ಲೇಖಕರು:
ಎಸ್. ಪಿ. ಶುಕ್ಲಾ, ಜಯಾ ಮೆಹ್ತಾ, ವಿನೀತ್ ತಿವಾರಿ ಡಾ|| ಸಿದ್ದನಗೌಡ ಪಾಟೀಲ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಇಂದು ಭಾರತ ಎದುರಿಸುತ್ತಿರುವ ಭೀಕರ ಸಮಸ್ಯೆಗಳಲ್ಲಿ ಕೃಷಿ ಕ್ಷೇತ್ರದ ಬಿಕ್ಕಟ್ಟು ಪ್ರಮುಖ ಎನ್ನಬಹುದು. ದೇಶದಲ್ಲಿ ನವ-ಉದಾರವಾದಿ ನೀತಿಗಳ ಆಳ್ವಿಕೆ ಪ್ರಾರಂಭವಾದ ಕಳೆದೆರಡು ದಶಕಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಗಳ ನೀತಿಗಳಿಂದಾಗಿ ಕೃಷಿ ಕ್ಷೇತ್ರ ಕಾರ್ಪೊರೇಟ್ ಕುಳಗಳ ಮಡಿಲು ಸೇರುತ್ತಿದೆ. ಗ್ರಾಮೀಣ ಜನತೆ ಉದ್ಯೋಗವನ್ನರಸಿ ವಲಸೆ ಹೋಗುವ ದುಃಸ್ಥಿತಿ ಎದುರಾಗಿ ಬಹುತೇಕ ಹಳ್ಳಿಗಳು ಬಿಕೋ ಎನ್ನುತ್ತಿವೆ. ದೇಶದೆಲ್ಲೆಡೆ ರೈತರು ಸಂಘಟಿತರಾಗಿ ಸರ್ಕಾರದ ನೀತಿಗಳ ವಿರುದ್ಧ ದಂಗೆ ಏಳುತ್ತಿದ್ದಾರೆ, ತಮ್ಮ ಘನತೆಯ ಬದುಕಿಗಾಗಿ ಹೋರಾಟ ನಡೆಸಿದ್ದಾರೆ. ಜೋಶಿ-ಅಧಿಕಾರಿ ಸಮಾಜ ಅಧ್ಯಯನ ಸಂಸ್ಥೆಯನ್ನು ನಿರ್ವಹಿಸುತ್ತಿರುವ ಯೋಜನಾ ಆಯೋಗದ ನಿಕಟಪೂರ್ವ ಸದಸ್ಯರಾಗಿದ್ದ ಎಸ್.ಪಿ.ಶುಕ್ಲಾ, ಹಿರಿಯ ಆರ್ಥಿಕ ತಜ್ಞೆ ಜಯಾ ಮೆಹ್ತಾ ಮತ್ತು ಸಾಮಾಜಿಕ ಹೋರಾಟಗಾರ ವಿನೀತ್ ತಿವಾರಿಯವರು ದಶಕಗಳಿಂದ ರೈತರ ಮತ್ತು ಕೃಷಿ ಕೂಲಿಕಾರರ ಬದುಕಿನ ಜೊತೆ ನೇರ ಒಡನಾಟದಲ್ಲಿದ್ದು ಭಾರತದ ಕೃಷಿ ಕ್ಷೇತ್ರದ ಅಧ್ಯಯನ ಕೈಗೊಂಡಿದ್ದಾರೆ. ನಾಡಿನ ಖ್ಯಾತ ಸಾಹಿತಿ ಹಾಗೂ ಹೋರಾಟಗಾರರಾದ ಡಾ|| ಸಿದ್ದನಗೌಡ ಪಾಟೀಲರು ತಮ್ಮ ಲೇಖನದಲ್ಲಿ ರೈತ ಸಮುದಾಯದ ನಿನ್ನೆ-ನಾಳೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೃತಿಯು ದೇಶವನ್ನು ಬಾಧಿಸುತ್ತಿರುವ ಕೃಷಿ ಬಿಕ್ಕಟ್ಟಿಗೆ ಮೂಲ ಕಾರಣಗಳನ್ನು ಹುಡುಕುತ್ತ, ಇರುವ ವ್ಯವಸ್ಥೆಯೊಳಗೇ ಪರಿಹಾರಗಳನ್ನು ಸೂಚಿಸುತ್ತದಲ್ಲದೆ, ಕೃಷಿ ಚಟುವಟಿಕೆಯಲ್ಲಿ ಬದುಕನ್ನೇ ಸವೆಸಿದರೂ ಕೃಷಿಕಳೆನಿಸಿಕೊಳ್ಳದ ಕೃಷಿ ಕ್ಷೇತ್ರದಲ್ಲಿನ ಮಹಿಳೆಯ ಬವಣೆಗಳನ್ನು ಚರ್ಚಾವಸ್ತುವಾಗಿ ಮುನ್ನೆಲೆಗೆ ತಂದಿರುವುದು ವಿಶೇಷ. ನಾಡನ್ನು ಪ್ರೀತಿಸುವ, ಅನ್ನದಾತರ ನೋವಿಗೆ ದನಿ ಗೂಡಿಸುವ, ಬಿಕ್ಕಟ್ಟು ನಿವಾರಿಸಬೇಕೆಂದು ಆಲೋಚಿಸುವ ಎಲ್ಲರಿಗೂ ಈ ಹೊತ್ತಗೆ ಕೈಪಿಡಿಯಾಗಲಿದೆ. ಅಂಕಿಅಂಶಗಳ ಸಹಿತ ವಸ್ತುನಿಷ್ಠವಾಗಿ ವೈಜ್ಞಾನಿಕವಾಗಿ ಓದುಗರ ಮುಂದಿಟ್ಟಿರುವ ವಿಚಾರಗಳು ಆರೋಗ್ಯಕರ ಚರ್ಚೆ-ಸಂವಾದ-ಕ್ರಿಯೆಗಳಿಗೆ ದಾರಿಯಾಗಲಿ.
ಪುಟಗಳು: 40
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !