ಒಂದು ಕಾಲವಿತ್ತು, ನಾಯಿ ಮುಟ್ಟಿಸಿಕೊಂಡರೂ ಸೂತಕವಿಲ್ಲ ಆದರೆ ಬ್ರಾಹ್ಮಣನನ್ನು ಅನ್ಯಜಾತಿಯವರು ಮುಟ್ಟಿದರೆ, ಸೂದ್ರನ ದೇಹ ಕ್ಷತ್ರಿಯನನ್ನು ಸ್ಪರ್ಶಿಸಿದರೆ ಅದು ಮಹಾಪಾಪವೆಂಬ ಕಾಲ. ಸಾರ್ವಜನಿಕ ಕೆರೆ ಕಟ್ಟೆ ಬಾವಿಗಳಲ್ಲಿ ಕೀಳು ಜಾತಿಯವರು ನೀರು ಮುಟ್ಟಿದ್ದಕ್ಕೆ, ಬಾಯಾರಿಕೆಯಾಗಿ ನೀರು ಕುಡಿದದ್ದಕ್ಕೆ ರಕ್ತದ ಕೋಡಿಯನ್ನೇ ಹರಿಸಿದ ಕಾಲ. ಆದರೆ 21 ನೆ ಶತಮಾನದ ಸಮಾಜದಲ್ಲಿ ಸಮಾನತೆಯ ದೃಷ್ಟಿಕೋನ ಬಹಳಷ್ಟು ಬದಲಾಗಿದೆ. ಮೇಲು ಕೀಳೆಂಬ ಭೇದಭಾವ ತೊಲಗಿ, ಮನುಶ್ಯರೆಲ್ಲರೂ ಒಂದೇ ಎಂಬ ಭಾವನೆ ಕೆಲವೆಡೆ ಕಂಡು ಬರುತ್ತಿದೆ. ಆದರೂ ಇಂದಿಗೂ ಸಹ ಭಾರತದ ಬಹುತೇಕ ಹಳ್ಳಿ ಪೇಟೆಗಳಲ್ಲಿ ಮೇಲು ಕೀಳೆಂಬ ಭೇದಭಾವ ಆಲದ ಮರದಂತೆ ಬೇರು ಬಿಟ್ಟು ನಿಂತಿದ್ದು, ದಲಿತ ದಮನಿತರ ಬಾಳಿಗೆ ಹಗೆಯನ್ನು ಬಗೆಯುತ್ತಿರುವುದು ಬಹಳ ವಿಸಾದಕರ ಸಂಗತಿ. ಅಂದಿಗೂ ಇಂದಿಗೂ ಮುಟ್ಟಿಸಿಕೊಳ್ಳದವನು ಮುಟ್ಟಿಸಿಕೊಳ್ಳದವನಾಗಿಯೇ ಇದ್ದಾನೆ. ನೀವು ಕೊಂದ ಜನರು ಮತ್ತು ಇತರೆ ಕವಿತೆಗಳು ಶೀರ್ಷಿಕೆಯ ಕವನ ಸಂಕಲನದಲ್ಲಿ ಕೆಲವು ಸೌಂದರ್ಯಾರಾದನೆಯ ಕವನಗಳನ್ನು ಒರತುಪಡಿಸಿ ಬಹುತೇಕ ಕವಿತೆಗಳು ದೀನ ದಲಿತರ, ದಮನಿತರ, ರೈತರ, ಕೂಲಿಕಾರರ, ಹಿಂದುಳಿದ ವರ್ಗದವರ ಶೋಷಿತ ಬದುಕಿನ ಕುರಿತು, ಅವರ ಬದುಕಿನ ದಾರುಣ ವ್ಯತೆಯ ಕತನಗಳನ್ನು ಚಿತ್ರಿಸುವ ಕಾವ್ಯ ಸಾರಾಂಶವನ್ನು ಒಳಗಿಂಡಿದೆ. ಇಲ್ಲಿ ಬರೆದಿರುವ ಕವಿತೆಗಳ ಒಳನೋಟದ ವಿಷಯಾನುಸಾರವು ಬಲಿಷ್ಠ ಜನರ ವಿರುದ್ಧ ಕ್ರಾಂತಿಕಾರಕ ಹೋರಾಟವನ್ನು ಪ್ರತಿಬಿಂಬಿಸುವ, ಸಮಾಜದಲ್ಲಿ ನಡೆಯುತ್ತಿರುವ ಅಸಮಾನ್ಯತೆಯನ್ನು ಎತ್ತಿ ತೋರಿಸುವ, ನೊಂದವರ ನೋವನ್ನು ಅನಾವರಣಗೊಳಿಸುವ ತಾತ್ವಿಕ ಬುನಾದಿಯಾಗಿದೆ. ಎಲ್ಲಿಯವರೆಗೆ ಮನುಶ್ಯ ಮನುಶ್ಯನನ್ನು ಸಮಾನ ಮನಸ್ಸಿನಿಂದ ನೋಡುವುದಿಲ್ಲವೋ ಅಲ್ಲಿಯವರೆಗೆ ದೀನ ದಲಿತರ, ದಮನಿತರ ಶೋಷಣೆ ತಪ್ಪಿದ್ದಲ್ಲ. ಅದಕ್ಕೆ ಈ ಕವಿತೆಗಳೇ ಸಾಕ್ಷಿ.