ಒಂದು ಕಾದಂಬರಿಯಲ್ಲಿ ಏನೇನು ಇರಬೇಕು ಅಂತ ಹಸಿದ ಓದುಗನಾಗಿ ನಾನು ಬಯಸುತ್ತೇನೆಯೋ ಅದನ್ನೆಲ್ಲ ಈ ಕೃತಿಯಲ್ಲಿ ಪ್ರಮೋದ್ ತಂದಿದ್ದಾರೆ. ವಿಸ್ಮತಿ ಎಚ್ಚರಗಳ ನಡುವಿನ ಸುಷುಪ್ತಿಯಲ್ಲಿ ಸಾಗುವಂತೆ ಕಾಣುವ ಕಾದಂಬರಿ ನನ್ನನ್ನು ತನ್ಮಯಗೊಳಿಸಿತು.
-ಜೋಗಿ
ಸ್ವಪ್ನವೇ ಎಚ್ಚರ ಎಂಬ ನಸುಬೆಚ್ಚಗಿನ ಸತ್ಯವನ್ನು ನಮ್ಮ ಮುಂದಿಡುವ ಕಾದಂಬರಿ ಇದು. ಸೀತೆಯನ್ನು ಹುಡುಕುತ್ತ ಹೋಗುವ ರಾಮ ಹುಡುಕಾಟದ ಅಂತ್ಯದಲ್ಲಿ ತನ್ನನ್ನು ತಾನೇ ಕಂಡುಕೊಳ್ಳುವಂತೆ ಇಲ್ಲಿನ ಕಥಾನಾಯಕ ಸ್ವಪ್ನಗಿರಿಯ ಬೆಟ್ಟದ ಊರಿನಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಮಂಜು ಕವಿದ ಮಸುಕು ಮಸುಕಾದ ಆವರಣದಲ್ಲಿ ನಡೆಯುವ ಇಲ್ಲಿನ ಘಟನೆಗಳು ತಮ್ಮ ಅಸ್ಪಷ್ಟತೆಯಿಂದಲೇ ನಮ್ಮೊಳಗಿನ ಸ್ಪಂದನದ ಬಿಂದುಗಳನ್ನು ಉದ್ದೀಪಿಸುತ್ತವೆ. ಸ್ಲೀಪ್ ಪ್ಯಾರಲಿಸಿಸ್, ಯಕ್ಷಗಾನ, ಅಮ್ಮನ ಕಥೆ, ಮಳೆ, ಕೆಂಪಿರುವೆ ಚಟ್ನಿ, ತುಂಗೆ, ಗಂಗಾವಿಶ್ವೇಶ್ವರ, ಜಾತ್ರೆ ಎಲ್ಲವೂ ಸೇರಿದ ಈ ಕಾದಂಬರಿ ಓದಿದ ನಂತರ ನಮ್ಮಲ್ಲಿ ಮರುಹುಟ್ಟು ಪಡೆಯಬಲ್ಲ ಗಾಢತೆಯನ್ನು ಹೊಂದಿವೆ.
-ಹರೀಶ ಕೇರ
ಮನಸ್ಸು ಅರಳಿಸುವ ಅಥವಾ ಕದಡಿಸುವ ಒಂದು ಸಾಲು ಹೊಳೆಯುವುದಕ್ಕೆ, ಕಣ್ಣಲ್ಲಿ ಉಳಿದುಬಿಡುವ ಒಂದು ಮ್ಯಾಜಿಕ್ ಮೊಮೆಂಟ್ ಸಂಭವಿಸುವುದಕ್ಕೆ ಜೀವನವಿಡೀ ಹುಡುಕಾಟ ನಡೆಯುತ್ತಿರುತ್ತದೆ. ಈ ಕಾದಂಬರಿ ಅಂಥದ್ದೊಂದು ಹುಡುಕಾಟದ ಪ್ರಯಾಣ. ಯಾವುದೋ ಒಂದು ಊರನ್ನು ಹುಡುಕುತ್ತಾ ಹೋದಾಗ ಮನಸ್ಸಿನಲ್ಲಿ ಅಡಗಿದ್ದ ಊರೊಂದು ಧುತ್ತನೆ ಎದುರಾಗುವಾಗಿನ ಅಚ್ಚರಿಯನ್ನು ಉಳಿಸಿಹೋಗುವ ಕಥೆ. ಹುಡುಕುತ್ತಾ ಅಲೆಯುತ್ತಾ ಮುಂದೆ ಸಾಗುವಾಗ ಅಂತರಂಗವನ್ನು ತೋರಿಸುವ ಕನ್ನಡಿಗೆ ಮುಖಾಮುಖಿಯಾಗಿಸುವ ಕಥನ, ರೋಚಕತೆ, ವೇಗದ ನಿರೂಪಣೆ, ಆಸಕ್ತಿಕರ ಪಾತ್ರಗಳು, ಹೊಸಕಾಲದ ಪರಿಭಾಷೆ, ಬೆರಗಾಗಿಸುವ ಇಮೇಜ್, ಮಾಯಕದ ದೃಶ್ಯಾವಳಿ, ಹಗುರಗೊಳಿಸುವ ಲವಲವಿಕೆ ಎಲ್ಲವನ್ನೂ ಧರಿಸಿರುವ ಸೊಗಸಾದ ಕಾದಂಬರಿ.
-ರಾಜೇಶ್ ಶೆಟ್ಟಿ