ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು
Publisher: Concave Media and Publisher
ಪಶ್ಚಿಮ ಘಟ್ಟದ ಹಲವೆಡೆ ಜನ ಅಂದಿನವರೆಗೆ ಎಂದೂ ಕಂಡು ಕೇಳರಿಯದಂತಹ ëಮಹಾಮಳೆí 1961ರ ಆಗಸ್ಟ್‌ನಲ್ಲಿ ಸುರಿದಿತ್ತಂತೆ. ಗುಡ್ಡಗಳು ಜರಿದಿದ್ದವಂತೆ. ಮನೆಗಳು ಕುಸಿದಿದ್ದವಂತೆ. ಆ ಮಹಾಮಳೆಯಿಂದಾಗಿ ನೆಟ್ಟಿಮಾಡಿದ್ದ ಗದ್ದೆಗಳಿಗೆಲ್ಲಾ ನೀರು ನುಗ್ಗಿ ಹಾಳಾಗಿತ್ತಂತೆ. ನೆಟ್ಟಿಗೆಂದು ಕಿತ್ತಿಟ್ಟದ್ದ ಸಸಿಗಳೆಲ್ಲಾ ನೀರಲ್ಲಿ ಕೊಚ್ಚಿ ಹೋಗಿತ್ತಂತೆ. ಕೆಲವೆಡೆ ಅಗೆ ಹಾಕಿದ್ದೆಲ್ಲಾ ನೀರಲ್ಲಿ ಮುಳುಗಿ ಹೋಗಿತ್ತಂತೆ. ಗುಡ್ಡದ ಬದಿ ಸಸಿ ಹಾಕಿದ್ದ ಗದ್ದೆಗಳು ಮಣ್ಣು ಬಂದು ಮುಚ್ಚಿ ಹೋಗಿದ್ದವಂತೆ. ಬೆವರು ಬಸಿದು ಜತನದಿಂದ ಕಟ್ಟಿದ್ದ ಬದುಕು ಮಳೆಯಲ್ಲಿ ಕೊಚ್ಚಿಹೋಗಿತ್ತಂತೆ... ಹೀಗೆ ಅಂತೆ ಅಂತೆ ಅಂತ ಸುಮಾರು ಅಂತೆ-ಕಂತೆ ಕಥೆಗಳಿವೆ. ಇದನ್ನೆಲ್ಲಾ ಈಗಿನ ಹಿರಿಯರು, ಆಗ ಯುವಕರಾಗಿದ್ದ ಕೆಲವರು ಹೇಳುತ್ತಾರೆ. ಆದರೆ ಆ ಕುರಿತು ದಾಖಲಿಸಿದ ಯಾವುದೇ ಗ್ರಂಥಗಳಿಲ್ಲ. ಆಗಿನ ಮಳೆಯ ಅಬ್ಬರ ಉಂಟುಮಾಡಿದ ಪರಿಣಾಮಗಳ ಕುರಿತು ಬರೆದ ಯಾವುದೇ ಪುಸ್ತಕಗಳಿಲ್ಲ. ಹೆಚ್ಚೆಂದರೆ ಆ ಕಾಲದ ಸರ್ಕಾರಿ ಕಡತಗಳಲ್ಲಿ ಹುಡುಕಿದರೆ ಮಳೆಯ ಪ್ರಮಾಣದ ದಾಖಲೆಯೊಂದು ಸಿಗಬಹುದೇ ಹೊರತು ಅದಕ್ಕೀಡಾಗಿ ಬದುಕು ಕಳೆದುಕೊಂಡವರ ವಿವರಗಳು? ಅವರ ಬವಣೆಗಳು? ಸಂಕಟಗಳು? ಉಹುಂ, ಯಾವುದು ಯಾವುದೂ ಸಿಗಲಾರದು. ಈ ಪುಸ್ತಕದ ಉದ್ದೇಶ ಇಂತದ್ದೊಂದನ್ನು ದಾಖಲಿಸುವುದಾಗಿದೆ. ಆದರೆ ಇದು 1961ರ ಮಹಾಮಳೆಯ ದಾಖಲೀಕರಣವಲ್ಲ. ಬದಲಾಗಿ ಅದೇ ರೂಪದ ಮಳೆ ಅಥವಾ ಅದಕ್ಕಿಂತಲೂ ಹೆಚ್ಚು ಮಳೆ 2019ರ ಆಗಸ್ಟ್‌ನಲ್ಲಿ ಒಂದು ವಾರಗಳ ಕಾಲ ಬಂತು. ಆಗಸ್ಟ್ 9 ರಂದು ಹಲವೆಡೆ ಅವಘಡಗಳು ಜರುಗಿಬಿಟ್ಟವು. ಎಲ್ಲೆಲ್ಲೂ ಪ್ರಕೃತಿ ತನ್ನ ಏಕಪಾತ್ರಾಭಿನಯದಲ್ಲಿ ಮಾನವ ನಿರ್ಮಿತ ಸಕಲವೂ ಕ್ಷುಲ್ಲಕ ಎನ್ನುವಂತೆ ನಿರ್ನಾಮ ಮಾಡುತ್ತಾ, ಎಲ್ಲವನ್ನೂ ಕಬಳಿಸುತ್ತಾ ಮುನ್ನಡೆಯಿತು. ಜಲಪ್ರಳಯ ಎಲ್ಲೆಲ್ಲೂ ನಡುಕ ಹುಟ್ಟಿಸಿತು. ಏಕಾಏಕಿ ಪ್ರಾಕೃತಿಕ ವಿಕೋಪದಿಂದ ಜನ ಬೆಚ್ಚಿಬಿದ್ದರು. ಹಳ್ಳಿ ಹಳ್ಳಿಗಳ ಬದುಕಿನ ಸಂಕೋಲೆಯೇ ಕಳಚಿತು. ಗ್ರಾಮ ಗ್ರಾಮಗಳ ವ್ಯವಸ್ಥೆಯೇ ಕುಸಿಯಿತು. ಕೂಡಿಟ್ಟ ಕನಸುಗಳೆಲ್ಲಾ ನೆರೆಯಲ್ಲಿ ಚಿಂದಿಯಾದವು. ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಹಲಗಡಕ, ಚನ್ನಡ್ಲು, ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ ಮೊದಲಾದ ಪಶ್ಚಿಮ ಘಟ್ಟದ ತಪ್ಪಲಿನ ಹಲವು ಊರುಗಳ ಸಾವಿರಾರು ಜನ ಮನೆ-ಮಠ, ತೋಟ-ಗದ್ದೆ. ಬದುಕುಗಳನ್ನೇ ಕಳೆದುಕೊಂಡು ಸಂತ್ರಸ್ಥರಾದರು. ಈ ಪುಸ್ತಕ ಈ ಎಲ್ಲಾ ಅತಿವೃಷ್ಟಿ ಸಂತ್ರಸ್ಥರ ಬಗ್ಗೆ ಮಾತನಾಡುತ್ತದೆ. 2019ರ ಆಗಸ್ಟ್‌ನಿಂದ 2020ರ ಆಗಸ್ಟ್‌ನ ಆಶ್ಲೇಷಾ ಮಳೆಯವರೆಗಿನ ಕಥೆಯೊಂದು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಜಾಗತೀಕರಣದ ನಂತರ ಮಲೆನಾಡೆಂಬ ಮಲೆನಾಡು ಹೇಗೆ ಬದಲಾಯಿತು? ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಏನೆಲ್ಲಾ ಹೊಸ ಸಂಚಲನಗಳು ಹುಟ್ಟಿಕೊಂಡವು? ಅಭಿವೃದ್ಧಿಯ ಬರದಲ್ಲಿ ಪರಿಸರ, ಕೃಷಿ, ಜನಜೀವನ, ಆಹಾರ ಪದ್ಧತಿ, ಆಚರಣೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳಲ್ಲಿ ಏನೆಲ್ಲಾ ಪಲ್ಲಟಗಳಾಯಿತು? ರಾಜಕಾರಣದ ಪರಿಭಾಷೆ ಹೇಗೆಲ್ಲಾ ಬದಲಾಯಿತು? ಇಲ್ಲಿನ ಯುವ ಸಮುದಾಯದ ಇಕ್ಕಟ್ಟುಗಳೇನು? ಕಳೆದ ಎರಡ್ಮೂರು ವರ್ಷಗಳಿಂದ ಅದೇಕೆ ಘಟ್ಟದುದ್ದಕ್ಕೂ ಭೂಕುಸಿತಗಳು ಸಂಭವಿಸುತ್ತಿವೆ? ಮಹಾಮಳೆಯಿಂದ ಎಲ್ಲವನ್ನೂ ಕಳೆದು ಕೊಂಡವರ ಪುನರ್ವಸತಿಯ ಕಥೆಗಳು ಇಂದಿಗೆ ಏನಾಗಿದೆ? ಪ್ರಕೃತಿಯ ಮುನಿಸಿನಿಂದ ಹಳ್ಳಿಹಳ್ಳಿಗಳ ನಡುವಿನ ಬದುಕಿನ ಸಂಕೋಲೆಗಳೇ ತುಂಡರಿದಾಗ ಸರ್ಕಾರಗಳು ಹೇಗೆ ಪ್ರತಿಸ್ಪಂದಿಸಿದವು? ರಾಜ್ಯಾದ್ಯಂತ ಸಹ್ಯದಯರು ದಾನವೆಂದು ಕಳುಹಿಸಿದ್ದ ಅಗತ್ಯ ವಸ್ತುಗಳು ಸಂತ್ರಸ್ಥರನ್ನು ತಲುಪಿದವೇ? ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ ಮೊದಲಾದ ಸರ್ಕಾರದ ಹತ್ತು ಹಲವು ಇಲಾಖೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ನಮಗೆ ಕರೆಂಟು ಒದಗಿಸುವ (ನಿರ್ವಹಿಸುವ) ಮೆಸ್ಕಾಂ ಅದೇಕೆ ಗಬ್ಬೆದ್ದು ಹೋಗಿದೆ? ಕಾಫಿ ಕಣಿವೆಗಳಿಗೆ ಹೊರ ರಾಜ್ಯಗಳ ಕಾರ್ಮಿಕರೇ ಏಕೆ ಬೇಕಾಗಿದ್ದಾರೆ? ಕಾಡು, ನದಿ, ಸಸ್ಯ ಸಂಪತ್ತು ಪ್ರಾಣಿವೈವಿಧ್ಯ, ಕಾಡಂಚಿನ ನಿರುಪದ್ರವಿ ಬದುಕಿನ ಒಡಲ ಸಂಕಟಗಳೇನು? ಮಲೆನಾಡಿನ ಭೂವಿವಾದದ ಕಗ್ಗಂಟುಗಳು, ಸ್ಥಳೀಯ ರಾಜಕಾರಣ, ಜಿಲ್ಲಾಡಳಿತ, ಪ್ಲಾಂಟರ್‌ಗಳು, ಕೂಲಿ ಕಾರ್ಮಿಕರು, ಅತೀ ಸಣ್ಣ ಹಿಡುವಳಿದಾರರು ಸೇರಿದಂತೆ ಇಡೀ ಪಶ್ಚಿಮ ಘಟ್ಟದ ತಪ್ಪಲಿನ ಸಣ್ಣದೊಂದು ಝಲಕ್ ಇಲ್ಲಿದೆ.
ಇಲ್ಲಿನ ಪಾತ್ರಗಳು ಕಾಲ್ಪನಿಕ. ವಿಷಯವಸ್ತು ಕಾಲ್ಪನಿಕವೂ ಹೌದು, ವಾಸ್ತವವೂ ಹೌದು. ಇದು ಪೂರ್ತಿ ಕಥೆಯೂ ಅಲ್ಲ, ಪೂರ್ತಿ ಕಾದಂಬರಿಯೂ ಅಲ್ಲ, ಹಾಗಂತ ಲೇಖನವೂ ಅಲ್ಲ, ಪ್ರಬಂಧವಂತೂ ಅಲ್ಲವೇ ಅಲ್ಲ. ಎಲ್ಲವನ್ನೂ ಒಳಗೊಂಡಿರುವ ತಳಮಟ್ಟದ ಅಧ್ಯಯನದ (Barefoot Research/ಬರಿಗಾಲ ಸಂಶೋಧನೆ) ವಾಸ್ತವ ಚಿತ್ರಣವೊಂದು ಇಲ್ಲಿದೆ. ಸಾಹಿತ್ಯದ ಯಾವ ಪ್ರಕಾರಕ್ಕೆ ಬೇಕಾದರೂ ಇದನ್ನು ಸೇರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಓದುಗರಿಗೇ ಬಿಟ್ಟುಬಿಟ್ಟದ್ದೇನೆ.. ಪುಸ್ತಕದ ಪ್ರಾರಂಭದಿಂದ ಕಡೆಯವರೆಗೂ ಗಟ್ಟಿ ಕಥೆಯ ಎಳೆಯೊಂದು ತೆರೆದುಕೊಳ್ಳುತ್ತಾ ಸಾಗುತ್ತದೆ. ಅಲ್ಲಲ್ಲಿ ವಿವಿಧ ಕವಲುಗಳಾಗಿ ಒಡೆಯುತ್ತಾ ಪಯಣಿಸುತ್ತದೆ. ಇದರ ಓದು ನಿಮ್ಮನ್ನು ಚಿಂತನೆಗೆ ಹಚ್ಚಲಿ...
- ನಾಗರಾಜ ಕೂವೆ
ಪುಟಗಳು: 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !