ಪ್ರಕಾಶಕರು: ಇತಿಹಾಸ ದರ್ಪಣ ಪ್ರಕಾಶನ
Publisher: Itihasa Darpana Prakashana
ನಗರ ಮತ್ತು ಕೋಟೆಗಳು ಪ್ರಾಚೀನ ಕಾಲದಿಂದಲೂ ಪರಸ್ಪರ ಜೊತೆ ಜೊತೆಯಾಗಿಯೇ ಬೆಳೆದು ಬಂದಿವೆ. ಅಂಗಕ್ಕೆ ಅಂಗಿ ತೊಡಿಸಿದಂತೆ ನಗರಕ್ಕೆ ಕೋಟೆ ಕಟ್ಟುವ ಪರಂಪರೆ ಹರಪ್ಪ ಸಂಸ್ಕೃತಿಯ ಕಾಲದಿಂದಲೂ ನಡೆದು ಬಂದಿದೆ. ಮಧ್ಯಕಾಲೀನ ಸಂದರ್ಭದಲ್ಲಿಯಂತೂ ಪರಸ್ಪರ ಅವಲಂಬಿತವಾದ ಕೋಟೆ ಮತ್ತು ಪೇಟೆಗಳು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ರೂಪಿಸುವ, ಸ್ಥಿರಗೊಳಿಸುವ ಮತ್ತು ನಿಯಂತ್ರಿಸುವ ಅಂಶಗಳಾಗಿ ಗೋಚರಿಸುತ್ತವೆ. ಶಕ್ತಿ ಮತ್ತು ಸಂಪತ್ತಿನ ಕೇಂದ್ರಗಳಾದ ಕೋಟೆ ಮತ್ತು ಪೇಟೆಗಳು ಮಧ್ಯಕಾಲೀನ ಕರ್ನಾಟಕ ಸಂದರ್ಭದ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ನಿರ್ವಹಿಸಿದ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸವನ್ನು ಅರ್ಥೈಸುವ ಮತ್ತು ವಿಶ್ಲೇಷಿಸುವ ಅಧ್ಯಯನ ನಡೆದಿರುವುದು ವಿರಳ. ಕೋಟೆ ಮತ್ತು ಪೇಟೆಯ ಸಮೀಕರಣವನ್ನು ಚರಿತ್ರೆಯ ಒಳಗೆ ಬಿಡಿಸಿದವರು ಇನ್ನೂ ವಿರಳ. ಅಂತಹ ಅಪರೂಪದ ಪ್ರಯತ್ನವನ್ನು ನಡೆಸುವ ನಿಟ್ಟಿನಲ್ಲಿ ಎಸ್.ಕೆ. ಅರುಣಿ ಅವರು ëಕರ್ನಾಟಕ ಇತಿಹಾಸದ ಅನ್ವೇಷಣೆಗಳುí ಕೃತಿಯ ಮೂಲಕ ದೃಢವಾದ ಹೆಜ್ಜೆ ಇಟ್ಟಿದ್ದಾರೆಂದರೆ ತಪ್ಪಾಗಲಾರದು.
ಈ ಕೃತಿಯನ್ನು ಎರಡು ಭಾಗಗಳಾಗಿ ವಿಂಗಡಿಸಿರುವ ಅರುಣಿ ಅವರು, ಮೊದಲ ಭಾಗದಲ್ಲಿ ಕೋಟೆಗಳ ಬಗೆಗೂ, ಎರಡನೇ ಭಾಗದಲ್ಲಿ ನಗರಗಳ ಬಗೆಗೂ ವಿಶ್ಲೇಷಣೆ ನಡೆಸಿದ್ದಾರೆ. ಕೋಟೆಗಳಿಗೆ ಸಂಬಂಧಿಸಿದ ಮೊದಲ ಭಾಗವನ್ನು ಅರುಣಿ ಅವರು ಭಾರತೀಯ ಕೋಟೆಗಳನ್ನು ನಡೆಸುವ ಮೂಲಕ ಆರಂಭಿಸುತ್ತಾರೆ. ಇದು ಮುಂದಿನ ಅಧ್ಯಾಯಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವಿಸ್ತಾರವಾದ ಸಮೀಕ್ಷೆ ಭೂಮಿಕೆಯನ್ನು ಹಾಕಿ ಕೊಡುತ್ತದೆ. ಹರಪ್ಪ ನಾಗರಿಕತೆಯ ಕಾಲದಿಂದ ಅರ್ವಾಚೀನ ಕಾಲದವರೆಗೂ ಕೋಟೆಗಳು ಹೇಗೆ ವಿಕಾಸ ಹೊಂದುತ್ತಾ ಬಂದಿವೆ, ಪ್ರಾದೇಶಿಕವಾಗಿ ಕೋಟೆಗಳಲ್ಲಿ ಕಂಡುಬರುವ ಭಿನ್ನತೆಗಳೇನು ಎಂಬುದನ್ನು ಕೂಡ ಗುರುತಿಸುತ್ತಾ, ವಿವಿಧ ಮಾದರಿಯ ಕೋಟೆಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಎರಡನೆಯ ಬರಹದಲ್ಲಿ ಕರ್ನಾಟಕದಲ್ಲಿನ ಕೋಟೆಗಳನ್ನು ಅವಲೋಕಿಸುವ ಮೂಲಕ ಭೌಗೋಳಿಕವಾಗಿ ಭಾರತೀಯ ಪರಿಪ್ರೇಕ್ಷೆಯೊಳಗಿನ ಕೋಟೆಗಳು ಕರ್ನಾಟಕದಲ್ಲಿ ಹೇಗೆ ವಿಕಾಸಗೊಂಡು, ವಿನ್ಯಾಸಗೊಂಡಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗುವಂತೆ ವಿಶ್ಲೇಷಿಸಿದ್ದಾರೆ. ಇಲ್ಲಿ ಕೋಟೆಗಳ ವಿಕಾಸ ಕ್ರಮವನ್ನು ಹೇಳುತ್ತಲೇ ಓದುಗ ಅಚ್ಚರಿ ಪಡುವಂತೆ ಅಲ್ಲಲ್ಲಿ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಡುವ ಮೂಲಕ ಅಧ್ಯಯನದ ಅಭಿರುಚಿಯನ್ನು ಹತ್ತಿಸುತ್ತಾರೆ. ಹೀಗೆ ಲೇಖಕರು ಭಾರತೀಯ ಸಂದರ್ಭದಿಂದ ಕರ್ನಾಟಕದ ಸಂದರ್ಭಕ್ಕೆ ಕೋಟೆಯ ವಿಕಾಸಕ್ರಮಗಳನ್ನು ಹೇಳುತ್ತಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಯ್ದ (ಕಲಬುರ್ಗಿ, ನಂದಿದುರ್ಗ, ದೇವರಾಯನದುರ್ಗ) ಕೋಟೆಗಳನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಜೊತೆಗೆ ಹುಡೇವು ಎಂಬ ವಿಶಿಷ್ಟವಾದ ಗ್ರಾಮಗಳ ರಕ್ಷಣಾ ವಾಸ್ತುಗಳನ್ನು ಕುರಿತು ಗಮನ ಸೆಳೆಯುತ್ತಾರೆ. ಒಟ್ಟಾರೆ, ಮೊದಲ ಭಾಗದಲ್ಲಿ ಕೋಟೆಯ ವಿಕಾಸ ಮತ್ತು ವಿನ್ಯಾಸಗಳನ್ನು ಭಾರತದ ಪರಿಪ್ರೇಕ್ಷೆಯಿಂದ ಗ್ರಾಮದ ಪರಿದಿಯವರೆಗೆ ವಿಸ್ತರಿಸುತ್ತಾರೆ. ಅಂದರೆ, ಸಮಗ್ರ ಅಧ್ಯಯನದ ನೆಲೆಯಿಂದ ಸೂಕ್ಷ್ಮ ಅಧ್ಯಯನದ ನೆಲೆಗೆ ಜಿಗಿಯುವ ಅರುಣಿ ಅವರ ಕ್ರಮ ಮತ್ತು ಪ್ರಯತ್ನ ವಿಶಿಷ್ಟವಾದುದು. ಇಲ್ಲಿನ ಸಂಶೋಧನಾ ಬರಹಗಳು ಕೋಟೆಗಳನ್ನು ಕುರಿತು ಅಧ್ಯಯನ ನಡೆಸುವ ಸಂಶೋಧಕರಿಗೆ ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಿಗೆ ಮತ್ತು ಆಸಕ್ತರೆಲ್ಲರಿಗೂ ಉಪಯುಕ್ತವಾಗಬಲ್ಲದು.
- ಹಂ.ಗು. ರಾಜೇಶ್
ಸಂಪಾದಕರು, ಇತಿಹಾಸ ದರ್ಪಣ.
ಪುಟಗಳು: 122
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !