ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
1920ರಲ್ಲಿ ಬರ್ಮಾದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುವ ಬಾಂಬೇ ಬರ್ಮಾ ಟ್ರೇಡಿಂಗ್ ಕಾರ್ಪೊರೇಷನ್ಗೆ ಬಿಲ್ಲಿ ವಿಲಿಯಮ್ಸ್ ಎಂಬ ಬ್ರಿಟಿಷ್ ಹುಡುಗನೊಬ್ಬ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅವನು ಅದಕ್ಕೂ ಮುನ್ನ ಬ್ರಿಟಿಷ್ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡಿದವನು. ತೇಗದ ದಿಮ್ಮಿಗಳನ್ನು ಸಾಗಿಸಿ ನದಿಗೆ ತಳ್ಳುವ ಆನೆಗಳ ಸನಿಹದ ಸಹವಾಸಕ್ಕಾಗಿ ಅವನು ಈ ನೌಕರಿಯನ್ನು ಆಯ್ದುಕೊಂಡಿರುವುದು. ಅದನ್ನು ಅವನು ಉದ್ದೇಶಪೂರ್ವಕವಾಗಿ, ತನ್ನ ಬದುಕಿನ ಗುರಿ, ಅರಿವಿನ ದಾರಿಯನ್ನಾಗಿಸಿಕೊಂಡವನು.
ಆನೆಗಳ ಬಗ್ಗೆ ಅವನಿಗೆ ತೀರದ ಕುತೂಹಲ, ಪ್ರೀತಿ. ಅವುಗಳ ಒಡನಾಟ ಅವನಿಗೆ ಬಹಳಷ್ಟನ್ನು ಕಲಿಸುತ್ತದೆ. ದಿಮ್ಮಿಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿರುವ ಈ ಬೃಹತ್ ಜೀವಿಗಳಲ್ಲಿ ಇರುವ ಸ್ನೇಹಪರತೆ, ಬುದ್ಧಿವಂತಿಕೆ, ತಮಾಷೆ, ಪ್ರೀತಿಯ ಅರಿವು ಅವನಿಗೆ ಅವುಗಳ ಸಹವಾಸದಲ್ಲಿ ಆಗುತ್ತದೆ. ಮುಂದೆ ಇದೇ ಆನೆಗಳು ಬಿಲ್ಲಿ ವಿಲಿಯಮ್ಸ್ನ ಬದುಕಿನಲ್ಲಿ ಬೇರೆ ಮಾಡಲಾಗದಂತೆ ಹೆಣೆದುಕೊಳ್ಳುತ್ತವೆ; ಅವನು ಸಹ ಅವುಗಳ ಜೀವ, ಜೀವನಕ್ಕೆ ಹಲಬಗೆಯಲ್ಲಿ ನೆರವಾಗುತ್ತಾನೆ. ಇದು ಒಂದು ಬಗೆಯಲ್ಲಿ ಬಿಲ್ಲಿ ವಿಲಿಯಮ್ಸ್ನ ಜೀವನಚರಿತ್ರೆ; ಇನ್ನೊಂದು ರೀತಿಯಲ್ಲಿ ಗಜಸಂಹಿತೆ.
ಓದುಗರಿಗೆ ಗೊತ್ತಿಲ್ಲದ ಆನೆಗಳ ಕುರಿತ ವಿವರಗಳು ಪುಸ್ತಕದುದ್ದಕ್ಕೂ ಬರುತ್ತವೆ. ಲೇಖಕಿ ವಿಕಿ ಕ್ರುಕ್ ಇಂಗ್ಲಿಷ್ನಲ್ಲಿ ಬರೆದ ‘ಎಲಿಫಂಟ್ ಕಂಪನಿ’ ಎಂಬ ಪುಸ್ತಕವನ್ನು ರಾಜಶ್ರೀ ಕುಳವರ್ಮ ಕನ್ನಡಕ್ಕೆ ‘ಬಂಡೂಲ’ ಎಂಬ ಹೆಸರಿನಲ್ಲಿ ತಂದಿದ್ದಾರೆ. ತುಂಬ ಕುತೂಹಲಕರ, ಆಸಕ್ತಿಕರ ಆನೆಗಳ ಕಥನ ಇದರಲ್ಲಿದೆ. ಈ ಅನುವಾದ ರಾಜಶ್ರೀ ಅವರ ಮೊದಲ ಅನುವಾದ. ಅದು ಭಿನ್ನ ಧಾಟಿಯನ್ನು ತಳೆದಿರುವ, ವಿಶಿಷ್ಟ ದಾರಿಯನ್ನು ತುಳಿದ ಅನುವಾದವೂ ಹೌದು. ಕನ್ನಡದಲ್ಲಿ ಸಾಧನೆಯ ತುತ್ತೂರಿ ಊದುವ ಆತ್ಮಕತೆ, ಜೀವನಚರಿತ್ರೆಗಳನ್ನು ಓದಿದವರಿಗೆ ಈ ಪುಸ್ತಕ ಕೊಂಚ ಬದಲಾವಣೆ ತರಬಲ್ಲದು; ಬೇರೆ ರುಚಿಯನ್ನು ಕೊಡಬಹುದು. ಏಕೆಂದರೆ ಈ ಜೀವನಚರಿತ್ರೆ ವ್ಯಕ್ತಿಕೇಂದ್ರಿತ ಅಲ್ಲ; ಅದು ಹಲವು ಜೀವಿಗಳನ್ನು ಒಳಗೊಂಡ ಸಮೂಹಕೇಂದ್ರಿತ ಬರವಣಿಗೆಯಾಗಿದೆ.
- ಸಂದೀಪ್ ನಾಯಕ, ಪ್ರಜಾವಾಣಿ ವಿಮರ್ಶೆ (https://www.prajavani.net/artculture/book-review/eliphant-life-story-571815.html)
ಪುಟಗಳು: 448
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !