ಶಿವರಾಮ ಕಾರಂತರ ಲೇಖನಗಳ ದ್ವಿತೀಯ ಸಂಪುಟವಿದು. ಇದರಲ್ಲಿ- ಭಾಷೆ, ಶಿಕ್ಷಣ, ಸಂಸ್ಕೃತಿ ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಲೇಖನಗಳಿವೆ.
ಮನುಷ್ಯನ ವಿಕಾಸದ ವಿವಿಧ ಹಂತಗಳನ್ನು ಪರಿಶೀಲಿಸಿದಾಗ-ಆದಿಮಾನವ ತನ್ನವರೊಂದಿಗಿನ ಸಂವಹನ ಕ್ರಿಯೆಯಲ್ಲಿ ಧ್ವನಿ, ಸಂಕೇತ, ಸಂಜ್ಞೆಗಳನ್ನು ಬಳಸಿದ್ದು ತಿಳಿದು ಬರುತ್ತದೆ. ಯೋಚಿಸಬಲ್ಲ ಮಿದುಳನ್ನು ಪಡೆದಿರುವ ಮನುಷ್ಯ ಹಂತ, ಹಂತ ವಾಗಿ ಸಂಕೇತ, ಸಂಜ್ಞೆಗಳಿಗೆ ಶಬ್ದಗಳ ರೂಪವನ್ನು ಕೊಟ್ಟು, ಮಾತಿನ ಮೂಲಕ ತನ್ನ ಅನುಭವಗಳನ್ನು ವ್ಯಕ್ತಪಡಿಸಲು ಕಲಿತುಕೊಂಡಂತೆಲ್ಲ ಭಾಷೆ ಬೆಳೆಯುತ್ತ ಸಾಗಿತು. ಪ್ರಕೃತಿದತ್ತವಾದ, ಚಿಂತನಶೀಲತೆಯ ದೆಸೆಯಿಂದಲೇ ಮನುಷ್ಯ ಇತರೆಲ್ಲ ಜೀವಿಗಳಿಗಿಂತ ಉನ್ನತ ಮಟ್ಟದ ಬದುಕನ್ನು ಸಾಗಿಸುವುದು ಸಾಧ್ಯವಾಗಿದೆ. ಮಾನವ ಮಿದುಳಿನ ವಿಶಿಷ್ಟ ಸಾಧ್ಯತೆಯೇ ಭಾಷೆ; ಮನುಷ್ಯನ ಪಾಲಿಗೆ, ಚಿಂತನಶೀಲ ಮಿದುಳಿನ ಅತಿ ದೊಡ್ಡ ಕೊಡುಗೆಯೇ ಭಾಷೆ. ನಾಗರಿಕತೆ ಬೆಳೆದಂತೆಲ್ಲ-ಭಾಷೆಯೂ ಬೆಳೆಯುತ್ತ ಬಂದುದನ್ನು ಗಮನಿಸಬಹುದು. ಸಹಜೀವಿಗಳೊಂದಿಗಿನ ಸಂವಹನ ಕ್ರಿಯೆಯ ಮಾಧ್ಯಮ ವಾಗಿ ಹುಟ್ಟಿಕೊಂಡ ಭಾಷೆ ನಾಗರಿಕತೆಯ ಉನ್ನತಿಗೆ ಕಾರಣವಾದಂತೆಯೇ, ನಾಗರಿಕತೆಗಳ ನಾಶಕ್ಕೂ ಕಾರಣವಾದುದನ್ನು ಚರಿತ್ರೆ ತಿಳಿಸುತ್ತದೆ. ಈಯೊಂದು ಅಂಶವೇ, ಭಾಷೆಯ ಬಗೆಗಿನ ಚರ್ಚೆಯನ್ನು-ನಾಗರಿಕತೆಯ ಉಚ್ಛ್ರಾಯ ಸ್ಥಿತಿಯಲ್ಲಿ ಜೀವಿಸುತ್ತಿರುವ ನಾವಿಂದು ಮುಂದುವರಿಸಿಕೊಂಡೇ ಬಂದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಜ್ಞಾನದ ಪ್ರತಿಯೊಂದು ಶಾಸ್ತ್ರವನ್ನೂ ವೈಜ್ಞಾನಿಕವಾಗಿ, ವೈಚಾರಿಕವಾಗಿ ವಿಶ್ಲೇಷಣೆಗೆ ಒಳಪಡಿಸುವ ಇಂದಿನ ದಿನಗಳಲ್ಲಿ ಭಾಷೆಯನ್ನು ಸಹ ವೈಜ್ಞಾನಿಕವಾಗಿ ವಿಶ್ಲೇಷಿಸುವ-ಭಾಷಾಶಾಸ್ತ್ರವೇ ಹುಟ್ಟಿದೆ. "ಮಾನವಿಕ ವಿಜ್ಞಾನಗಳಲ್ಲಿಯೇ ಭಾಷಾ ವಿಜ್ಞಾನ ಹೆಚ್ಚು ವೈಜ್ಞಾನಿಕವಾದುದು; ವಿಜ್ಞಾನಗಳಲ್ಲಿಯೇ ಹೆಚ್ಚು ಮಾನವಿಕವಾದುದು"-ಎಂಬ ಪ್ರಶಂಸೆಗೆ ಭಾಷಾಶಾಸ್ತ್ರ ಪಾತ್ರವಾಗಿದೆ.
ಪುಟಗಳು: 550
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !