Click here to Download MyLang App

ಲೋಕೋತ್ತಮೆ ಮತ್ತು ಕಾಲಯಾತ್ರೆ (ಇಬುಕ್),  ಚನ್ನಕೇಶವ,  Lokottame Kaalayatre,  Chennakeshava,

ಲೋಕೋತ್ತಮೆ ಮತ್ತು ಕಾಲಯಾತ್ರೆ (ಇಬುಕ್)

e-book

ಪಬ್ಲಿಶರ್
ಚನ್ನಕೇಶವ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೋಕೋತ್ತಮೆ: ಚನ್ನಕೇಶವ ಮತ್ತು ಲೇಖಕರಾದ ಡಾ. ವಿಶಾಲಾ ವಾರಣಾಶಿ ಅವರು ಭಾವಾನುವಾದ ಮಾಡಿದ, ಸುಮಾರು ಕ್ರಿ.ಪೂ ೪೧೧ ರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೋಫಿನಿಸ್ ನಿಂದ ರಚಿತವಾದ ನಾಟಕವಿದು. ಸ್ಪಾರ್ಟಾ ಹಾಗೂ ಅಥೆನ್ಸ್ ನಗರ ಗಳ ನಡುವೆ ನಿಯಮಿತವಾಗಿ ನಡೆಯುತ್ತಿದ್ದ ಯುದ್ಧಗಳಿಂದ ಕಂಗೆಟ್ಟಿದ್ದ ಆ ಎರಡೂ ನಗರಗಳ ಹೆಣ್ಣು ಮಕ್ಕಳು ಲೈಸಿಸ್ಟ್ರಾಟ ಎಂಬ ಹೆಣ್ಣು ಮಗಳ ನೇತೃತ್ವದಲ್ಲಿ ಒಂದು ಕ್ರಾಂತಿಕಾರಕ ನಿರ್ಧಾರಕ್ಕೆ ಬರುತ್ತಾರೆ. ಯುದ್ಧ ನಿಲ್ಲಿಸಿ ಎರಡೂ ನಗರಗಳು ಶಾಂತಿಯ ಒಪ್ಪಂದಕ್ಕೆ ಬರುವವರೆಗೂ ತಾವುಗಳು ಯಾರೂ ತಮ್ಮ ತಮ್ಮ ಗಂಡಂದಿರೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿ ಊರಿನ ಹಣಕಾಸಿನ ಸೌಧವನ್ನು ವಶಪಡಿಸಿಕೊಂಡು ಎಲ್ಲ ಹೆಂಗಸರೂ ಅಲ್ಲಿ ಸೇರಿಕೊಂಡು ಪ್ರತಿಭಟಿಸ ತೊಡಗುತ್ತಾರೆ. ಹೆಂಗಸರ ಈ ವಿಚಿತ್ರ ಪ್ರತಿಭಟನೆಗೆ ಕಡೆಗೆ ವಿಧಿಯಿಲ್ಲದೆ ಗಂಡಸರೆಲ್ಲ ಬಗ್ಗಿ ಶಾಂತಿ ಒಪ್ಪಂದಕ್ಕೆ ಬಂದು ಯುದ್ಧದಿಂದ ವಿಮುಖರಾಗುತ್ತಾರೆ. ಇದೂ ಸಹ ಮೇಲಿನ ನಾಟಕದಂತೆ ರೂಪಕದ ಮಾದರಿಯಲ್ಲಿದ್ದು ನಟರ ತಂಡ, ಸಂಗೀತದ ಮೇಳ ಇವನ್ನೆಲ್ಲ ಯಶಸ್ವಿಯಾಗಿ ಬಳಸಿಕೊಂಡು ಮಾಡಬಹುದಾದ ನಾಟಕವಾಗಿದೆ. ಅಲ್ಲದೆ ನೀನಾಸಮ್ ತಿರುಗಾಟಕ್ಕೆ ಚನ್ನಕೇಶವ ಅವರು ಯಶಸ್ವಿಯಾಗಿ ಈ ನಾಟಕವನ್ನು ನಿರ್ದೇಶನ ಮಾಡಿದ್ದರು ಕೂಡ.

ಕಾಲಯಾತ್ರೆ: ರವೀಂದ್ರನಾಥ ಟ್ಯಾಗೋರರ ಅಷ್ಟೇನೂ ಪ್ರಸಿದ್ಧವಲ್ಲದ ಸಣ್ಣ ರೂಪಕದಂತಹ ನಾಟಕ ಇದು. ಇದನ್ನು ನೇರ ಬಂಗಾಳಿಯಿಂದ ಮೀರಾ ಚಕ್ರವರ್ತಿಯವರ ಸಹಾಯದಿಂದ ಕನ್ನಡಕ್ಕೆ ತಂದಿದ್ದಾರೆ ಚನ್ನಕೇಶವ ಅವರು. ಅದೆಷ್ಟು ಚೆನ್ನಾಗಿ ಇದನ್ನು ಕನ್ನಡಕ್ಕೆ ತಂದಿದ್ದಾರೆ ಎಂದರೆ ಎಂದರೆ ಓದುತ್ತಿದ್ದರೆ ಖುಷಿಯಾಗುತ್ತದೆ. ಅನಾದಿಕಾಲದಿಂದಲೂ ಇರುವ ಮಹಾಕಾಲದ ರಥವು ಇಂದು ಯಾರು ಬಂದು ಎಷ್ಟೇ ಬೊಬ್ಬೆ ಹೊಡೆದರೂ ಒಂದಿಂಚೂ ಅಲುಗದೆ ನಿಂತುಬಿಟ್ಟಿದೆ! ಹಿಂದೆಲ್ಲ ರಾಜ ಮಹಾರಾಜರು ಬಂದು ಪೂಜೆ ಮಾಡಿ ಕೈ ಹಚ್ಚುತ್ತಿದ್ದಂತೆ ಚಲಿಸುತ್ತಿತ್ತು, ನಂತರ ರಾಜ ಪುರೋಹಿತರುಗಳು ಬಂದು ಕೈಮುಗಿದು ಕೈ ಹಚ್ಚಿದಾಗ ಚಲಿಸುತ್ತಿತ್ತು, ತದನಂತರ ಪಟ್ಟಣಶೆಟ್ಟಿಗಳು ಬಂದಾಗ ಚಲಿಸುತ್ತಿತ್ತು. ಆದರೆ ಇಂದು ಇವ್ಯಾರಿಗೂ ಅದು ಕಮಕ್‌ಕಿಮಕ್ಕೆನ್ನದೆ ತನ್ನ ಇಂದಿನ ಚಾಲಕರಾದ ಶೂದ್ರರ ದಾರಿ ಕಾಯುತ್ತ ಕುಳಿತಿದೆ ಈ ಮಹಾಕಾಲನ ರಥ! ಕುವೆಂಪುರವರ ಬಹಳ ಪ್ರಸಿದ್ಧ ನಾಟಕ ಶೂದ್ರತಪಸ್ವಿ ಯನ್ನು ನೆನಪಿಸುವಂತಿದೆ ಈ ನಾಟಕ. ಮತ್ತೊಮ್ಮೆ ಸಂಗೀತ, ಮೇಳ, ಹಾಗೂ ರಂಗಸಜ್ಜಿಕೆಯನ್ನು ಯಶಸ್ವಿಯಾಗಿ ರಂಗದ ಮೇಲೆ ಕಾಣಬಹುದಾದ ನಾಟಕವಿದು.

ಇವಿಷ್ಟೂ ನಾಟಕಗಳನ್ನು ಓದಿದ ನಂತರ ಚನ್ನಕೇಶವ ಅವರ ರಂಗ ಅಭಿರುಚಿಯೂ ಸಹ ಇದರಲ್ಲಿ ಗೋಚರವಾಗುತ್ತದೆ. ಅವರು ಬರಿದೆ ಮನರಂಜನೆಯನ್ನು ನೀಡುವ ನಾಟಕಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಎಲ್ಲವೂ ಆಂತರ್ಯದಲ್ಲಿ ಆಯಾ ಕಾಲದ ಏರಿಳಿತಗಳನ್ನು ಧ್ವನಿಸುವಂತಹ ನಾಟಕಗಳನ್ನೇ ಆರಿಸಿಕೊಂಡು ಬರೆದುಕೊಂಡಿದ್ದಾರೆ. ಮತ್ತು ಈ ಎಲ್ಲಾ ನಾಟಕಗಳಲ್ಲಿ ಬರೀ ನಟರೇ ಮುಖ್ಯವಾಗಿರದೆ ನಾಟಕೀಯತೆಯೇ ಪ್ರಧಾನವಾಗಿವೆ. ಸಂಗೀತ, ಸಂಗೀತದ ಮೇಳ, ಸೂತ್ರಧಾರ, ಅವರ ಹಿಮ್ಮೇಳ, ಇವೆಲ್ಲವೂ ಗ್ರೀಕ್ ನಾಟಕಗಳಲ್ಲಿ ಹಾಗೂ ನಮ್ಮ ಜನಪದ ನಾಟಕಗಳಲ್ಲಿ ಕಾಣಬಹುದಾದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಯಶಸ್ವೀ ನಾಟಕೀಯ ತಂತ್ರಗಳಾಗಿವೆ. ಈ ತಂತ್ರಗಳನ್ನು ಚನ್ನಕೇಶವ ಅವರು ತಮ್ಮ ಬಹುತೇಕ ನಾಟಕಗಳಿಗೆ ಬಹಳ ಯಶಸ್ವಿಯಾಗಿ ಕಸಿಮಾಡಿಕೊಂಡಿದ್ದಾರೆ.

ಇನ್ನು ಅವರು ಸ್ವತಃ ಚಿತ್ರ ಕಲಾವಿದರಾಗಿರುವುದರಿಂದ ಇಡೀ ರಂಗವನ್ನೇ ಒಂದು ಕ್ಯಾನ್ವಾಸಿನಂತೆ ಮಾಡಿಕೊಂಡು ರಂಗಭೂಮಿಯ ರಂಗಸಜ್ಜಿಕೆ, ಪರಿಕರ, ವೇಷಭೂಷಣ, ನಟನಟಿಯರು, ಬೆಳಕು ಹೀಗೆ ಎಲ್ಲಾ ರಂಗ ಸಂಪನ್ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಕಲಾಕೃತಿಗಳನ್ನು ಕಟ್ಟಬಲ್ಲವರಾಗಿದ್ದರು. ಅವರ ಈ ನಾಟಕಗಳಲ್ಲಿ ಬರುವ ಗುಂಪು ಗುಂಪು ಸನ್ನಿವೇಶಗಳು, ಸಂಗೀತದ ಮೇಳ ಇವೆಲ್ಲವೂ ಬರಿದೆ ಅವರ ರಂಗದ ಮೇಲಿನ ನಾಟಕಕ್ಕಷ್ಟೆ ಸಂಬಂಧಿಸಿದ್ದಲ್ಲದೆ ಒಟ್ಟೂ ಅವರ ರಂಗಜೀವನವನ್ನೇ ಸೂಚಿಸುವಂತಿದೆ. ಅವರ ನಾಟಕಗಳಲ್ಲಿ ರಂಗದ ಮೇಲೆ ಕಾಣುವ ನಟನಟಿಯರ ಗುಂಪಿಗಿಂತ ದುಪ್ಪಟ್ಟು ನಾಟಕದ ಹೊರಗೆ, ಹಿಂದೆ, ಮುಂದೆ, ಅಕ್ಕ-ಪಕ್ಕ ಸದಾ ಅವರೊಂದಿಗೆ ಕಾಣಬಹುದಾಗಿತ್ತು. ಇದು ಅವರ ರಂಗ ಕೃಷಿಗೆ ಒಂದು ಉದಾಹರಣೆ. ಇಲ್ಲಿನ ಯಾವ ನಾಟಕವನ್ನೂ ಅವರು ಬೆಂಗಳೂರಿನಂತಹ ಕೇಂದ್ರದಲ್ಲಿ ಕುಳಿತು ಮಾಡಿದ ನಾಟಕಗಳಲ್ಲ. ಎಲ್ಲವೂ ಕರ್ನಾಟಕದ ಬೇರೆ ಬೇರೆ ಊರುಗಳ ಬೇರೆ ಬೇರೆ ತಂಡಗಳಿಗೋಸ್ಕರ ಬರೆದು ಮಾಡಿದಂತವು. ಹಾಗೆ ನಾಟಕ ಆಡಿಸಲು ಹೋಗುವಾಗ ಅವರೊಬ್ಬರೇ ಎಲ್ಲೋ ಯಾವುದೋ ಊರಿಗೆ, ತಂಡಕ್ಕೆ ಹೋಗಿ ನಾಟಕ ಮಾಡಿಸಿ ಬಂದ ಉದಾಹರಣೆಗಳೇ ನಮಗೆ ಸಿಗುವುದಿಲ್ಲ. ರಂಗಭೂಮಿ ಎಂಬುದು ಒಂದು ಸಮಷ್ಠಿ ಪ್ರಕ್ರಿಯೆ ಎಂಬುದು ಅವರ ನಾಟಕದ ಪ್ರಾಸೆಸ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹಳ ಚೆನ್ನಾಗಿ ಅನುಭವಕ್ಕೆ ದಕ್ಕುವ ವಿಷಯವಾಗಿತ್ತು. ಇಂಥ ಸಂದರ್ಭಗಳಲ್ಲಿಯೇ ನಿಜವಾದ ‘ರಂಗಪುರಾಣಗಳ’ ಹೇಳಿಕೆ ಕೇಳಿಕೆ, ಕಟ್ಟುವಿಕೆ, ಕೆಡವುವಿಕೆಗಳು ನಡೆಯುತ್ತಿದ್ದವು! ಇವೆಲ್ಲವೂ ಸಹ ಎಲ್ಲರನ್ನೂ ರಂಗಭೂಮಿಯಲ್ಲಿ ಇನ್ನೂ ನಿಖಟವಾಗಿ, ಆಪ್ತವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂಥ ಪ್ರೇರೇಪಣೆಯ ಕೇಂದ್ರ ಬಿಂದುವಾಗಿದ್ದರು ಚನ್ನಕೇಶವ ಅವರು.

ಇದೀಗ ರಂಗಭೂಮಿಗೆ ಬಂದ ಹೊಸ ಹುಡುಗ ಹುಡುಗಿಯರಿಂದ ಹಿಡಿದು ಹತ್ತಾರು ವರ್ಷಗಳು ಕೆಲಸ ಮಾಡಿಕೊಂಡಿರುವ ರಂಗಕರ್ಮಿಗಳ ಸಮೇತ ಎಲ್ಲರಿಗೂ ಅವರು ಒಬ್ಬ ಒಳ್ಳೆಯ ಗೆಳೆಯ, ಗುರು, ಮಾರ್ಗದರ್ಶಕ, ರಂಗಪುರಾಣದ ಅದ್ವರ್ಯು, ಹೀಗೆ ಎಲ್ಲವೂ ಆಗಿದ್ದರು. ಈ ಗುಣ ಅವರ ಫಾರ್ಮ್‌ಗೂ ಸಹಜವಾಗಿ ವ್ಯಾಪಿಸಿತ್ತು. ಅದಕ್ಕೆ ಉದಾಹರಣೆಯಾಗಿ ಇಲ್ಲಿನ ನಾಟಕಗಳನ್ನು ನೋಡಬಹುದಾಗಿದೆ. ಇಲ್ಲಿನ ಬಹುತೇಕ ನಾಟಕಗಳು ಅತ್ತ ಸಾಹಿತ್ಯ ಕೃತಿಗಳಂತೆ ಘನವೂ ಅಲ್ಲದ, ಜಡವೂ ಅಲ್ಲದ, ತಾಲೀಮು ಪಠ್ಯ ಅಥವಾ ಪ್ರೊಡಕ್ಷನ್ ಸ್ಕ್ರಿಪ್ಟ್ ಎಂದು ನಾವೇನು ಕರೆಯುತ್ತೇವೋ ಅವನ್ನು ಹೋಲುತ್ತಿರುವಂತಿವೆ. ಇದೇ ಕಾರಣದಿಂದ ಚನ್ನಕೇಶವ ಅವರು ಇವನ್ನು ಪ್ರಕಟಿಸುವ ಗೋಜಿಗೆ ಹೋಗಿರಲಿಲ್ಲ ಎಂದು ಕಾಣುತ್ತದೆ. ಮೊದಲೇ ನಾಟಕಗಳ ಅಭಾವವಿರುವ ಈ ಸಂದರ್ಭದಲ್ಲಿ ಏನಿಲ್ಲದೆ ಹೋದರೂ ಕನ್ನಡ ರಂಗಭೂಮಿಗೆ ಎಂಟು ಹೊಸ ನಾಟಕ ಕೃತಿಗಳು ಸಿಕ್ಕಂತಾಗುತ್ತದೆ. ಆ ದೃಷ್ಟಿಯಿಂದ ಇವನ್ನೆಲ್ಲ ಆರಿಸಿ, ಸಂಕಲನ ಮಾಡಿ, ಮುತುವರ್ಜಿಯಿಂದ ಪ್ರಕಟಿಸುತ್ತಿರುವ ಥಿಯೇಟರ್ ತತ್ಕಾಲ್ ಬುಕ್ಸ್ ಪ್ರಕಾಶನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

- ಮೌನೇಶ ಬಡಿಗೇರ

 

ಪುಟಗಳು : 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)