ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಎಲ್ಲ ಸಮುದಾಯದ ಚಿಂತಕರನ್ನು ಬಾಧಿಸುವ ಪ್ರಶ್ನೆಯೆಂದರೆ ಜಾತಿ. ಜಾತಿ ಕೇವಲ ಮೇಲು - ಕೀಳು ಎಂದು ವರ್ಗೀಕರಿಸುವ ಸಂಸ್ಥೆಯಲ,್ಲ ಬದಲಾಗಿ ಅದೊಂದು ಸಾಮಾಜಿಕ, ಮಾನಸಿಕ ಜಗತ್ತು. ಭಾಷೆ, ಸಂಕೇತ, ಧ್ವನಿ, ಆಂಗಿಕ ಭಾಷೆ, ಹೀಗೆ ವ್ಯಕ್ತಿಯೊಬ್ಬನ ಸಕಲ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯುಳ್ಳ ಬೆಳವಣಿಗೆಯ ಕ್ರಮ. ಬೆಳವಣಿಗೆಯ ಹಂತದಲ್ಲಿ ವ್ಯಕ್ತಿಯನ್ನು ಆವರಿಸುತ್ತಾ ಕಡೆಗೆ ಸಮೂಹವನ್ನು ಇದು ಆವರಿಸುತ್ತದೆ. ಪ್ರತಿಯೊಂದು ಜಾತಿಯೂ ತನ್ನದೇ ಆದ ಸಾಮಾಜಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಸೃಷ್ಟಿಸಿರುತ್ತದೆ. ಸಾವಿರಾರು ವರುಷಗಳ ರಾಜಕೀಯ ಅನುಭವ, ತಿಳಿವಳಿಕೆಯ ನಂತರ ಪ್ರಜಾಪ್ರಭುತ್ವವನ್ನು ಉತ್ತಮ ರಾಜಕೀಯ ವ್ಯವಸ್ಥೆಯೆಂದು ಪರಿಗಣಿಸಿ ಭಾರತೀಯ ಸಮಾಜ ಒಪ್ಪಿಕೊಂಡಿತು. ‘ಭಾರತೀಯ ಸಂವಿಧಾನ’ ಈ ತಿಳಿವಿನ ಬೆಳಗಿನಲ್ಲಿಯೇ ರೂಪುಗೊಂಡಿತು. ಬಾಬಾಸಾಹೇಬರ ಸ್ಫೂರ್ತಿ ಮತ್ತು ಅರಿವಿನಿಂದ ಮೂಡಿದ ಸಂವಿಧಾನವನ್ನು ಸೋಲಿಸಲು ಪ್ರತಿಕ್ಷಣವೂ ಜಾತಿವ್ಯವಸ್ಥೆ ಪ್ರಯತ್ನಿಸುತ್ತದೆ.
ಸಂವಿಧಾನದಲ್ಲಿ ಲಿಖಿತ ಮತ್ತು ಅಲಿಖಿತ ಎರಡು ಬಗೆಗಳಿವೆ. ಲಿಖಿತ ಬರೆಯಲ್ಪಟ್ಟದ್ದು. ಅಧಿಕೃತವಾಗಿ ಪ್ರಕಟಿಸಿ ಅಂಗೀಕರಿಸುವುದು. ಪದಶಃ ಅದಕ್ಕನುಗುಣವಾಗಿ ನಡೆಯುವುದು. ಅದನ್ನು ಮೀರಿ ನಡೆಯದಿರುವುದು ಇತ್ಯಾದಿ. ಅಲಿಖಿತ ಎಂದರೆ ಪರಂಪರಾನುಗತವಾಗಿ, ರೂಢಿಗತವಾಗಿ ನಡೆದು ಬಂದಿರುವುದು. ಯಾವುದು ಬರೆಹರೂಪದಲ್ಲಿ ಇಲ್ಲದೇ ಹೋದರೂ ಬರೆಹದಲ್ಲಿರುವಷ್ಟೇ ಪರಿಣಾಮಕಾರಿ ಮತ್ತು ಅನುಸರಿಸಲೇಬೇಕಾದಂತಹ ಅನಿವಾರ್ಯತೆಯುಳ್ಳದ್ದು ಎಂಬ ಅರ್ಥವನ್ನು ಸ್ಫುರಿಸುತ್ತದೆ.
ಭಾರತೀಯ ಜನಸಮುದಾಯವನ್ನು ಜಾತಿಯೆಂಬ ಅಗೋಚರ ಸಂವಿಧಾನವೇ ಆಳುತ್ತಿದೆ. ಜಾತಿ, ಸಂವಿಧಾನ, ಅಗೋಚರ ಎಂದಾಕ್ಷಣ ಅದು ಎಂದೂ ಬರೆಹ ರೂಪದಲ್ಲಿ ಇರಲಿಲ್ಲ ಎಂದು ತಿಳಿಯುವ ಅಗತ್ಯವಿಲ್ಲ. ಅದು ವೈದಿಕ ಪಠ್ಯಗಳಾದ ಮಹಾಭಾರತ, ರಾಮಾಯಣ, ಉಪನಿಷತ್, ಭಗವದ್ಗೀತೆ, ವೇದಗಳಲ್ಲಿ ಹಂಚಿ ಹೋಗಿದೆ. ಇವೆಲ್ಲವೂ ಜನರಿಂದ ಆಚರಿಸಲ್ಪಟ್ಟು ಅವುಗಳ ನೆರವಿಲ್ಲದೆಯೇ ಅಗೋಚರ ಸಂವಿಧಾನವನ್ನು ನಮ್ಮ ಭಾಷೆ, ಸಾಹಿತ್ಯ, ಆಹಾರ, ಮಾಧ್ಯಮ ಮತ್ತು ಉಡುಪಿನ ಅಭ್ಯಾಸದಲ್ಲಿ ನೀಡಿದೆ. ಹಾಗಾಗಿ ಭಾರತೀಯರು ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನ ನಿರೀಕ್ಷಿಸುವ ಜಗತ್ತನ್ನು ಅದರ ಪರಿಪೂರ್ಣ ಅರ್ಥದಲ್ಲಿ ಒಪ್ಪಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಅಥವಾ ಬಹಳ ಸಲೀಸಾಗಿ ಸ್ಕಿಜೋಫ್ರಿನಿಕ್ ಆದಂತಹ ಮನೋಭಾವ ರೂಪಿಸಿಕೊಂಡಿದ್ದಾರೆ. ಸ್ವಲ್ಪ ಒರಟಾಗಿ ಹೇಳುವುದಾದರೆ ಜಾತಿಯ ಮಾನಸಿಕ ರೋಗಕ್ಕೆ ತುತ್ತಾಗಿದ್ದಾರೆ. ಏಕೆಂದರೆ ಜಾತಿ ಜಗಳ ಸಂಬಂಧ ಉಂಟಾದ ಕೊಲೆ ಮತ್ತು ಕ್ರೌರ್ಯದ ಉದಾಹರಣೆ ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಮಹಾರಾಷ್ಟ್ರದ ಬಾರ್ ಒಂದರಲ್ಲಿ ದಲಿತ ಯುವಕನೊಬ್ಬ ಕುಳಿತಿದ್ದಾನೆ. ಅವನ ಫೋನ್ ರಿಂಗಾಗುತ್ತದೆ. ರಿಂಗ್ ಟ್ಯೂನ್ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನೆನಪಿಸುವ ಹಾಡು. ಅದನ್ನು ಕೇಳಿ ಅದನ್ನೇ ನೆಪವಾಗಿಟ್ಟುಕೊಂಡ ಮೇಲ್ಜಾತಿಯ ಹಿಂದೂಗಳು ಅವನನ್ನು ಕೊಂದು ಹಾಕುತ್ತಾರೆ. ಒಂದು ರಿಂಗ್ ಟೋನ್ ಕೇಳಿಯೇ ಒಬ್ಬನನ್ನು ಕೊಲ್ಲುತ್ತಾರೆ ಎಂದರೆ ಅದರ ಅರ್ಥವೇನು? ನಿಜವಾಗಿಯೂ ಇದೊಂದು ಮಾನಸಿಕ ರೋಗವೆಂದು ಪರಿಗಣಿಸಲು ಇದಕ್ಕಿಂತ ಮತ್ತೇನು ದೊಡ್ಡ ಸಾಕ್ಷಿ ಬೇಕು?
ಯಾವುದೇ ಸಂಕೋಚವಿಲ್ಲದೆ ಕೆಳಜಾತಿಯ ಹೆಸರನ್ನು ಬೈಗುಳಕ್ಕೆ ಬದಲಾಗಿ ಬಳಸುವುದು, ಕೆಳಜಾತಿಗಳ ಆಹಾರಕ್ರಮವನ್ನು ಹೀಯಾಳಿಸುವುದು, ಕಿಂಚಿತ್ತೂ ಕಾರ್ಯಕಾರಣ ಸಂಬಂಧ ಯೋಚಿಸದೆ ದಲಿತ ಸಮುದಾಯವನ್ನು ದ್ವೇಷಿಸುವುದು, ಮೊದಲಾದವು ಮಾನಸಿಕ ರೋಗವಲ್ಲದೆ ಮತ್ತೇನೂ ಅಲ್ಲ. ಜಾತಿವ್ಯವಸ್ಥೆಯನ್ನು ಅನುಸರಿಸುವುದು ಎಂದರೆ ಮಾನಸಿಕ ಅಸಮತೋಲನದ ನಡವಳಿಕೆಯಾಗಿದೆ. ನಮ್ಮದು ಭಾರತದ ಪ್ರತಿವ್ಯಕ್ತಿಯನ್ನು ಮುನ್ನಡೆಸುವ ಸಂವಿಧಾನವಾಗಿದೆ. ಹಾಗಾಗಿ ಜಾತಿಪದ್ಧತಿಯಲ್ಲಿ ನಂಬಿಕೆ ಇಟ್ಟಿರುವ ಪ್ರತಿ ಭಾರತೀಯನೂ ಸ್ಕಿಜೋಫ್ರಿನಿಕ್ ಅಥವಾ ಇಬ್ಬಗೆಯ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುತ್ತಾನೆ.
ಸಾರ್ವಜನಿಕ ವಲಯದಲ್ಲಿ ಭಾರತೀಯ ಸಂವಿಧಾನವನ್ನು ಅನುಸರಿಸುವಂತೆ ನಟಿಸುತ್ತಾ ಆಂತರ್ಯದಲ್ಲಿ ತನ್ನ ಜಾತಿಸಂವಿಧಾನವನ್ನು ಪಾಲಿಸುತ್ತಿರುತ್ತಾನೆ. ಕೆಲವೊಮ್ಮೆ ಎರಡನ್ನು ಅನುಸರಿಸಲು ಅಥವಾ ಯಾವುದಾದರೂ ಒಂದನ್ನು ತಿರಸ್ಕರಿಸಲು ಹೋಗಿ ಗೊಂದಲಕ್ಕೆ ಒಳಗಾಗುತ್ತಾನೆ. ಈ ರೋಗಗ್ರಸ್ತ ಸ್ಥಿತಿಯನ್ನು ಮೀರಲು ಸಾಧ್ಯವೇ ಇಲ್ಲವೇನೋ ಎಂಬುದು ಜಾತಿ ಸಂಬಂಧಿತ ಘರ್ಷಣೆಗಳನ್ನು ಕುರಿತು ಮಾಧ್ಯಮದ ವರದಿಗಳನ್ನು ಗಮನಿಸಿದರೆ ಗೊತ್ತಾಗುತ್ತದೆ.
ಇಷ್ಟೆಲ್ಲಾ ಪೂರ್ವಪೀಠಿಕೆ ಏಕೆ ಹಾಕಬೇಕಾಯಿತೆಂದರೆ ಕವಿಗಳೂ ಸೂಕ್ಷ್ಮ ಮನಸ್ಸಿನವರೂ ಆದ ಮೂಡ್ನಾಕೂಡು, ತಮ್ಮ ಅರಿವು, ಸಾಮಾನ್ಯಜ್ಞಾನಗಳನ್ನು ಮೇಳೈಸಿ ಈ ಪುಸ್ತಕವನ್ನು ರಚಿಸಿದ್ದಾರೆ. ಸಾಮಾನ್ಯಜ್ಞಾನ, ನಿಜದಸ್ಥಿತಿಯ ಬಗೆಗಿನ ಅರಿವಿಲ್ಲದ ಯಾವುದೇ ಸಂಶೋಧನೆಯೂ ವ್ಯರ್ಥ. ಯಾವುದೇ ಪೂರ್ವಾಗ್ರಹವಿಲ್ಲದೆ, ವಸ್ತುನಿಷ್ಠತೆಯ ಜೊತೆಗೆ ಬರೆಯುತ್ತೇನೆಂಬುದೇ ಹುಸಿ ನಂಬಿಕೆ ಮತ್ತು ಅಹಂಕಾರ. ವಸ್ತುನಿಷ್ಠತೆಯ ಜೊತೆಗೆ ಸಾಮಾನ್ಯಜ್ಞಾನ ಮತ್ತು ಅರಿವನ್ನು ಹದವಾಗಿ ಬೆರೆಸಿ ಬರೆದರೆ ಸಂಶೋಧನೆಯು ತನ್ನ ಜಡತ್ವವನ್ನು ನೀಗಿಕೊಳ್ಳಬಹುದು. ಮೂಡ್ನಾಕೂಡು ಈ ಬಗೆಯ ಜಡತ್ವವನ್ನು ಯಾವುದೇ ಮುಲಾಜಿಲ್ಲದೆ ಕೊಡವಿಹಾಕಿದ್ದಾರೆ. ತನ್ನ ಆಳದ ಕವಿಯ ಮಾತಿಗೆ ಕಿವಿಗೊಟ್ಟು ಅದಕ್ಕನುಗುಣವಾದ ಸಂವೇದನಾಶೀಲ ಭಾಷೆಯಲ್ಲಿ ಜಾತಿ ಮತ್ತು ವಿಶ್ವಗ್ರಾಮದ ವಿವಿಧ ಪರಿಕಲ್ಪನೆಗಳನ್ನು ವೈಜ್ಞಾನಿಕವಾಗಿ ಬಿಡಿಸುತ್ತಾ ಹೋಗುತ್ತಾರೆ.
ಈ ಮಹಾಪ್ರಬಂಧದ ಹರವು ಬಹಳ ದೊಡ್ಡದು. ವಿಶ್ವಗ್ರಾಮ - Global Village ಎಂಬ ಪರಿಕಲ್ಪನೆಗೆ ಮುಖಾಮುಖಿಯಾಗಿ; ತರ್ಕಬದ್ಧವಾಗಿ ವಿಶ್ವಗ್ರಾಮದ ಪರಿಕಲ್ಪನೆ ಬಲವಾಗಿರುವಾಗಲೂ ಜಾತಿಪದ್ಧತಿಯು ಕಿಂಚಿತ್ತೂ ಅಲುಗಾಡದಿರುವ ಸ್ಥಿತಿಯನ್ನು ಉದಾಹರಣೆ ಸಹಿತವಾಗಿ ಮಂಡಿಸುತ್ತಾರೆ.
ಈ ಬರೆಹದಲ್ಲಿ ಆರಂಭದಲ್ಲಿಯೇ ಸೂಚಿಸಿರುವಂತೆ ಜಾತಿವ್ಯವಸ್ಥೆಯನ್ನು ಅನುಸರಿಸುವ ಪ್ರತಿ ಭಾರತೀಯನ ವ್ಯಕ್ತಿತ್ವದಲ್ಲಿಯೂ ಜಾತಿಯ ಮಾನಸಿಕ, ಬೌದ್ಧಿಕ ಹಾಗೂ ಸಾಂಸ್ಕೃತಿಕ ಜಗತ್ತನ್ನು ಸೃಷ್ಟಿಸಿರುತ್ತದೆ. ಮೂಡ್ನಾಕೂಡು ಜಾತಿಪದ್ಧತಿ ಮತ್ತು ಮಾರುಕಟ್ಟೆಯ ಸ್ವರೂಪ, ನಗರ ಪ್ರದೇಶ, ಕೊಳಚೆ ಪ್ರದೇಶ, ಗ್ರಾಮ, ರಾಷ್ಟ್ರೀಯ ಅಂತಾರಾಷ್ಟ್ರೀಯ - ಹೀಗೆ ಎಲ್ಲ ಕಡೆಯೂ ಜಾತಿ ಪಾಪಸುಕಳ್ಳಿಯಂತೆ ಹಬ್ಬಿ ವ್ಯಾಪಿಸಿರುವುದನ್ನು ಗುರುತಿಸಿದ್ದಾರೆ.
ಅದರಿಂದಲೇ ಅವರು ಮಂಡಿಸುವ ವಿಶ್ವಗ್ರಾಮ ಪರಿಕಲ್ಪನೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳ ನಡುವಿನ ನೀಚ ಅನುಸಂಧಾನವನ್ನು ಅನಾವರಣಗೊಳಿಸುತ್ತದೆ.
೧೯೯೦ರ ದಶಕದ ನಂತರ ಭಾರತವು ಉದಾರೀಕರಣ ಪ್ರಕ್ರಿಯೆಗೆ ಒಳಪಟ್ಟಿತು. ಅದರ ಫಲವಾಗಿ ಎಲ್ಲೆಲ್ಲಿಯೂ ವಿಶ್ವಗ್ರಾಮ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಯಿತು. ಇಡೀ ವಿಶ್ವವೇ ಒಂದು ಮಾರುಕಟ್ಟೆಯಾದುದರಿಂದ ಇಡೀ ಜಗತ್ತೇ ವಿಶ್ವಗ್ರಾಮವೆಂಬ ಭ್ರಮೆಯನ್ನು ಹುಟ್ಟಿಸಲಾಯಿತು. ಸಾಂಪ್ರದಾಯಿಕ ಮಾರುಕಟ್ಟೆಯ ಸಂಬಂಧಗಳು ಸಡಿಲವಾದಂತೆ ಸಾಂಪ್ರದಾಯಿಕ ಜಾತಿ ಸಂಕೋಲೆಗಳು ಸಡಿಲಗೊಳ್ಳಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಭಾರತೀಯ ಜಾತಿ ಮನಸ್ಸಿನ ದ್ವಿಬಗೆ ವ್ಯಕ್ತಿತ್ವ ಅಷ್ಟು ಸುಲಭವಾಗಿ ಬದಲಾಗಲು ಸಾಧ್ಯವೇ ಇಲ್ಲ ಎಂಬುದನ್ನು ಮೂಡ್ನಾಕೂಡು ಅದ್ಭುತವಾಗಿ ಕಟ್ಟಿಕೊಡುತ್ತಾರೆ.
ಏಕೆಂದರೆ ವಿಶ್ವಗ್ರಾಮ ಹೊಕ್ಕು ಜಾತಿ ಆಚರಿಸುವ ಭಾರತೀಯ ಜಾತಿ ಮನಸ್ಸನ್ನು ಅಲ್ಲಿಗೂ ಕೊಂಡೊಯ್ಯುತ್ತಾನೆ. ಪ್ರಮಾಣಾತ್ಮಕವಾಗಿ ಅವನು ವಿಶ್ವಗ್ರಾಮದಲ್ಲಿ ವಾಸಿಸುತ್ತಿದ್ದಾನೆಯೇ ಹೊರತು ತಿರುಳಲ್ಲಿ ಅವನು ಜಾತಿ ಗ್ರಾಮದಲ್ಲಿಯೇ ವಾಸಿಸುತ್ತಾನೆ ಎಂಬುದನ್ನು ಮಹಾಪ್ರಬಂಧ ಮತ್ತೆ ಮತ್ತೆ ತನ್ನ ಅರಿವಿನ ಮೂಲಕ ರುಜುವಾತು ಗೊಳಿಸುತ್ತದೆ. ಆಳವಾದ ಚಿಂತನೆ, ಶ್ರದ್ಧಾಪೂರ್ವಕ ಓದು, ಸಾಮಾನ್ಯ ಮನುಷ್ಯನ ತಿಳಿವು ಮತ್ತು ಸಂವೇದನಾಶೀಲ ಮನಸ್ಸನ್ನು ಒಳಗೊಂಡ ಕವಿ ಮೂಡ್ನಾಕೂಡು ಸವಿಸ್ತಾರವಾದ ಮಹಾಪ್ರಬಂಧವನ್ನು ಬರೆದಿದ್ದಾರೆ. ಅದು ಎಲ್ಲರಿಗೂ ದಕ್ಕುವಂತಾಗಲಿ, ನಮ್ಮೆಲ್ಲರ ಚಿಂತನೆಯ ಹರಹು ವಿಸ್ತಾರವಾಗಲಿ ಎಂಬುದೇ ನನ್ನ ಆಶಯ.
- ಡಾ. ಸಿ. ಜಿ. ಲಕ್ಷ್ಮೀಪತಿ
ಪುಟಗಳು: 164
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !