ಲೇಖಕರು:
ಕಾರ್ಲ್ ಮಾರ್ಕ್ಸ್
ಕನ್ನಡಕ್ಕೆ ಕೆ. ಎಲ್. ಗೋಪಾಲಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕಾರ್ಲ್ ಮಾರ್ಕ್ಸ್ ಹುಟ್ಟಿದ್ದು ಇನ್ನೂರು ವರ್ಷಗಳ ಹಿಂದೆ, ೧೮೧೮ರ ಮೇ ೫ರಂದು. ಆತ ಜೀವಿಸಿದ್ದು ಕೇವಲ ೬೫ ವರ್ಷಗಳ ಕಾಲ. ಆದರೆ ದುಡಿಯುವ ಜನರ ಮತ್ತು ತತ್ತ್ವಶಾಸ್ತ್ರಜ್ಞರ ನಡುವೆ ಆತ ಜೀವಂತವಾಗಿದ್ದಾನೆ. ಆತನ ವ್ಯಾಪಕ ಚಿಂತನೆ ಮತ್ತು ಪ್ರಭಾವವನ್ನು ಕಂಡು ಕಂಗೆಡುವ ಮಂದಿ ಪ್ರತಿಯೊಂದು ದಶಕದಲ್ಲೂ ಅವನು ಸತ್ತ, ಅವನ ಚಿಂತನೆಯು ಮಾಸಿಹೋಗಿದೆ, ಅವನು ಅಪ್ರಸ್ತುತ, ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗೆನ್ನುವಾಗ ಅವರ ಹುಸಿ ನಂಬಿಕೆಯ ಬಗ್ಗೆ ಅವರಿಗೇ ವಿಶ್ವಾಸವಿಲ್ಲ, ಏಕೆಂದರೆ ಅವನ ತತ್ತ್ವವನ್ನು ಪದೇ ಪದೇ ಖಂಡಿಸುತ್ತಲೇ ಇರುತ್ತಾರೆ. ಜಾಗತಿಕವಾಗಿ ಅವನಿಗೆ ಮಾನ್ಯತೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಅವನಿಗೆ ತೆಗಳಿಕೆಯೂ ಸಲ್ಲುತ್ತಿರುತ್ತದೆ. ಬೇರೆಷ್ಟೋ ಅವನ ಚಿಂತನೆಗಳು ಮೂದಲಿಕೆಗೆ ಗುರಿಯಾಗಿದ್ದರೂ ಮತಧರ್ಮದ ಹುಟ್ಟು ಮತ್ತು ಸ್ವರೂಪದ ಬಗ್ಗೆ ಅವನು ಪ್ರತಿಪಾದಿಸಿರುವುದನ್ನು ಪ್ರಶ್ನಿಸಿ ಅವನನ್ನು ಅಪವಾದಕ್ಕೆ ಗುರಿಮಾಡಿರುವುದು ವಿಶಿಷ್ಟವೆನಿಸುತ್ತದೆ. “ಮಾರ್ಕ್ಸ್ ಮತಧರ್ಮವನ್ನು ಅಫೀಮು ಎಂದುಬಿಟ್ಟಿದ್ದಾನೆ” ಎಂದು ಅದೆಷ್ಟು ಪ್ರಖರವಾಗಿ ನುಡಿಯಲಾಗುತ್ತದೆಂದರೆ ನಿಜಕ್ಕೂ ಅವನು ಹಾಗೆ ಹೇಳಿದ್ದಾನೋ ಎಂಬ ಭಾವನೆ ಸಾಂದ್ರವಾಗಿ ಮೂಡಿಬಿಡುತ್ತದೆ. ಹಾಗಿದ್ದರೆ ಮತಧರ್ಮದ ಉಗಮ, ಪ್ರಭಾವ, ಸಾಮಾಜಿಕ ನೆಲೆ, ಇತ್ಯಾದಿಗಳನ್ನು ಕುರಿತಂತೆ ಅವನದೇ ನಿಲುವೇನಿದ್ದಿತು ಮತ್ತು ಅದಕ್ಕೆ ಅವನ ಸಮರ್ಥನೆ ಏನಾಗಿತ್ತು? ಇದು ಪರಿಶೀಲನೆಗೆ ಯೋಗ್ಯವಾದ ವಿಷಯ. ಪ್ರಸ್ತುತ ಗ್ರಂಥವು ಅದನ್ನು ಸ್ಥೂಲವಾಗಿ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಕ್ಸ್ ಪ್ರತ್ಯೇಕವಾದ ಗ್ರಂಥವನ್ನೇನೂ ಬರೆಯಲಿಲ್ಲ. ಸಾಂದರ್ಭಿಕವಾಗಿ ಹಲವು ವಿಷಯಗಳ ಚರ್ಚೆಯ ನಡುವೆ ಮತಧರ್ಮದ ಪ್ರಸ್ತಾಪವು ಸಹಜವಾಗಿಯೇ ಬಂದಿದೆ ಮತ್ತು ಅದು ವಿಪುಲವಾಗಿಯೂ ಇದೆ. ಅಂತಹ ಭಾಗಗಳಲ್ಲಿ ಕೆಲವನ್ನು ಆಯ್ದು ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಮತಧರ್ಮದ ಬಗ್ಗೆ ಮಾರ್ಕ್ಸ್ ಯಾವ ದೃಷ್ಟಿಯನ್ನಿರಿಸಿಕೊಂಡಿದ್ದನೆಂಬುದು ಈ ಕೆಲವು ಬರಹಗಳಿಂದ ಸ್ಪಷ್ಟವಾಗುತ್ತದೆಂಬ ನಿರೀಕ್ಷೆಯಿಂದ ಈ ಸಂಕಲನವನ್ನು ಓದುಗರ ಮುಂದೆ ಇಡಲಾಗುತ್ತಿದೆ.
ಪುಟಗಳು: 116
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !