ನಾವು ಯಾವುದಾದರೂ ಸ್ಥಳಕ್ಕೆ ಪ್ರವಾಸ ಮಾಡುವ ಮುನ್ನ ಅಲ್ಲಿನ ವಾತಾವರಣ, ವಸತಿ, ಪ್ರೇಕ್ಷಣೀಯ ಸ್ಥಳಗಳು, ಊಟೋಪಚಾರ ಸ್ಥಳಗಳು, ವಾಹನ ಸೌಕರ್ಯ ಹೀಗೆ ಹಲವು ವಿಷಯಗಳನ್ನು ಸಂಗ್ರಹಿಸುತ್ತೇವೆ. ಇನ್ನೂ, ಹೋಗಬೇಕಾದ ಸ್ಥಳ ವಿದೇಶವಾದರಂತೂ ಪ್ರವಾಸ ವ್ಯವಸ್ಥೆ ಜೊತೆಗೆ ಅಲ್ಲಿನ ಸುರಕ್ಷತೆ, ರೀತಿ ರಿವಾಜು, ಆಹಾರ ವಿಹಾರ, ಅಲ್ಲಿನ ಜೀವನ ಶೈಲಿ, ವಸತಿ ಮತ್ತು ಸಾರಿಗೆ ವ್ಯವಸ್ಥೆ, ಸಂವಹನದ ಭಾಷೆ, ಅಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳು ಹಾಗೂ ಅಲ್ಲಿನ ಹವಾಮಾನ ಇವುಗಳು ಗೊತ್ತಿರಲೇ ಬೇಕು. ಇಂದಿನ ದಿನಗಳಲ್ಲಿ ನಾವು ಎಲ್ಲವಕ್ಕೂ ಮಾಧ್ಯಮಗಳನ್ನು ಅವಲಂಬಿಸುತ್ತೇವೆ. ಆದಾಗ್ಯೂ ನಮ್ಮ ಪ್ರವಾಸವನ್ನು ಹೆಚ್ಚು ಅಚ್ಚುಕಟ್ಟಾಗಿ ಮಾಡಿಕೊಳ್ಳಲು, ಹೋಗುವ ಮುನ್ನ ಮನೆಯವರಿಗೂ ನಮ್ಮ ಸುರಕ್ಷಿತ ಪ್ರವಾಸವನ್ನು ಮನವರಿಕೆ ಮಾಡಿ ನೆಮ್ಮದಿ ಕೊಡಲು ಮಾಹಿತಿ ಪುಸ್ತಕಗಳು ತುಂಬಾ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಕೆನಡಾ ದೇಶದ ಪ್ರವಾಸವನ್ನು ಕುರಿತು ನನ್ನ ಅನುಭವವನ್ನು ಈ ಮೂಲಕ ಹಂಚಿಕೊಂಡಿದ್ದೇನೆ. ಇಲ್ಲಿ ಹೇಳಿರುವುದೇ ಸಮಗ್ರ ಎನ್ನಲಾಗದು. ಸಂಗ್ರಹಿಸಿದ ಮಾಹಿತಿಗಳನ್ನು ವಿಷಯಾಧಾರಿತವಾಗಿ ಪ್ರತ್ಯೇಕ ಭಾಗಗಳನ್ನಾಗಿ ಮಾಡಿ ಕೊಡಲಾಗಿದೆ. ಓದುಗರು ತಮಗೆ ಬೇಕಾದ ಭಾಗವನ್ನು ಆಯ್ಕೆ ಮಾಡಿ ಓದಬಹುದು. ತಮಗೆ ಈ ಪುಸ್ತಕ ಉಪಯೋಗವಾಗಲಿ ಎಂದು ಹಾರೈಸುತ್ತೇನೆ.