ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ಕುವೆಂಪು ಅವರು ಮಕ್ಕಳಿಗಾಗಿ ಬರೆದಿರುವ ಕವಿತೆಗಳ ಸಂಗ್ರಹ "ನನ್ನ ಮನೆ". ಚಿಣ್ಣರ ಮನಗೆಲ್ಲುವ ಸರಳ ಕವಿತೆಗಳು ಇಲ್ಲಿವೆ. ಒಂದು ಮಕ್ಕಳು ಮೆಚ್ಚಿದ ಕವಿತೆ ಹೀಗಿದೆ:
ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ !
ನನ್ನ ತಾಯಿಯೊಲಿದ ಮನೆ,
ನನ್ನ ತಂದೆ ಬೆಳೆದ ಮನೆ:
ನನ್ನ ಗೆಳೆಯರೊಡನೆ ಕೂಡಿ
ಮುದ್ದು ಮಾತುಗಳನು ಆಡಿ
ಮಕ್ಕಳಾಟಗಳನು ಹೂಡಿ
ನಾನು ನಲಿದ ನನ್ನ ಮನೆ !
ನನ್ನ ಗಿರಿಜೆಯಿದ್ದ ಮನೆ,
ನನ್ನ ವಾಸುವಿದ್ದ ಮನೆ:
ಮನೆಯ ಮುತ್ತಿ ಬರಲು ಚಳಿ
ಆಳು ಮಂಜ ಒಲೆಯ ಬಳಿ
ನಮ್ಮನೆಲ್ಲ ಕತೆಗಳಲಿ
ಕರಗಿಸಿದ್ದ ನನ್ನ ಮನೆ !
ತಾಯಿ ಮುತ್ತು ಕೊಟ್ಟ ಮನೆ,
ತಂದೆ ಎತ್ತಿಕೊಂಡ ಮನೆ:
ಮನೆಗೆ ಬಂದ ನಂಟರೆಲ್ಲ
ಕೂಗಿ ಕರೆದು ಕೊಬ್ಬರಿ ಬೆಲ್ಲ –
ಗಳನು ಕೊಟ್ಟು, ಸವಿಯ ಸೊಲ್ಲ –
ನಾಡುತ್ತಿದ್ದ ನನ್ನ ಮನೆ !
ನಾನು ನುಡಿಯ ಕಲಿತ ಮನೆ,
ನಾನು ನಡಿಗೆಯರಿತ ಮನೆ:
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗು ಹಾಡಿ ಹಾಡಿ
ಮಲೆಯನಾಡ ಸಗ್ಗಮಾಡಿ
ನಲಿಸುತ್ತಿದ್ದ ನನ್ನ ಮನೆ !
ನಾನು ಬಿದ್ದು ಎದ್ದ ಮನೆ,
ಮೊದಲು ಬೆಳಕು ಕಂಡ ಮನೆ:
ತಿಪ್ಪ ತಿಪ್ಪ ಹೆಜ್ಜೆಯಿಟ್ಟು
ಬಿಸಿಲ ಕೋಲ ಹಿಡಿದು ಬಿಟ್ಟು
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ !
ಪುಟಗಳು: 20
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !