ಹುಟ್ಟು ಹೆಸರು ಮುತ್ತುರಾಜು. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. ತಾಯಿ ಲಕ್ಷ್ಮಮ್ಮ. ಹುಟ್ಟಿದ್ದು ತಾಯಿ ತವರು ಗಾಜನೂರಿನಲ್ಲಿ. ಹುಟ್ಟಿದ ದಿನ ಏಪ್ರಿಲ್ ೨೪, ೧೯೨೯. ಅವತ್ತು ರಾಮ ನವಮಿ. ರಾಮ ಹುಟ್ಟಿದ ದಿನವೇ ಜನಿಸಿದ ಹುಡುಗನಿಗೆ, ರಾಮದಾಸ ಎನಿಸಿದ ಮುತ್ತು ರಾಯನ ಹೆಸರು ಇಟ್ಟದ್ದಕ್ಕೂ ಒಂದು ಕಾರಣ ಇದೆ.
ಪುಟ್ಟಸ್ವಾಮಯ್ಯ ದಂಪತಿಗೆ ಬಹಳ ದಿನ ಮಕ್ಕಳಾಗಿರಲಿಲ್ಲ. ಮುತ್ತೆತ್ತಿ ಕಾಡಿನ ದೈವ ಮುತ್ತೆತ್ತರಾಯನಿಗೆ ಹರಕೆ ಹೊತ್ತರು. ಮಗು ಹುಟ್ಟಿದ್ದಕ್ಕೆ, ಆತನ ಹೆಸರೇ ಇಟ್ಟರು. ಹನುಮಂತ ಇಲ್ಲಿ ಮುತ್ತೆತ್ತ ರಾಯ. ಸೀತೆ ಸ್ನಾನ ಮಾಡುವಾಗ ಮುತ್ತಿನ ಮೂಗುತಿ ಕಾಣಲಿಲ್ಲ. ಸಪ್ಪೆ ಮುಖದ ಸೀತೆ ಕಂಡ ಹನುಮ ಕಾರಣ ವಿಚಾರಿಸಿದ. ವಿಷಯ ತಿಳಿಯಿತು. ನದಿಯ ನೀರು ಜಾಲಾಡಿ ಕಳೆದಿದ್ದ ಮುತ್ತಿನ ಮೂಗುತಿ ಎತ್ತಿ ತಂದು ಮತ್ತೆ ಸೀತೆಯ ಮುಖದಲ್ಲಿ ಮಂದಹಾಸ ಮೂಡಿಸಿದ. ಅದಕ್ಕೆ ಅವನನ್ನು ಸೀತೆ ಮುತ್ತೆತ್ತ ರಾಯ ಎಂದೇ ಕರೆದಳು. ಈ ದೈವ ಪುಟ್ಟಸ್ವಾಮಯ್ಯ ಅವರಿಗೆ ಇಷ್ಟ. ಅದೂ ಕೂಡ ಹೆಸರಿಗೆ ಕಾರಣ. ಅವರು ಮಗನನ್ನು ಪ್ರೀತಿಯಿಂದ ‘ಮುತ್ತು’ ಎಂದರು.
ಬೆಳೆದ ಮಗ ಅವರ ಕಣ್ಣಿಗೆ ರಾಜಕುಮಾರನ ಹಾಗೆ ಕಂಡ. ಅದನ್ನು ಅವರು ಹಿಗ್ಗಿನಿಂದ ಹಲವರೆದುರು ಹೇಳಿದರು. ಹಾಗೆ ತಿಳಿಸಿದವರಲ್ಲಿ ಎಚ್.ಎಲ್.ಎನ್. ಸಿಂಹ ಕೂಡ ಒಬ್ಬರು. ಮುತ್ತುರಾಜ್ ಮೊದಲ ಸಿನಿಮಾದಲ್ಲಿ ಅಭಿನಯಿಸಿದಾಗ ಅವರಿಗೆ ‘ರಾಜ್ಕುಮಾರ್’ ಎಂದು ಹೆಸರಿಸಿದ್ದು ಅವರೇ.
ಅದಕ್ಕೆ ಇನ್ನೊಂದು ಪ್ರೇರಣೆಯೂ ಇತ್ತು. ಆಗಿನ ಕಾಲಕ್ಕೆ ಹಿಂದಿ ಚಿತ್ರಗಳಲ್ಲಿ ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಜನಪ್ರಿಯರು. ಅವರ ಹೆಸರುಗಳ ಅರ್ಧರ್ಧ ಭಾಗ ಆಯ್ದುಕೊಂಡು, ಅವರಿಬ್ಬರ ಜನಪ್ರಿಯತೆ ಈತ ಕೂಡ ಪಡೆಯಲಿ ಎಂದು ಹಾರೈಸಿದ್ದರು ಸಿಂಹ.
ಸಿದ್ಧಿ ಪ್ರಸಿದ್ಧಿ ಎಲ್ಲ ಒದಗಿ ಬಂತು. ಜನ ಅವರನ್ನು ತಮ್ಮ ಆತ್ಮೀಯ ಎಂದೇ ಭಾವಿಸಿ ‘ಅಣ್ಣ’ ಎಂದರು.
ಅಂಥವರಿಗೆ ಅವರು ಅಣ್ಣಾವ್ರು, ರಾಜಣ್ಣ ಆದರು.
ಹೆಸರಿಗೆ ಎಷ್ಟೆಲ್ಲ ಹಿನ್ನೆಲೆ, ಎಷ್ಟೆಲ್ಲ ಜನರ ಹರಕೆ ಹಾರೈಕೆ ಸೇರಿದೆ.
ಏಪ್ರಿಲ್ ೧೨, ೨೦೦೬ರಲ್ಲಿ ಅವರು ನಮ್ಮಿಂದ ದೂರವಾದಾಗ ಪ್ರಸಿದ್ಧ ಲೇಖಕ ದೇವನೂರು ಮಹಾದೇವ ಪ್ರತಿಕ್ರಿಯಿಸಿದ್ದು ಹೀಗೆ:
‘ಅವರು ಹುಟ್ಟಿದ್ದು ಮುತ್ತುರಾಜ್ ಆಗಿ. ಬೆಳೆದು ರಾಜ್ಕುಮಾರ್ ಆದರು. ಇವತ್ತು ಮುತ್ತುರಾಜ್ ನಮ್ಮಿಂದ ದೂರವಾದರು. ರಾಜ್ಕುಮಾರ್ ಮಾತ್ರ ಎಂದೆಂದೂ ನಮ್ಮೊಡನೆ ಇರುತ್ತಾರೆ.’
ಪುಟಗಳು - 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !