುವಾಗ ಕೆಲಸಕ್ಕೆ ಬರುವುದಿಲ್ಲ. ನಿಮ್ಮೆದುರಿನ ವ್ಯಕ್ತಿಯ ಸಾಂಸ್ಕೃತಿಕ ಮತ್ತು ವೈಯಕ್ತಿಕ ಹಿನ್ನೆಲೆಯ ಆಧಾರದ ಮೇಲೆ ನಿಮ್ಮ ವ್ಯವಹಾರದ ಮತ್ತು ಸಂವಹನದ ನೀತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಒಂದೇ ವಿಧಾನ ಎಲ್ಲರೊಂದಿಗೆ ಕೆಲಸಕ್ಕೆ ಬರುವುದಿಲ್ಲ. ಈ ಮಾತನ್ನು ಸತ್ಯೇಶರು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಮತ್ತು ಅನುಭವ ದೃಷ್ಟಾಂತಗಳೊಂದಿಗೆ ಚೆನ್ನಾಗಿ ತಿಳಿಸಿದ್ದಾರೆ.
ಮ್ಯಾನೆಜ್ಮೆಂಟ್ ಕುರಿತ ಪುಸ್ತಕಗಳು ಕನ್ನಡದಲ್ಲಿ ಕಡಿಮೆ ಇರುವಾಗ ಇದು ಒಂದು ಮಹತ್ವದ ಪ್ರಯತ್ನವಾಗಿದೆ.