ಮಹಾನ್ ಸಾಹಿತಿ ಶಿವರಾಮ ಕಾರಂತರ ಬರಹಗಳ ಕುರಿತೊಂದು ಅಧಿಕೃತವಾದ ಮಾಹಿತಿ ಗ್ರಂಥ ಬೇಕೆಂದು ನನಗೆ ಅನಿಸಿದ್ದು 1987ರ ಸುಮಾರಿಗೆ. ಕಾರಂತರು ತಮ್ಮ ಬರಹಗಳನ್ನು ಒಂದಿಷ್ಟೂ ಇಟ್ಟುಕೊಳ್ಳದೆ ಇದ್ದುದರಿಂದ, ಆ ಕೆಲಸ ಮಾಡಲು ನನಗೆ ಅಂದು ಧೈರ್ಯ, ಆತ್ಮವಿಶ್ವಾಸಗಳಿಲ್ಲದೆ ಹೋದುದರಿಂದ, ಬೇರೊಬ್ಬ ಮಿತ್ರರನ್ನು ಒತ್ತಾಯಿಸುತ್ತಲೇ ಇದ್ದೆ. 1991ರಲ್ಲಿ ಕೋಟದ ಕಾರಂತ - 90 ಉತ್ಸವ ಸಮಿತಿಯವರು ಕಾರಂತರ ಕೃತಿಗಳನ್ನು ಕುರಿತೊಂದು ಮಾಹಿತಿ ಗ್ರಂಥ ಬೇಕೆಂದು ಕಾರಂತಾಭಿಮಾನಿಯೊಬ್ಬರನ್ನು ವಿನಂತಿಸಿದಾಗ ಅವರು ಈ ಕೆಲಸ ಮಾಡಲು ಒಪ್ಪಿಕೊಂಡುದು ನನಗೆ ವಿಶೇಷ ಸಂತೋಷ ವನ್ನುಂಟುಮಾಡಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಅದರ ಭಾರವನ್ನೆಲ್ಲ ನನ್ನ ತಲೆಯ ಮೇಲೆ ಹೊತ್ತು ಹಾಕಿ, ಅವರು ನಾಪತ್ತೆಯಾದರು. ಕರ್ತವ್ಯ ಪ್ರಜ್ಞೆಯಿಂದ, ಅದಾಗಲೇ ಪ್ರಕಟವಾಗಿದ್ದ ಮಾಹಿತಿಗಳ ಆಧಾರದಿಂದ ರಾತ್ರಿ, ಹಗಲು ದುಡಿದು (ಸಮಯಾಭಾವದಿಂದ) ಕಾರಂತ ಕೃತಿ ಕರಂಡವನ್ನು ಸಂಪಾದಿಸಿದೆ. ಈ ಗ್ರಂಥ ನನಗೆ ತೃಪ್ತಿಕೊಡಲಿಲ್ಲ. ಬದಲು, ಕಾರಂತರ ಬರಹಗಳ ಕುರಿತ ಸಮಗ್ರವಾದೊಂದು ಮಾಹಿತಿ ಗ್ರಂಥವನ್ನು ರಚಿಸಲು ಹಟ ತೊಡುವಂತೆ ಮಾಡಿತು. ಕಾರಂತರ ಬರಹಗಳ ಶೋಧನೆಗೆ ತೊಡಗಿದೆ. ಲೇಖನಗಳ ಪ್ರತಿಗಳಿಗಾಗಿ ಪತ್ರಿಕಾ ಪ್ರಕಟಣೆಗಳನ್ನು ಕೊಟ್ಟದ್ದಾಯಿತು. ಇದರಿಂದ, ಸುಮಾರು 25- 30 ಲೇಖನಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ, ಈ ಪತ್ರಿಕಾ ಪ್ರಕಟಣೆಯಿಂದ ಬೆಂಗಳೂರಿನ ಶ್ರೀಮತಿ ಎಸ್. ಕೆ. ರಮಾದೇವಮ್ಮನವರ ಪರಿಚಯವಾಯಿತು. ಆಕೆಗೆ, ಈ ಕೆಲಸಕ್ಕೆ ತಕ್ಕ ಜ್ಞಾನವಿದ್ದಿಲ್ಲವಾದರೂ, ಕೆಲಸ ಮಾಡುವ ಉಮೇದು ವಿಶೇಷವಾಗಿತ್ತು. ಅವರಿಗೆ ಮಾರ್ಗದರ್ಶನವೀಯುತ್ತ, ನನ್ನ ಕೆಲಸ ಮಾಡಿಸಿಕೊಂಡೆ. ಅವರ ಈ ಕೆಲಸಕ್ಕೆ ಆರ್ಥಿಕ ಅನಾನುಕೂಲತೆ ಅಡ್ಡ ಬರಬಾರದೆಂದು, ಕಾರಂತರು ಶ್ರೀಮತಿ ರಮಾದೇವಮ್ಮ ನವರಿಗೆ ಪ್ರಯಾಣ ಭತ್ತೆ, ಆಹಾರ ಭತ್ತೆ, ದ್ವಿಪ್ರತಿಯ ವೆಚ್ಚಗಳನ್ನು ಕೊಡುವಲ್ಲಿ ಧಾರಾಳತನ ತೋರಿಸಿದರು. ಅವರು ನನಗೆ ಒದಗಿಸಿದ ಲೇಖನಗಳೆಲ್ಲದರ ಜೆರಾಕ್ಸ್ ಪ್ರತಿಯೊಂದನ್ನು ತಾನೂ ಇರಿಸಿಕೊಳ್ಳುವೆನೆಂದುದಕ್ಕೆ, ಆ ವೆಚ್ಚವನ್ನೂ ಕಾರಂತರು ಭರಿಸಿದರು- ನನ್ನ ಕೆಲಸದ ಹೊರೆ ಒಂದಿಷ್ಟಾದರೂ ತಗ್ಗಲಿ- ಎಂಬುದಕ್ಕಾಗಿ. (ಮುಂದೆ, "ಶಿವರಾಮ ಕಾರಂತ ವಾಙ್ಮಯ ವೃತ್ತಾಂತ'' ಮತ್ತು ಕಾರಂತರ ಲೇಖನಗಳ 8 ಸಂಪುಟಗಳನ್ನು ಉಚಿತವಾಗಿ ಅವರಿಗೆ ನೀಡಿದ್ದೇನೆ). ಹೀಗೆ, ಸುಮಾರು 250ರಷ್ಟು ಕಾರಂತರ ಲೇಖನಗಳನ್ನು ಅನ್ಯರ ನೆರವಿನಿಂದ ನಾನು ಸಂಪಾದಿಸಿದೆ. ನನ್ನ ಸ್ವಂತ ದುಡಿಮೆಯಿಂದ ಸುಮಾರು 480 ಲೇಖನಗಳನ್ನು ಕಲೆಹಾಕಿ, 733 ಲೇಖನಗಳ ದೀರ್ಘ ಪಟ್ಟಿಯೊಂದನ್ನು ತಯಾರಿಸಿದೆ. ಅಲೆದಾಟ, ಹುಡುಕಾಟಗಳಿಂದ ಸಂಶೋಧಿಸಿದ ಮಾಹಿತಿಗಳ ಆಧಾರದಿಂದ "ಶಿವರಾಮ ಕಾರಂತ ವಾಙ್ಮಯ ವೃತ್ತಾಂತ''ವೆಂಬ ಬಹುತೇಕ ಸಮಗ್ರ ಮಾಹಿತಿ ಗ್ರಂಥವನ್ನು 1992ರಲ್ಲಿ ರಚಿಸಿದೆ. ಇದನ್ನು ಪ್ರಕಟಪಡಿಸಿದಾಗ ಕನ್ನಡಿಗರೆಲ್ಲ, ಸ್ವತಃ ಕಾರಂತರೂ ದಂಗು ಬಡಿಯುವಂತಾಯಿತು.
ಇತಿ,
ಬಿ. ಮಾಲಿನಿ ಮಲ್ಯ.
ಪುಟಗಳು: 275
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !