ಶಿವರಾಮ ಕಾರಂತರ ಲೇಖನಗಳು ಮಾಲೆಯ ಎಂಟನೆಯ ಸಂಪುಟವಿದು. ವಿಷಯಕ್ಕೆ ಅನುಗುಣವಾಗಿ ಕಾರಂತರ ಲೇಖನಗಳನ್ನು ಎಂಟು ಸಂಪುಟಗಳಲ್ಲಿ ಪ್ರಕಟಿಸುವ ಕೆಲಸ ಮತ್ತು ಲೇಖನಗಳ ಸಂಶೋಧನೆಯ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಲೇ ಬಂದಿರುವೆನಾದುದರಿಂದ, ಈ ಸಂಪುಟವೇ ಶಿವರಾಮ ಕಾರಂತರ ಲೇಖನಗಳ ಕೊನೆಯ ಸಂಪುಟವಲ್ಲ. ಎಂಟು ಸಂಪುಟಗಳ ಬಳಿಕ ಮತ್ತೂ 50ಕ್ಕಿಂತ ಅಧಿಕ ಲೇಖನಗಳ ಶಿಲ್ಕು ಉಳಿದಿರುವುದರಿಂದ, ಮುಂದೊಂದು ದಿನ ಅವನ್ನು ಮತ್ತು ಇನ್ನು ಮುಂದೆಯೂ ನಾನು ಸಂಗ್ರಹಿಸಲಿರುವ ಲೇಖನಗಳನ್ನು ಒಟ್ಟುಗೂಡಿಸಿ ಇನ್ನೊಂದು ಸಂಪುಟವನ್ನು ಹೊರತರುವ ಆಶೆಯನ್ನು ಇಟ್ಟುಕೊಂಡಿದ್ದೇನೆ. ಮಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿರುವ ಈ ಲೇಖನಮಾಲೆಗಳ ಮಟ್ಟಿಗೆ ಸದ್ಯಕ್ಕೆ ಇದೇ ಕೊನೆಯ ಸಂಪುಟವಾಗಿದೆ. ಇದರಲ್ಲಿ- ಕಾರಂತರ ಸೃಜನಶೀಲ ಬಿಡಿ ಬರಹಗಳನ್ನು ಕಾಣಬಹುದು. ಕಾರಂತರ ಸಾಹಿತ್ಯ, ಅವರ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಬೌದ್ಧಿಕ ವಾತಾವರಣಗಳ ಕುರಿತು, ಅವುಗಳು ಕಾರಂತರ ಮೇಲೆ ಮಾಡಿರಬಹುದಾದ ಪ್ರಭಾವಗಳ ಬಗ್ಗೆ, ಅವರ ಕೌಟುಂಬಿಕ ಹಿನ್ನೆಲೆ- ಮುಂತಾಗಿ ಹಲವು ಮಗ್ಗುಲುಗಳ ವಿಶ್ಲೇಷಣೆಯಿಂದ ಕಾರಂತರ ಲೇಖನಿಗೆ ದೊರಕಿರಬಹುದಾದ ಪ್ರೇರಣೆ, ಪ್ರಭಾವ, ಬರೆಯಬೇಕೆಂಬ ಉತ್ಕಟತೆಗೆ ದೊರಕಿದ ಪೋಷಣೆಗಳು- ಮೊದಲಾದವುಗಳ ವಿವರಗಳನ್ನು ಈಗಾಗಲೇ ಇತರ ಸಂಪುಟಗಳ ನನ್ನ ಸಮೀಕ್ಷೆಯಲ್ಲಿ ಹುಡುಕಲು ಪ್ರಯತ್ನಪಟ್ಟುದನ್ನು ನೀವು ಈಗಾಗಲೇ ಕಂಡುಕೊಂಡಿದ್ದೀರಿ. ಗ್ರಂಥಗಳ ಕಟ್ಟಿಗೆ ಸಿಲುಕದೆ, ಪ್ರಾಯಶಃ ಕಾರಂತರ ಕಣ್ಣಿಂದ ಮರೆಯಾಗಿ ಮೂಲೆಯಲ್ಲಿ ಅಡಗಿ ಕುಳಿತಿದ್ದ ಸೃಜನಶೀಲ ಬಿಡಿ ಬರಹಗಳನ್ನು (ಲಭ್ಯ) ಈ ಸಂಪುಟದಲ್ಲಿ ಸೇರಿಸಲಾಗಿದೆ. 500ಕ್ಕೆ ಸಮೀಪಿಸುವಷ್ಟು ಗ್ರಂಥಗಳ ವಿಪುಲ ಕಾಣಿಕೆಯನ್ನು ಕನ್ನಡ ವಾಗ್ದೇವಿಯ ಮಡಿಲಿಗೆ ತುಂಬಿಸಿದ ಕಾರಂತರು, ಅಂದಾಜು ಒಂದು ಸಾವಿರವನ್ನು ದಾಟಬಹುದಾದ ಬೃಹತ್ ಪ್ರಮಾಣದ ಲೇಖನಗಳನ್ನೂ ಕನ್ನಡ ಭಾಷಾದೇವಿಯ ಮುಡಿಗೆ ಏರಿಸಿದ್ದಾರೆ! ನನಗೆ ದೊರೆತ ಎಂಟ್ನೂರಕ್ಕೂ ಮಿಕ್ಕಿದ ಲೇಖನಗಳಲ್ಲಿ 50ಕ್ಕೂ ಅಧಿಕ ಬರಹಗಳು ಹಾಸ್ಯ, ಹರಟೆ, ವಿಡಂಬನೆಗಳಿಗೆ ಮೀಸಲಾಗಿವೆ. ಅವನ್ನು ಈ ಗ್ರಂಥದಲ್ಲಿ ಅಳವಡಿಸಲಾಗಿದೆ. ನಾಲ್ಕೈದು ಬಿಡಿ ನಾಟಕಗಳು, ಅಷ್ಟೇ ಸಂಖ್ಯೆಯ ಸಣ್ಣಕತೆಗಳನ್ನು ಹೊರತುಪಡಿಸಿದರೆ, ಈ ಸಂಪುಟದ ಹೆಚ್ಚಿನ ಪುಟಗಳು ಹರಟೆ, ವಿಡಂಬನೆ, ಚಾಟೂಕ್ತಿ ಮತ್ತು ಹಾಸ್ಯ ಲೇಖನ ಗಳಿಂದಲೇ ತುಂಬಿವೆ. ಜತೆಯಲ್ಲಿ, ಆರು ಗ್ರಂಥಗಳನ್ನೂ, (703 ಪುಟಗಳು) ಈ ವಿಷಯದ ಮೇಲೆ ಕಾರಂತರು ರಚಿಸಿದ್ದಾರೆ. ಅವರ ಇನ್ನಿತರ ಕೊಡುಗೆಗಳ ಜತೆಯಲ್ಲಿ- ಕನ್ನಡನುಡಿಯ ಲಘು ಸಾಹಿತ್ಯಕ್ಕೆ ಅವರು ಕೊಟ್ಟ ಕಾಣಿಕೆಯನ್ನು ಗಮನಿಸುವಾಗ- ಕಾರಂತರನ್ನು ನಾವು ʻಹಾಸ್ಯ ಸಾಹಿತಿ' ಎಂಬುದಾಗಿ ಧಾರಾಳವಾಗಿ ಕರೆಯಬಹುದು. ಹಾಸ್ಯ, ವಿಡಂಬನೆಗಳ ಸಾಲಿಗೆ ಸೇರುವ ಕಿರುಗತೆ, ನಾಟಕಗಳು ಕವನ ಸಂಕಲನ ಮತ್ತು ಕಾದಂಬರಿಗಳೂ ಸೇರಿ, ಎರಡು ಸಾವಿರಕ್ಕೂ ಅಧಿಕ ಪುಟಗಳ ಹಾಸ್ಯ, ವಿಡಂಬನ ಸಾಹಿತ್ಯವನ್ನು ಕಾರಂತರು ಸೃಷ್ಟಿಸಿದ್ದಾರೆ!
ಪುಟಗಳು: 534
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !