ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಹಿಮಪರ್ವತವೊಂದರಲ್ಲಿ ವಿಮಾನ ದುರಂತಕ್ಕೆ ಒಳಗಾಗುತ್ತೆ. ಬದುಕುಳಿದ ಕೆಲವರು ಸತ್ತ ತಮ್ಮ ಜೊತೆಗಾರರ ಹೆಣವನ್ನೇ ತಿಂದು ಬದುಕುವ ಸ್ಥಿತಿ ಬರುತ್ತೆ. ತಿಂಗಳುಗಟ್ಟಲೇ ಇದರಲ್ಲಿ ಉಳಿಯಬೇಕಾಗಿ ಬಂದರೂ ಬದುಕುವ ಹಟ ಹೊತ್ತು ಅಲ್ಲಿಂದ ಪಾರಾಗಿ ಬಂದ ನ್ಯಾಂಡೊ ಪೆರಾಡೊ ಅವರ ಕತೆಯನ್ನು ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ ಸಂಯುಕ್ತ ಪುಲಿಗಲ್. ಸ್ಪೂರ್ತಿ ತುಂಬುವ ಈ ಕತೆ ಒಮ್ಮೆ ಓದಿ. ಒಮ್ಮೆ ಹಿಡಿದರೆ ಮುಗಿಸದೇ ಏಳಲು ಆಗದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತೆ.
ಬರಹಗಾರ್ತಿಯ ಮಾತು:
ಅದೊಂದು ದಿನ ಕಂಪ್ಯೂಟರ್‍ನಲ್ಲಿ ಮುಖ ಹುದುಗಿಸಿಕೊಂಡು ಕೆಲಸದಲ್ಲಿ ತೊಡಗಿದ್ದ ನನ್ನ ಮುಂದೆ ನೀಲಿ ಬಣ್ಣದ ಪುಸ್ತಕವೊಂದನ್ನು ಹಿಡಿದು, “ಈ ಪುಸ್ತಕವನ್ನು ಓದಿ ನೋಡು” ಎಂದದ್ದು ನನ್ನ ಗಂಡ. “Miracle in the Andes”ಎಂಬ ಪುಸ್ತಕ. ಆ ದಿನ ಸುಮ್ಮನೆ ತಿರುವಿ ನೋಡುವ ಎಂದು ತೆರೆದ ಪುಸ್ತಕವನ್ನು ಓದಿ ಮುಗಿಸುವವರೆಗೂ ಕೆಳಗಿಡಲು ಸಾಧ್ಯವಾಗಲೇ ಇಲ್ಲ. ಪುಸ್ತಕವನ್ನು ಓದುತ್ತಾ ಅದರ ಭಾವಲಹರಿಯಲ್ಲಿ ಲೀನವಾಗಿ ಹೋದ ನನಗೆ ಅದರ ಬಗ್ಗೆ ಬರೆಯಲೇಬೇಕು ಎನಿಸಿತ್ತು. ಓದುತ್ತಾ ಹೋದಂತೆ, ಅತ್ಯಂತ ಸರಳವಾದ ನಿರೂಪಣೆಯೊಂದಿಗೆ ಈ ಕಥಾನಕವು ಬದುಕಿನಾಳದ ಸತ್ಯಗಳನ್ನು ಶೋಧಿಸುವ ಸಾಧನವಾಗಿ ಕಂಡುಬಂದಿತ್ತು. ತನ್ನಿಂದ ತನ್ನದೆಲ್ಲವನ್ನೂ ಕಸಿದುಕೊಂಡ ಬದುಕನ್ನು ಹಿಂದೊಮ್ಮೆ ದ್ವೇಷಿಸಿದ್ದ ವ್ಯಕ್ತಿಯೊಬ್ಬ ಇಂದು ಅದೇ ಬದುಕಿನತ್ತ ಅಗಾಧ ಪ್ರೇಮವನ್ನು ಬೆಳೆಸಿಕೊಂಡದ್ದು, ಪ್ರೀತಿ-ಪ್ರೇಮಗಳಿಂದಲೇ ಬದುಕನ್ನು ಆಪ್ತವಾಗಿಸಿಕೊಂಡದ್ದರ ಕಥೆಯು ನನ್ನ ಬದುಕಿನ ಹುಡುಕಾಟಕ್ಕೆ ಹತ್ತಿರವೆನಿಸಿತ್ತು. ಅತ್ಯಂತ ಪ್ರಾಮಾಣಿಕವಾಗಿ ನಡೆದ ಘಟನೆಯ ವಿವರಗಳನ್ನು ನೀಡುತ್ತಲೇ, ನ್ಯಾಂಡೊ ಪರಾಡೊರವರು ಬದುಕಿನ ಪಾಠಗಳನ್ನು, ಆ ಪಾಠಗಳಿಂದ ಅವರು ಅನುಭವಿಸಿ ಅರಿತ ಆಧ್ಯಾತ್ಮಿಕ ಹೊಳಹುಗಳನ್ನು ಸರಳವಾಗಿ ನಮಗೆ ತಿಳಿಸುತ್ತಾ ಹೋಗುತ್ತಾರೆ. ಭಯ, ಆತಂಕ, ದುಃಖಗಳಿಂದ ಪ್ರಾರಂಭವಾಗುವ ಕಥೆ ಬೆಳೆಯುತ್ತಾ ಹೋದಂತೆ ಸುಖ, ಶಾಂತಿ, ನೆಮ್ಮದಿ, ಪ್ರೀತಿಗಳ ಕೇಂದ್ರವಾಗಿ ಮಾರ್ಪಡುತ್ತಾ ಜೊತೆಗೆ ನಮ್ಮನ್ನೂ ರೂಪಾಂತರಗೊಳಿಸುತ್ತದೆ. ಬದುಕನ್ನು ಪ್ರೀತಿಸುವ ಮತ್ತು ಅದರ ಸಾಧ್ಯತೆಗಳನ್ನು ಅರಿಯಬಯಸುವ ಪ್ರತಿಯೊಬ್ಬರೂ ಓದಬೇಕಾದ ಈ ಕಥಾನಕವನ್ನು ನನ್ನ ಭಾಷೆಯಲ್ಲಿ ತರ್ಜುಮೆ ಮಾಡಲೇಬೇಕು ಎನಿಸಿ, ಈ ಭಾಷಾಂತರದ ಪ್ರಯತ್ನವನ್ನು ಮಾಡಿದ್ದೇನೆ. ನನ್ನಂತೆ ಇನ್ನಷ್ಟು ಸ್ನೇಹಿತರು ಇದರಿಂದ ರೋಮಾಂಚನಗೊಂಡರೆ ಅದರಷ್ಟು ಸಮಾಧಾನ ಇನ್ನೊಂದಿಲ್ಲ. ಇದೊಂದು ಓದಲೇಬೇಕಾದ, ಸಾರ್ಥಕ ಕಥೆ. ಓದಿ, ನಿಮ್ಮನಿಸಿಕೆ ಹಂಚಿಕೊಳ್ಳಿ.
-ಸಂಯುಕ್ತಾ ಪುಲಿಗಲ್
ಪುಟಗಳು - 280
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !