ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕಳೆದ 5-6 ವರ್ಷಗಳಿಂದ ನನ್ನ ಮಗ ನಿರಂಜನನನ್ನು ತಯಾರು ಮಾಡಲು ನಾವು ಶ್ರಮಿಸಿದ ಕತೆ ಇದು. ಇದು ಕೇವಲ ನಮ್ಮ ಮನೆಯ ಕತೆಯಲ್ಲ. ವಿಶೇಷ ಮಕ್ಕಳನ್ನು ಹೆತ್ತ ಎಲ್ಲ ತಂದೆ ತಾಯಿಗಳ ಕತೆ ಸ್ವಲ್ಪ ಹೆಚ್ಚು ಕಡಿಮೆ ಹೀಗೆಯೇ ಇದೆ. ಇದು ಕಿವುಡು ಮಕ್ಕಳಿಗೆ ಮಾತು ಕಲಿಸುವ ತಾಂತ್ರಿಕ ವಿಧಾನದ ಪುಸ್ತಕವಲ್ಲ. ಕೇವಲ ನಮ್ಮ ಅನುಭವ ಅಷ್ಟೇ.
ಈ ಕತೆಯಲ್ಲಿ ನಾನು ನನ್ನ ಪತ್ನಿಯ ಬಗ್ಗೆ ಹೆಚ್ಚಾಗಿ ಬರೆದಿದ್ದೇನೆ ಎನ್ನಿಸುತ್ತದೆ. ಆದರೆ ಇಲ್ಲಿ ನನ್ನ ಪತ್ನಿ ಕೇವಲ ನೆಪ ಅಷ್ಟೆ. ಯಾಕೆಂದರೆ ಇದು ನಮ್ಮ ಮನೆಯದೇ ಕತೆಯಾಗಿದ್ದರಿಂದ ನಿರಂಜನನ ತಾಯಿಯ ಬಗ್ಗೆ ಬರೆಯುವುದು ಅನಿವಾರ್ಯ. ನಿರಂಜನನ ಬದಲಿಗೆ ಇನ್ಯಾವುದೋ ಹುಡುಗನಿದ್ದರೆ ಆತನ ತಾಯಿಯ ಬಗ್ಗೆ ಹೆಚ್ಚು ಬರವಣಿಗೆ ಇರುತ್ತಿತ್ತು. ನನ್ನ ಪತ್ನಿ ಇಲ್ಲಿ ಎಲ್ಲ ತಾಯಂದಿರ ಪ್ರತಿನಿಧಿ.
ಇಂತಹ ಕತೆಯೊಂದನ್ನು ಬರೆಯಲು ಕಾರಣನಾದ ನನ್ನ ಮಗ ನಿರಂಜನನಿಗೆ ಮೊದಲ ಕೃತಜ್ಞತೆ ಸಲ್ಲುತ್ತದೆ. ಯಾಕೆಂದರೆ ಬದುಕಿನ ಬಗ್ಗೆ ನನ್ನ ಆಲೋಚನೆಗಳನ್ನು ಬದಲಾಯಿಸಿದವ ಆತ. ಅಲ್ಲದೆ ಎಲ್ಲ ವಿಷಯಗಳ ಬಗ್ಗೆಯೂ ಕುತೂಹಲವನ್ನು ಬೆಳೆಸಿಕೊಳ್ಳುವಂತೆ ಮಾಡಿದವನು ಅವನು. ಜೊತೆಗೆ ಕಿವುಡು ಮಕ್ಕಳಿಗೆ ಮಾತು ಕಲಿಸುವ ಹಲವಾರು ವಿಷಯಗಳನ್ನು ನನ್ನ ಗಮನಕ್ಕೆ ತಂದವಳು ನನ್ನ ಪತ್ನಿ ದೀಪಾ. ತನ್ನ ತಮ್ಮನನ್ನು ಯಾವಾಗಲೂ ಪ್ರೀತಿಸುತ್ತಾ ಅಂತಹ ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡ ನನ್ನ ಹಿರಿಯ ಮಗ ನಿಕೇತನನಿಗೂ ಕೃತಜ್ಞತೆ ಹೇಳದಿರಲಾರೆ.
ನಿರಂಜನನಿಗೆ ಮಾತು ಕಲಿಸಲು ಸಹಕರಿಸಿದ ನನ್ನ ಅಮ್ಮ ಮೀನಾಕ್ಷಿ, ತಂಗಿ ಭಾರತಿ, ಭಾವ ವಿಶ್ವನಾಥ, ಅಳಿಯ ಗಣೇಶ ಎಲ್ಲರಿಗೂ ನನ್ನ ವಂದನೆಗಳು. ಜೊತೆಗೆ ಕಿವುಡು ಮಕ್ಕಳಿಗೆ ಮಾತು ಕಲಿಸುವುದಕ್ಕಾಗಿಯೇ ಶಾಲೆಯೊಂದನ್ನು ತೆರೆದು ಸಾವಿರಾರು ಮಕ್ಕಳಿಗೆ ಮಾತು ಕಲಿಸಲು ಕಾರಣರಾದ ದಿ. ಕೆ. ಕೆ. ಶ್ರೀನಿವಾಸನ್, ಅವರ ಪತ್ನಿ ರತ್ನಾ, ಶಾಲೆಯ ಮುಖ್ಯಸ್ಥೆ ರತ್ನಾ ಶೆಟ್ಟಿ ಮತ್ತು ಉಮಾ ಆಂಟಿ, ಶಾಲೆಯ ಎಲ್ಲ ಶಿಕ್ಷಕಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು.
ಇಡೀ ಭಾರತದಲ್ಲಿಯೇ ಕಿವುಡು ಮಕ್ಕಳ ಶಿಕ್ಷಣಕ್ಕೆ ಒಂದು ಸ್ಪಷ್ಟ ರೂಪವನ್ನು ನೀಡಲು ಶ್ರಮಿಸಿದ, ನನ್ನ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟ ಹಿರಿಯ ಜೀವ ಗೌರವಾನ್ವಿತ ನ. ರತ್ನ ಅವರನ್ನು ನಾನು ಎಷ್ಟು ನೆನೆದರೂ ಸಾಲದು.
- ರವೀಂದ್ರ ಭಟ್ಟ
ಪುಟಗಳು: 152
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !