ಶ್ರೀ ಕುವೆಂಪು ಮತ್ತು ಶ್ರೀ ರಾಮಾಯಣದರ್ಶನಂ ಬಗೆಗಿನ ಒಂಬತ್ತು ಲೇಖನಗಳು.
ಶ್ರೀ ಕುವೆಂಪು ಅವರ ಕೃತಿಗಳನ್ನು ಕುರಿತು, ಅದರಲ್ಲೂ ಶ್ರೀ ರಾಮಾಯಣ ದರ್ಶನಂ ಕುರಿತು ಈತನಕ ಬಂದ ನನ್ನ ಲೇಖನಗಳನ್ನಿಲ್ಲಿ ಒಂದೆಡೆ ಕೂಡಿಸಿರುವೆ. ಶ್ರೀ ರಾಮಾಯಣದರ್ಶನಂ ಕೃತಿ ಕುರಿತ ನನ್ನ ಮೊದಲ ಲೇಖನವೂ (೧೯೫೪ ಜನವರಿ) ಸೇರಿದಂತೆ ಇದರಲ್ಲಿ ಒಟ್ಟು ಒಂಬತ್ತು ಲೇಖನಗಳಿವೆ. ೨೫ ವರ್ಷದ (೧೯೫೪-೭೯) ಅವಧಿಯಲ್ಲಿ ಬಂದಿರುವ ಈ ಬರಹಗಳಲ್ಲಿ ಒಂದೆ ಹದವಿಲ್ಲದಿರಬಹುದು. ಕೆಲವೊಂದು ಭಾವ ಭಾವನೆಗಳು ಮರುಕಳಿಸಿಯೂ ಇವೆ. ಲೇಖನಗಳೂ ತುಂಬ ಲಂಬಿಸಿ ಬಳಲಿಸಿರಬಹುದು. ಈ ಎಲ್ಲ ಮಿತಿಗಳಿದ್ದು ಏನಾದರೂ ಒಟ್ಟಾರೆ ಈ ಬರೆಹಗಳಿಂದ ಶ್ರೀ ಕುವೆಂಪು ಕೃತಿ ಸಮೀಕ್ಷಣೆ ದೊರೆತಿದೆಯೆ ನಾನು ಹೇಳಬರದು. ದೊರೆತಿದ್ದರೆ ಧನ್ಯ. ಇಲ್ಲವಾದರೆ ಹೊಸ ಶ್ರದ್ಧೆಯಿಂದ ಕವಿಕೃತಿಗಳನ್ನು ಮತ್ತೆ ಮನನ ಮಾಡುವೆ ; ಅದರಿಂದೇನೂ ಹೆಚ್ಚು ಆಳವಾದ ಅರ್ಥಶೋಧನ ಆಗದಿರಬಹುದು. ನನ್ನಿಂದಾಗದಿದ್ದರೆ ಆಗಬೇಕಾದ ಹಾದಿಯಾದರೂ ಹದವಾದೀತು. ಯಾವೊಬ್ಬ ದೊಡ್ಡ ಕೃತಿಕಾರನ ಎಲ್ಲಾ ಕೃತಿಗಳನ್ನೂ ಯಾರೊಬ್ಬ ವಿಮರ್ಶಕನೆ ಪೂರೈಸಿದೆನೆಂದು ಹೆಮ್ಮೆ ಪಟ್ಟುಕೊಳ್ಳಬೇಕಾಗಿಲ್ಲ. ಅದು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಕೃತಿಗಳನ್ನೆ ಓದದೆ ವಿಮರ್ಶೆ ಮಾಡುವ ಹವ್ಯಾಸ ಹೆಚ್ಚುತ್ತಿರುವ ಹೊತ್ತಿನಲ್ಲಿ ಸಿದ್ಧ ಕವಾಟದಲ್ಲಿ ಎಂಥ ದೊಡ್ಡ ಲೇಖಕನನ್ನು ಕೂಡಿಟ್ಟು ಬೀಗಮುದ್ರಿಸುವುದು ಸುಲಭವೆನಿಸುತ್ತಿದೆ. ಶ್ರೀ ಕುವೆಂಪು ಶ್ರೀ ಪುತಿನ ಅವರಂಥ ಸ್ವೋಪಜ್ಞ ಕವಿಗಳಿಗೆ ಇದರಿಂದ ಹೆಚ್ಚು ಅಪಚಾರವಾಗಿದೆ. ಮಿಗಿಲಾಗಿ ಕನ್ನಡ ಸೃಜನಕ್ರಿಯೆ ನಿಜಕ್ಕೂ ಪಡೆದುಕೊಳ್ಳಬಹುದಾಗಿದ್ದು ಹೊಸ ಉಡ್ಯಾಣ ಇದರಿಂದಾಗಿ ತಪ್ಪಿದಂತಾಯಿತು. ಇದರ ದುರಂತದ ಅರಿವು ಇಂದಲ್ಲ ನಾಳೆ ಕನ್ನಡ ಬರಹಕ್ಕೆ ಬಂದೀತು. ನಾವೀಗ ಹೆಚ್ಚು ಪೂಜಿಸುತ್ತಿರುವುದು ಬೌದ್ಧೀಕರಿಸಿದ ರಾಗದ್ವೇಷ. ಮಿತವಾದ ಉದ್ರೇಕಗಳನ್ನು ಪ್ರಜಾಪ್ರಭುತ್ವ ಎಲ್ಲರಲ್ಲೂ ಸಮಾನತೆಯ ಅರಿವನ್ನು ಹೊಸದಾಗಿ ಮೂಡಿಸಲು ಸಹಾಯಕವಾದಂತೆ ಚುನಾವಣೆಗಳು ಬಹುತೇಕರಲ್ಲಿ ಆಳ್ವ ವ್ಯಸನಗಳನ್ನು ಹೆಚ್ಚು ಕೆರಳಿಸಿದವು. ಅವು ಬೆಳೆಯುತ್ತ ಹೇಗಾದರೂ ಆಳಬೇಕೆಂಬ, ಅದಕ್ಕಾಗಿ ಪಂಥಕಟ್ಟಬೇಕೆಂಬ, ತಂತ್ರ ಹೂಡಬೇಕೆಂಬ ಹಾದಿಗಳೂ ಕಂಡುಕೊಂಡವು. ಸಾಹಿತ್ಯ ಲೋಕದಲ್ಲಾದರೂ ಅದು ಬೇರೊಂದು ಹದದಲ್ಲಿ ಮೊಳಗುತ್ತಿದೆ. ಇದನ್ನು ಮೊದಲು ಬರಹಗಾರರು ದಾಟಿಕೊಳ್ಳದಿದ್ದರೆ ಉಳಿದ ಲೋಕವಾದರೂ ಏನುಮಾಡೀತು ?
ಈ ನನ್ನ ಬರೆಹಗಳು ಮುಂದೆ ಶ್ರೀ ಕುವೆಂಪು ಕೃತಿ ಕುರಿತು ಮಾಡಬೇಕಾದ ಆಳ ವ್ಯವಸಾಯದ ಮೊದಲುಕ್ಕೆಯ ಹರಿಬವೆಂಬ ಅರಿವುಂಟು ನನಗೆ. ಈ ಶತಮಾನದ ಸಂಧ್ಯೆಹೊತ್ತಿಗೆ ಅವರ ಪ್ರಧಾನ ಕೃತಿಗಳ ಮಹದನುಭವ ಪ್ರಾರಂಭವಾದೀತೆಂಬುದು ನನ್ನ ತಿಳಿವಳಿಕೆ. ಆ ಹಾದಿಯಲ್ಲಿ ನಾನಾದರೂ ನಡೆಯಬೇಕಾದ ದೂರವುಂಟು. ಈ ಬರಹಗಳಿಗೆ ಬರಬಹುದಾದ ಪ್ರತಿಕ್ರಿಯೆ ಆ ಕಾರ್ಯವನ್ನು ಪುಟಗೊಳಿಸಬಹುದು.
ಹೇಗಾದರಿರಲಿ, ಈ ಎಲ್ಲ ಲೇಖನಗಳನ್ನು ಪ್ರಕಟಿಸಲು ಮನಸ್ಸುಮಾಡಿ ನಾಲ್ಕೈದು ವರ್ಷದಿಂದ ನೆನಪುಮಾಡುತ್ತಿದ್ದ ಮಾನ್ಯ ಗುರುಗಳಾದ ಪ್ರೊII ದೇಜಗೌ ಅವರಿಗೂ, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನವರಿಗೂ, ತುಂಬ ಬೇಗನೆ ಆದಷ್ಟೂ ತಪ್ಪಿಲ್ಲದಂತೆ ಚೆನ್ನಾಗಿ ಮುದ್ರಿಸಿರುವ ಶ್ರೀ ಮೀರಾ ಪ್ರಿಂಟರ್ಸ್ ಮಾಲೀಕರಿಗೂ, ಅಲ್ಲಿನ ಕಾರ್ಮಿಕ ಬಂಧುಗಳಿಗೂ ಋಣಿಯಾಗಿರುವೆ. ವಂದನೆಗಳು.
ಪುಟಗಳು: 315
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !