‘ಮೈಸೂರು ಮಹಾರಾಜರು’ – ಈ ಕೃತಿ ಒಂದು ಜೀವನ ಚರಿತ್ರೆ. ಜೀವನ ಚರಿತ್ರೆ ಒಂದು ಉಪಯುಕ್ತ ಮತ್ತು ಆಕರ್ಷಣೀಯವಾದ ಸಾಹಿತ್ಯ ಪ್ರಕಾರ. ಯಾಕೆಂದರೆ ಅದು ಚರಿತ್ರೆಯ ಸ್ಪಷ್ಟತೆ, ಕಾದಂಬರಿಯ ಕಲ್ಪನೆ, ಪ್ರಬಂಧದಲ್ಲಿ ಕಾಣಿಸುವ ಗಂಭೀರ ವಿಚಾರಗಳು, ವ್ಯಂಗ್ಯ ವಿಡಂಬನೆಗಳನ್ನಲ್ಲದೆ ಅಸಮಾನ್ಯ ವ್ಯಕ್ತಿಗಳ ಬದುಕು, ವ್ಯಕ್ತಿತ್ವ, ಸಾಧನೆ ಮತ್ತು ಸಿದ್ಧಿಗಳನ್ನೊಳಗೊಂಡಿರುತ್ತದೆ.
ಈ ಕೃತಿಯಲ್ಲಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ, ಮೈಸೂರು ಸಂಸ್ಥಾನವನ್ನು ಸ್ಥಾಪಿಸಿ ಸುಮಾರು 556 ವರ್ಷಗಳ ದೀರ್ಘಕಾಲ ಸಮರ್ಥವಾಗಿ ರಾಜ್ಯವಾಳಿದ ಯದುವಂಶದ ಇಪ್ಪತ್ತೈದು ಮಹಾರಾಜರ ಜೀವನ, ಧ್ಯೇಯ, ಆಡಳಿತ, ಧೋರಣೆ, ಸಾಧನೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡುವ ಪ್ರಯತ್ನ ಮಾಡಿದ್ದೇನೆ.
ಮೈಸೂರಿನಲ್ಲಿ ಸುಮಾರು ಐವತ್ತು ವರ್ಷಗಳಿಂದ ಬದುಕುತ್ತಿರುವ ನಾನು ಈ ಸಾಂಸ್ಕೃತಿಕ ನಗರದಲ್ಲಿರುವ ಜಗತ್ಪ್ರಸಿದ್ಧ ಚಾಮುಂಡಿಬೆಟ್ಟ, ಅರಮನೆ, ರತ್ನ ಸಿಂಹಾಸನ, ಶಸ್ತ್ರಗಾರದಲ್ಲಿರುವ ಆಯುಧಗಳು, ದೇವಾಲಯಗಳನ್ನು ನೋಡಿ ಸಂತೋಷಪಟ್ಟಿದ್ದೇನೆ.
ಶ್ರೀ ಜಯಚಾಮರಾಜ ಒಡೆಯರು ದಸರಾ ಮಹೋತ್ಸವದಲ್ಲಿ ರತ್ನ ಸಿಂಹಾಸನದ ಮೇಲೆ ಕುಳಿತು ದರ್ಬಾರು ನಡೆಸಿದ್ದನ್ನು ಹಲವಾರು ಬಾರಿ ವೀಕ್ಷಿಸಿ ರೋಮಾಂಚನಗೊಂಡಿದ್ದೇನೆ. ಅವರು ಮಗನೊಡನೆ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದ್ದನ್ನು ನೋಡಿ ಕಣ್ತುಂಬಿಕೊಂಡಿದ್ದೇನೆ.
ಮೈಸೂರು ಮಹಾರಾಜರ ರಾಜ್ಯಾಡಳಿತ ಜಗತ್‍ಪ್ರಸಿದ್ಧವಾಗಿದೆ. ಅವರ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿದ್ದರೂ ಯದುವಂಶದ ಎಲ್ಲಾ ಮಹಾರಾಜರನ್ನು ಒಳಗೊಂಡ ಗ್ರಂಥದ ಕೊರತೆಯನ್ನು ನೀಗಿಸುವ ಸಲುವಾಗಿ ಈ ಕೃತಿಯನ್ನು ರಚಿಸಿದ್ದೇನೆ.
- ಆರ‍್ಯಾಂಬ ಪಟ್ಟಾಭಿ
ಪುಟಗಳು: 53
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !