ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ
Publisher: Centre for Agricultural Media
ಥಾಯ್ಲೆಂಡಿನ ಬಾನ್ ಮಾಯ್ ಜೋ ಹಳ್ಳಿಯ ಸಮೀಪದಲ್ಲಿರುವ ಪನ್ ಪನ್ ಸೆಂಟರ್ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕಿನ ಅನನ್ಯ ಕೇಂದ್ರ. ದೇಸಿ ಬೀಜ ಸಂರಕ್ಷಣೆ, ನೈಸರ್ಗಿಕ ಮನೆ, ಯುಕ್ತ ತಂತ್ರಜ್ಞಾನಕ್ಕೆ ಒತ್ತು. "ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?" ಎನ್ನುತ್ತ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವ ಜಾನ್ ಜಾನ್ಡಾಯ್, ಜೋ ಎಂದೇ ಹೆಸರುವಾಸಿ. ಮಣ್ಣಿನ ಮನೆಗಳ ನಿರ್ಮಾಣ ಕಲೆಯಲ್ಲಿ ಪರಿಣಿತ. ‘ಒಂದು ಹುಲ್ಲಿನ ಕ್ರಾಂತಿ’ಯ ಮಸನೊಬು ಫುಕುವೊಕ ನಮ್ಮ ಕೃಷಿ ಹಾಗೂ ಬದುಕಿಗೆ ಹೊಸ ದೃಷ್ಟಿ ನೀಡಿದ ಹಾಗೆ ಜೋ ಕೂಡ ನೆಮ್ಮದಿಯ ಜೀವನಕ್ಕೆ ಸರಳ ಸೂತ್ರಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅದರಂತೆ ಬದುಕುತ್ತಿದ್ದಾರೆ. ಸದ್ದಿಲ್ಲದೆ ಜಗತ್ತೇ ಅವರತ್ತ ನೋಡತೊಡತೊಡಗಿದೆ.
ಥಾಯ್ಲೆಂಡಿನ ಉತ್ತರಕ್ಕೆ ಮಾಯ್ ತಾಂಗ್ ಪ್ರಾಂತ್ಯದ ಬಾನ್ ಮಾಯ್ ಜೋ ಹಳ್ಳಿಯ ಹೊರವಲಯದಲ್ಲಿನ ಪನ್ ಪನ್ ಸೆಂಟರ್ ಜೀವ ವೈವಿಧ್ಯದ ತಾಣವಷ್ಟೇ ಅಲ್ಲ; ಅದೊಂದು ಸುಂದರ ಸಾವಯವ ತೋಟ ಹಾಗೂ ಸುಸ್ಥಿರ ಬದುಕಿನ ಕಲಿಕಾ ಕೇಂದ್ರ. ಪನ್ ಪನ್ ಎಂದರೆ ಥಾಯ್ ಭಾಷೆಯಲ್ಲಿ ‘ಸಾವಿರಾರು ತಳಿಗಳು’ ಎಂಬರ್ಥವಿದೆ. ಇದರ ಸ್ಥಾಪಕ ಜಾನ್ ಜಾನ್ಡಾಯ್ (ಜೋ) ಸ್ವಾವಲಂಬನೆ ದಾರಿ ಸಾಧಿಸುವ ಹತ್ತಾರು ಮಾದರಿಗಳನ್ನು ಕಟ್ಟಿದ್ದಾರೆ; ಕಟ್ಟುತ್ತಿದ್ದಾರೆ. ಮೂಲತಃ ಮಣ್ಣಿನ ಮನೆಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿದ್ದ ಜೋ, ಈಗ ಸಾವಯವ ಕೃಷಿ, ಬೀಜ ಸಂರಕ್ಷಣೆ, ಕಾಡುಕೃಷಿಯ ಮೂಲಕ ಸ್ವಾವಲಂಬನೆ ಬದುಕನ್ನು ಸಾಧಿಸುವ ಮಾರ್ಗವನ್ನು ಹುಡುಕಿ, ಇತರ ಜತೆ ಹಂಚಿಕೊಳ್ಳುತ್ತಿದ್ದಾರೆ. 2003ರಲ್ಲಿ ಸ್ಥಾಪನೆಯಾದ ‘ಪನ್ ಪನ್ ಸೆಂಟರ್’ ತರಬೇತಿ ಕೇಂದ್ರ ಎಂಬುದಕ್ಕಿಂತಲೂ ಪರ್ಯಾಯ ಮಾದರಿಗಳನ್ನು ಸತತವಾಗಿ ಅನುಶೋಧಿಸುತ್ತಲೇ ಇರುವ ಕಲಿಕಾ ಕೇಂದ್ರವಾಗಿ ರೂಪುಗೊಂಡಿದೆ.
ಬೆಂಗಳೂರಿನಿಂದ ವಿಮುಖರಾಗಿ ಕೊಪ್ಪಳದ ಹಳ್ಳಿಯಲ್ಲಿ ಸಾವಯವ ಕೃಷಿ ಮಾಡುತ್ತ, ಬಿಡುವಿನಲ್ಲಿ ಕಾಲಿಗೆ ಚಕ್ರ-ಬೆನ್ನಿಗೆ ರೆಕ್ಕೆ ಕಟ್ಟಿಕೊಂಡು ದೇಶ-ವಿದೇಶದ ಸಾವಯವ ತಾಣಗಳಿಗೆ ಹಾರಿಹೋಗುತ್ತಿರುವ ಆನಂದತೀರ್ಥ ಪ್ಯಾಟಿ ಈಚೆಗೆ ಗೆಳೆಯರೊಡಗೂಡಿ ಥಾಯ್ಲೆಂಡಿಗೆ ಹೋಗಿಬಂದರು. ಪನ್ ಪನ್ ಸೆಂಟರಿಗೆ ಭೇಟಿನೀಡುವ ಅವರ ಕನಸು ನನಸಾಯಿತು. ತಮ್ಮ ಅನುಭವವನ್ನು ಅಕ್ಷರ ರೂಪಕ್ಕಿಳಿಸಿದ ಪ್ಯಾಟಿ ಅವರಿಗೆ ಕೃಜ್ಞತೆಗಳು.
-ಶಿವರಾಂ ಪೈಲೂರು ಕೃಷಿ ಮಾಧ್ಯಮ ಕೇಂದ್ರ
ಪುಟಗಳು: 36
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !