ನಾ. ಮೊಗಸಾಲೆಯವರ ಕಾದಂಬರಿ ‘ಪ್ರಕೃತಿ’ (ಪ್ರ.ಮು.೧೯೮೨) ಕಾರವಾರ ಮತ್ತು ಕಾರ್ಕಳ ಪರಿಸರದಲ್ಲಿ ಇದರ ಘಟನಾವಳಿಗಳು ನಡೆಯುತ್ತವೆ. ನಿರೂಪಕನಾದ ಪಾಟೀಲ ಒಬ್ಬ ಕಾದಂಬರಿಕಾರ (‘ನನ್ನದಲ್ಲದ್ದು’ ಕಾದಂಬರಿಯ ನಿರೂಪಕನೂ ಲೇಖಕನೇ) ಹಾಗೂ ಕಾಲೇಜು ಅಧ್ಯಾಪಕ. ಕಾರ್ಯಕ್ರಮದ ನಿಮಿತ್ತ ಕಾರವಾರಕ್ಕೆ ಹೋದಾಗ ಅಲ್ಲಿನ ಕಾಲೇಜು ಅಧ್ಯಾಪಕಿ ಶೀಲಾ ಹಾಗೂ ಅವಳ ತಂದೆ ಶ್ರೀನಿವಾಸ ಕಾರಂತರ ಪರಿಚಯವಾಗುತ್ತದೆ. ಆಕೆಯ ತಂದೆ ಗಣಿತ ಅಧ್ಯಯನಾಸಕ್ತ. ಶೀಲಾಳ ಯೌವನಭರಿತ ವಯಸ್ಸಿನಲ್ಲೇ ಆಕೆಯ ಗಂಡ ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆಕೆಯ ತಂದೆ ವೃತ್ತಿ ಜೀವನ ನಡೆಸಿದ್ದೆಲ್ಲಾ ಮುಂಬಯಿಯಲ್ಲಿ. ಕೊನೆಯಲ್ಲಿ ದುಡಿದದ್ದು ಸಾಕೆನ್ನಿಸಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಗಳಿಗೆ ಕಾರವಾರದಲ್ಲಿ ಕೆಲಸ ಸಿಕ್ಕಿದ್ದರಿಂದ ಇಲ್ಲಿಗೇ ಬಂದು ನೆಲೆಸಿರುತ್ತಾನೆ.
ಪರಿಚಯದಿಂದ ನಿರೂಪಕನ ಆಸಕ್ತಿ ಕ್ರಮೇಣ ಶೀಲಾಳತ್ತ ಬೆಳೆಯುತ್ತದೆ. ಅವಳೇ ಮೇಲೆ ಬಿದ್ದು ಒಮ್ಮೆ ದೇಹಸಂಬಂಧವನ್ನು ಬೆಳೆಸುತ್ತಾಳೆ. ಅನಂತರ ಇವನ ಬಗ್ಗೆ ಅನಾಸಕ್ತಳಾಗುತ್ತಾಳೆ. ಅನಂತರ ತಿಳಿದು ಬರುವುದೇನೆಂದರೆ ಆಕೆ ಆ ಮೊದಲೇ ತನ್ನ ವಿದ್ಯಾರ್ಥಿ ಅಶೋಕನೊಂದಿಗೆ ಹಾಗೂ ಮತ್ತೊಬ್ಬರೊಂದಿಗೆ ಹಾಗೆ ಸಂಗಸುಖ ಪಡೆದು ದೂರವಾಗಿರುತ್ತಾಳೆ ಎಂಬುದು.
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !