ವಿಜಯ ಕರ್ನಾಟಕ ಪತ್ರಿಕೆಗಾಗಿ ಅವರನ್ನು ಮಾತನಾಡಿಸಲೆಂದು ಬಿಗ್ಬಾಸ್ ಮನೆಗೆ ಹೋಗಿದ್ದೆ. ಅವರಿಗೆ ಏನೆಲ್ಲ ಪ್ರಶ್ನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ಅವರ ಆ ಮಾತುಗಳು ನನ್ನ ಪ್ರಶ್ನೆಗಳ ದಿಕ್ಕನ್ನೇ ಬದಲಿಸಿದವು. ಆಳವಾದ ಜ್ಞಾನ, ಅಪಾರ ತಿಳುವಳಿಕೆ, ಅವರ ಟಿಪಿಕಲ್ ನೋಟ, ಮೌನವೇ ಮಾತಾಗಿಸುವ ಪರಿ, ಅವರೊಳಗಿನ ಚೈತನ್ಯ, ಆಡುವ ಮಾತಿನಲ್ಲಿ ವಿಶಿಷ್ಟಪದಗತಿ ನನ್ನಲ್ಲಿ ಬೆರಗು ಮೂಡಿಸಿದವು. ಸಿದ್ಧ ಪ್ರಶ್ನೆಗಳಿಗೆ ವಿರಾಮ ಹೇಳಿ, ಎಷ್ಟೊಂದು ತಿಳ್ಕೊಂಡಿದ್ದೀರಿ ಸಾರ್, ಯಾವೆಲ್ಲ ಬುಕ್ಸ್ ಓದುತ್ತೀರಿ? ಎಂದೆ.
ಪುಸ್ತಕನಾ? ಟೆಕ್ಸ್ಟ್ ಬುಕ್ ಬಿಟ್ಟರೆ ಈವರೆಗೂ ನಾನು ಯಾವ ಪುಸ್ತಕನೂ ಓದಿಲ್ಲ ಅಂದ್ಬಿಡೋದಾ?
ಹೀಗೆ ಹೇಳಿದ ಮೇಲೆ ಕುತೂಹಲ ಹುಟ್ಟದೇ ಇರುತ್ತಾ? ಅವರಿಗೆ ಅಷ್ಟೊಂದು ನಾಲೇಡ್ಜ್ ಬಂದಿದ್ದು ಎಲ್ಲಿಂದ? ಚರಿತ್ರಾರ್ಹ ಸಾಧನೆ ಮಾಡಿದ್ದು ಹೇಗೆ? ಸೋಲಿನಲ್ಲೂ ಸಂಯಮ ಕಂಡುಕೊಂಡ ದಾರಿ ಯಾವುದು? ಏಕಾಂಕಿ ಹೋರಾಟದ ಕಿಚ್ಚು ಹುಟ್ಟಿದ್ದು ಎಲ್ಲಿಂದ? ಹೀಗೆ ಅವರ ಬದುಕಿನ ಒಂದೊಂದೇ ಮೆಟ್ಟಿಲುಗಳನ್ನು ಗುರುತಿಸುತ್ತಾ ಹೋದೆ. ಅದೊಂದು ಭಿನ್ನವಾದ ಬದುಕು. ಸ್ಫೂರ್ತಿ ಆಗುವಂತಹ ಪ್ರಯಾಣ. ಬಡವ, ಶ್ರೀಮಂತ, ಮಧ್ಯಮದಾಚೆಯೂ ನಿಂತುಬಿಡುವ ಬೆರಗು. ತೀರಾ ಬಡತನದಿಂದ ಬಂದು, ಅಗಾಧ ಸಾಧನೆ ಮಾಡಿದಾಗ ಅಲ್ಲೊಂದು ಮರುಕ ಕಾಣುತ್ತದೆ. ಹುಟ್ಟಾ ಶ್ರೀಮಂತನಾದವನ ಸಾಧನೆ ಜೈಕಾರಕ್ಕೆ ಕಾರಣವಾಗುತ್ತದೆ. ಸ್ಥಿತಿವಂತ ಕುಟುಂಬದಿಂದ ಬಂದರೂ, ಅದನ್ನು ಧಿಕ್ಕರಿಸಿ ಮೇಲೆದ್ದ ಪರಿಗೆ ಏನೆಂದು ಹೆಸರಿಡೋಣ?
ಸುದೀಪ್ ಬಡವರಲ್ಲ, ಸಿನಿಮಾ ರಂಗ ಹೊಸದೂ ಆಗಿರಲಿಲ್ಲ. ಆದರೂ, ಚಿಕ್ಕ ಅವಕಾಶಕ್ಕಾಗಿ ಮಾಡಿದ ತಪಸ್ಸು ವಿಭಿನ್ನ. ನಾನೊಂದು ಸಿನಿಮಾ ಮಾಡಬೇಕು ಅಂತ ಅಪ್ಪನ ಮುಂದೆ ನಿಂತಿದ್ದರೆ ಒಂದಲ್ಲ, ಹತ್ತು ಸಿನಿಮಾ ಮಾಡುವಷ್ಟು ದುಡ್ಡಿತ್ತು. ಚಿತ್ರೋದ್ಯಮದ ಘಟಾನುಘಟಿಗಳೇ ಅವರ ತಂದೆಗೆ ಸ್ನೇಹಿತರಾಗಿದ್ದರು. ಸಿನಿ ದಿಗ್ಗಜರೆಲ್ಲ ಇವರ ಸರೋವರ ಹೋಟೆಲ್ಗೆ ಬರುತ್ತಿದ್ದರು. ಆದರೂ, ಪುಟ್ಟದೊಂದು ಪಾತ್ರಕ್ಕಾಗಿ ಫೋಟೊ ಹಿಡಿದುಕೊಂಡು ನಿರ್ದೇಶಕರ ಮನೆಬಾಗಿಲು ಕಾದರು. ಅವಮಾನಗಳನ್ನು ಅನುಭವಿಸಿದರು. ಅಪ್ಪನ ಹೆಸರು ದುರ್ಬಳಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಬೆಳೆದರು.
ಸ್ಪರ್ಶ ಸುದೀಪ್, ಹುಚ್ಚ ಸುದೀಪ್, ಕಿಚ್ಚ ಸುದೀಪ್ ಸುಮ್ಮನೆ ಆದದ್ದಲ್ಲ. ಬಾದ್ಷಾ, ಅಭಿನಯ ಚಕ್ರವರ್ತಿ ಅಂತ ಕರೆಯಿಸಿಕೊಳ್ಳುವುದರ ಹಿಂದೆ ದೊಡ್ಡದೊಂದು ಜರ್ನಿಯೇ ಇದೆ. ಅದನ್ನು ದಾಖಲಿಸದೇ ಹೋದರೆ ನಮಗೆ ನಾವೇ ಮಾಡಿಕೊಳ್ಳುವ ಅಪಚಾರ ಆದೀತು. 25 ವರ್ಷಗಳ ಸುದೀರ್ಘ ಸಿನಿಯಾನದಲ್ಲಿ ಅವರು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಮೊದ ಮೊದಲು ಅವರು ತಮ್ಮ ಕನಸಿಗಾಗಿ ಹೋರಾಟ ಮಾಡಿದರು, ಆನಂತರ ತಮ್ಮನ್ನು ನಂಬಿ ಬಂದವರಿಗಾಗಿ ಚಿತ್ರ ಮಾಡಿದರು. ಆನಂತರದ್ದು ಆತ್ಮತೃಪ್ತಿ. ಬ್ರಹ್ಮ ಸಿನಿಮಾದ ಮೂಲಕ ಶುರುವಾದ ಈ ಹೋರಾಟ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಹಾಲಿವುಡ್ವರೆಗೂ ವಿಸ್ತರಿಸಿದೆ. ಸಣ್ಣದೊಂದು ಯಶಸ್ಸಿಗಾಗಿ ಕಾಯುತ್ತಿದ್ದವರನ್ನು ಗೆಲುವೇ ಇದೀಗ ಬೆನ್ನತ್ತಿ ಹೊರಟಿದೆ.
ಮತ್ತೆ ಮತ್ತೆ ಸುದೀಪ್ ಅವರು ಆಡಿದ ಮಾತು ನೆನಪಾಗುತ್ತಿದೆ. ನಟನೊಬ್ಬ ಯಾವಾಗ ಸಾಯುತ್ತಾನೆ ಅಂದರೆ, ಅವನಿಗಾಗಿ ಯಾರೂ ಕಥೆ ಬರೆಯದೇ ಇದ್ದಾಗ. ಕಿಚ್ಚನ ಕಾಲ್ಶೀಟ್ಗಾಗಿ ಐದಾರು ವರ್ಷ ಕಾಯುತ್ತಾ ಕೂತಿರುವ ನಿರ್ದೇಶಕರು ಇದ್ದಾರೆ. ಕೆಲವೇ ನಿಮಿಷಗಳ ಭೇಟಿಗಾಗಿ ಕಾದು ಕೂತಿದ್ದಾರೆ. ಇವರ ಜತೆ ಒಂದೇ ಒಂದು ಸಿನಿಮಾ ಮಾಡಲು ಹಂಬಲಿಸುತ್ತಿರುವ ಸಾಕಷ್ಟು ನಿರ್ದೇಶಕರನ್ನು ನಾನೂ ಕಂಡಿದ್ದೇನೆ. ಈ ಗೆಲುವನ್ನು ದಾಖಲಿಸಬೇಕಿದೆ. ಹಾಗಾಗಿ ಈ ಕನ್ನಡ ಮಾಣಿಕ್ಯ ಕಿಚ್ಚ ಪುಸ್ತಕ.
- ಡಾ.ಶರಣು ಹುಲ್ಲೂರು
ಪುಟಗಳು : 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !