ಪ್ರಕಾಶಕರು: ಕಹಳೆ ಪ್ರಕಾಶನ
Publisher: Kahale Prakashana
ಕಹಳೆ (www.kahale.org) ಅನ್ನುವ ತಂಡದ ಮೂಲಕ ಯುವ ತಲೆಮಾರಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕುರಿತು ಪ್ರೀತಿ, ಆಸಕ್ತಿ ಬೆಳೆಸುವ ಕೆಲಸದತ್ತ ದುಡಿಯುತ್ತಲಿದ್ದ ವಿನಯಕುಮಾರ ಸಜ್ಜನರ 29ರ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದರು. ಅವರ ಕೊನೆಯ ಕನಸು, ಯೋಜನೆಯಾಗಿದ್ದ ಕಹಳೆ ಕಥಾ ಸ್ಪರ್ಧೆ 2020ರ 24 ವಿಜೇತ ಕಥೆಗಳು ಇಬುಕ್ ರೂಪದಲ್ಲಿ ಮೈಲ್ಯಾಂಗ್ ಅಲ್ಲಿ ಬಿಡುಗಡೆಯಾಗುತ್ತಿದೆ.
ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿ, ವಿಮರ್ಶಕರಾದ ಶ್ರೀ ಕೇಶವ ಮಳಗಿ ಅವರು ತೀರ್ಪು ನೀಡಿದ್ದರೆ, ಕಥಾ ಸಂಕಲನಕ್ಕೆ ಆಪ್ತವಾದ ಮುನ್ನುಡಿ ಬರೆದಿದ್ದಾರೆ ಸಾಹಿತಿ, ಪತ್ರಕರ್ತರಾದ ಶ್ರೀ ಜೋಗಿಯವರು.
ಮುನ್ನುಡಿಯಿಂದ ಆಯ್ದ ಸಾಲುಗಳು:
ನಾನು ಕತೆಗಳನ್ನು ಓದುವಾಗ ಮುಖ್ಯವಾಗಿ ಎರಡು ಸಂಗತಿಗಳನ್ನು ಗಮನಿಸುತ್ತೇನೆ. ಒಂದು ಕತೆಯನ್ನು ಓದುತ್ತಾ ಹೋದಾಗ ನಮಗೆ ಅದು ಹುಟ್ಟಿದ ಕತೆಯೋ ಕಟ್ಟಿದ ಕತೆಯೋ ಅನ್ನುವುದು ಒಂದು ಹಂತದಲ್ಲಿ ಗೊತ್ತಾಗಿಬಿಡುತ್ತದೆ. ತುಂಬ ನಾಜೂಕಾಗಿ, ಚಾಕಚಕ್ಯತೆಯಿಂದ ಕತೆಕಟ್ಟಬಲ್ಲ ಲೇಖಕ ವ್ಯತ್ಯಾಸ ಅಷ್ಟಾಗಿ ತಿಳಿಯದಂತೆ ಮಾಡಬಲ್ಲ ಅನ್ನುವುದು ನಿಜವಾದರೂ ಹುಟ್ಟಿದ ಕತೆ ತನ್ನ ಪರಿಸರ ಮತ್ತು ಭಾವತೀವ್ರತೆಯಿಂದ ದೂರ ಸರಿಯಲಾರದು. ಕಟ್ಟಿದ ಕತೆಯ ಪರಿಸರವನ್ನು ಎಷ್ಟೇ ಚೆನ್ನಾಗಿ ಕಟ್ಟಿಕೊಟ್ಟರೂ ಅದು ಪಳಗಿದ ಓದುಗನಿಗೆ ಥಟ್ಟನೆ ಗೋಚರಿಸಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹುಟ್ಟಿದ ಕತೆಗೆ ಕವಿತೆಗಿರುವಂಥ ಅನ್‌ಪಾಲಿಷ್ಡ್ ಗುಣವಿರುತ್ತದೆ. ಅದು ಯಾರನ್ನೂ ಒಲಿಸಿಕೊಳ್ಳಲು ಹವಣಿಸುತ್ತಿರುವುದಿಲ್ಲ. ಕಟ್ಟಿದ ಕತೆ ಆರಂಭದಿಂದಲೇ ಭಾವನೆಗಳಿಂದ ಹಿಡಿದು ರಚನೆಯ ತನಕ ಎಲ್ಲವನ್ನೂ ನಿಯಂತ್ರಿಸುತ್ತಲೇ ಬೆಳೆಯುತ್ತಾ ಹೋಗುತ್ತದೆ.
ಕಹಳೆ ಕಥಾಸಂಗಮದಲ್ಲಿ ಎರಡೂ ಬಗೆಯ ಕತೆಗಳಿವೆ. ಹೊಸದಾಗಿ ಬರೆಯುತ್ತಿರುವ ಹಾಗೂ ಪಳಗಿದ ಕತೆಗಾರರ ಕತೆಗಳೂ ಇಲ್ಲಿವೆ. 2020ರ ಕಥಾಜಗತ್ತು ಹೇಗಿದೆ ಎಂದು ತಿಳಿದುಕೊಳ್ಳಬಯಸುವ ಓದುಗನಿಗೆ ಸಾಕಷ್ಟು ವೈವಿಧ್ಯಮಯವಾದ ಕತೆಗಳೂ ಈ ಸಂಕಲನದಲ್ಲಿ ಎದುರಾಗುತ್ತವೆ. ಪ್ರಾದೇಶಿಕತೆ, ಭಾಷಾ ವೈವಿಧ್ಯ, ಯೋಚನಾ ಲಹರಿ- ಎಲ್ಲದರ ಪರಿಚಯವನ್ನೂ ಮಾಡಿಕೊಡುವ ಸಮಗ್ರ ಸಂಕಲನ ಇದು.
ದೃಶ್ಯಗಳನ್ನು ಹಿಂದುಮುಂದಾಗಿಸುವ ಮೂಲಕ ಕುತೂಹಲ ಉಳಿಸಿಕೊಳ್ಳುವ ಪ್ರವೀಣ್ ಕುಮಾರ್ ಜಿ ಬರೆದ ಅಸ್ತವ್ಯಸ್ತ ಪುಟಗಳು. ಅಪೂರ್ವ ನಿಗೂಢವೊಂದನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ರಾಮಕೃಷ್ಣ ಸುಗತ ಕತೆ ಕಂದುಗೋಲ, ರೂಪಕಗಳ ಮೂಲಕವೇ ಮೈಗೂಡುತ್ತಾ ಹೋಗಿರುವ ಟಿ. ಗೋವಿಂದರಾಜು ಅವರ ಗವುಡಜ್ಜೀ, ನಮ್ಮೆಲ್ಲರೊಳಗೂ ಗಾಢವಾಗಿ ನೆಲೆಯೂರಿರುವ ಅವಮಾನದ ಭಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ಸಂಪತ್ ಸಿರಿಮನೆಯ ಹಾಜ್ಮೋಲಾ, ಅವ್ಯಕ್ತವನ್ನು ಹಿಡಿಯಲು ಹೋಗುವ ಪ್ರಸಾದ್ ನಾಯ್ಕ್ ಬರೆದ ಬಾಗಿಲ ಸಂದಿ, ಕ್ರಮೇಣ ನಮ್ಮೊಳಗೆ ಇಳಿಯುವ ತಾತನ ಕತೆ ಹೇಳುವ ಸಿದ್ಧರಾಮು ಬರೆದ ಜಾಡು, ಸಂಬಂಧಗಳ ಸಂಕೀರ್ಣತೆಯನ್ನು ಹೊಸಕಾಲದ ಎಲ್ಲಾ ಸಂದಿಗ್ಧಗಳ ಸಹಿತ ಹೇಳುವ ದಾದಾಪೀರ್ ಜೈಮನ್ ಬರೆದ ತೀರದ ಒಲವಿನ ಒಂಟಿ ಹಾಡು, ತೊತ್ಯಾನ ಕಣ್ಣಲ್ಲಿ ನಿರೂಪಿತವಾಗಿರುವ ತನ್ನೂರಿನ ಜಗತ್ತನ್ನು ಅನಾವರಣಗೊಳಿಸುವ ಕಪಿಲ ಪಿ. ಹುಮನಾಬಾದೆಯವರ ವಿಶಿಷ್ಟ ಕತೆ ಗುಬ್ಬಿತೊತ್ಯಾ, ಹೊಸಕಾಲ ಮತ್ತು ಸಾಂಪ್ರದಾಯಿಕ ಸಂಬಂಧಗಳ ನಡುವಿನ ಶೂನ್ಯವನ್ನು ಸೊಗಸಾಗಿ ಹಿಡಿದಿಡುವ ಚೈತ್ರಿಕಾ ನಾಯ್ಕ್ ಅವರ ಲಿವ್ ಇನ್- ಈ ಕತೆಗಳು ಕ್ಷಣಭಂಗುರವನ್ನು ಹಿಡಿಯುವ ಹೊತ್ತಿಗೇ, ಅದನ್ನೊಂದು ಅನುಭವವಾಗಿಯೂ ನೋಡುತ್ತವೆ. ಅನುಕ್ಷಣದ ಜೊತೆಗೆ ನಿರಂತರತೆಯನ್ನೂ ಮೈಗೂಡಿಸಿಕೊಂಡ ಕತೆಗಳು ನಾಳೆಯ ಕತೆಗಳಾಗುವ ಸಾಧ್ಯತೆಯನ್ನೂ ನಾವು ಅಲ್ಲಗಳೆಯುವಂತಿಲ್ಲ. ಮೇಲೆ ಹೇಳಿದ ಕತೆಗಳ ಪೈಕಿ ಗವುಡಜ್ಜಿ ಒಂದೇ ಹಳೆಯ ಜಾಡಿನಲ್ಲಿ ಸಾಗುವ ಕತೆ. ಮಿಕ್ಕ ಕತೆಗಳ ಪಾಡೇ ಬೇರೆ.
ಅಜಿತ್ ಹರೀಶ್ ಬರೆದ ಮಾಮರ, ಒಂದು ಕತೆಯನ್ನು ಸೊಗಸಾಗಿ ಕಟ್ಟುವ ಕಸಬುಗಾರಿಕೆಗೆ ಸಾಕ್ಷಿ. ಅಂಥದ್ದೇ ಕಥನ ಶೈಲಿಯನ್ನು ನಾವು ಮಸಬಿನಾಳದ ಪಶುವಾದಿಗಳು ಕತೆಯಲ್ಲೂ ಕಾಣಬಹುದು. ಕಟ್ಟಿಕೊಟ್ಟ ಪರಿಸರ ಮತ್ತು ಬಳಕೆಯಾದ ಭಾಷೆಯ ದೃಷ್ಟಿಯಿಂದಲೂ ಶಂಕರ ಬೈಚನಾಳರ ಕತೆ ನಮ್ಮನ್ನು ಹಿಡಿದಿಡುತ್ತದೆ. ಡಾ.ಪ್ರೇಮಲತಾರ ಕುಮಾರ ಕತೆ ಸೊಗಸಾದ ಕಥೆಗಾರಿಕೆಗೆ ಉದಾಹರಣೆಯಾದರೆ ಹೊಸಕಾಲದ ತಾಯಿ-ಮಗಳ ಸಂಬಂಧವನ್ನು ಚರ್ಚಿಸುತ್ತಲೇ ನಾಟಕೀಯವಾಗುವ ವಿನಯ್ ಕೃಷ್ಣಸ್ವಾಮಿ ಅವರ ದುಗುಡ, ಜಾಬಾಲಿ ಸತ್ಯಕಾಮನ ಕತೆಯನ್ನು ನೆನಪಿಸುವ ವೈ ಜೆ ಮೆಹಬೂಬ್ ಬರೆದ ದೇವರ ಮಗ ಕತೆಗಳು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದರೆ ಮತ್ತೊಂದು ಎತ್ತರಕ್ಕೆ ಏರುತ್ತಿದ್ದವು.
ಅಮೃತ್ ಬಲ್ಲಾಳರ ಮೂರಕ್ಕಿಲ್ಲ ಮುಕ್ತಿ, ರೋಹಿತ್ ಉಡುಪರ ಮೂಢಮನುಷ್ಯರು, ರಂಜಿತಾ ವಿಎಲ್ ಬರೆದ ಸೀತಾಳದಂಡೆ ಹೂವು, ಅನುಪಮಾ ರಾಘವೇಂದ್ರರ ನಾನೂ ಒಬ್ಬಳು ಹೆಣ್ಣು, ಆನಂದ್ ಹೆಗಡೆಯ ಸಂಘರ್ಷ, ರೇಣುಕಾ ಚಿತ್ರದುರ್ಗ ಕತೆ ವಿಳಾಸ, ಲಾವಣ್ಯ ಎಸ್ ಎಸ್ ಬರೆದ ಟರ್ಲಿಂಗುವಾ, ಸುಧಾರಾಣಿ ನಾಯ್ಕರ ನಮ್ಮೂರ ಅಗಸ್ಯಾಗ, ಮೂನಾ ಪ್ರಸನ್ನರ ಬಾರದ ಅಪ್ಪ ಮತ್ತು ಎನ್ ಮಾರುತಿಯವರ ಮೂಕವೇದನೆ- ಕತೆಗಳ ಶೈಲಿ ಸೊಗಸಾಗಿದೆ. ಕಥಾವಸ್ತು ಮತ್ತಷ್ಟು ಹುರಿಗಟ್ಟಬೇಕಾಗಿದೆ.
ಈ ಎಲ್ಲಾ ಕತೆಗಳನ್ನು ಓದಿದಾಗ, ಸಣ್ಣಕತೆಯ ಭಾಷೆಯನ್ನು ಎಲ್ಲ ಕತೆಗಾರರೂ ಮೈಗೂಡಿಸಿಕೊಂಡಿರುವುದನ್ನು ಕಾಣಬಹುದು. ಸಣ್ಣಕತೆಗಳ ಬಹುದೊಡ್ಡ ಅನುಕೂಲವೆಂದರೆ ಯಾವುದೇ ಪ್ರದೇಶದ ಭಾಷೆಯನ್ನೂ ಕೂಡ ಕಥನಕ್ಕೆ ಒಗ್ಗಿಸಿಕೊಂಡುಬಿಡಬಹುದು. ಕವಿತೆಯಲ್ಲಿ ಅದು ಅಷ್ಟು ಸುಲಭಸಾಧ್ಯವಲ್ಲ. ಈ ಸಂಕಲನದಲ್ಲಿ ಕಂಡುಬರುವ ಭಾಷಾವೈವಿಧ್ಯ ಕೂಡ ಗಮನಾರ್ಹ.
ಗೆಳೆಯ ವಿನಯ್ ಕುಮಾರ್ ಸಜ್ಜನರ ಸಂಸ್ಥಾಪಿಸಿದ ಕಹಳೆ ಸಂಸ್ಥೆ ಇವತ್ತು ಕಥಾಸಂಕಲನ ಹೊರತರುವಷ್ಟು ಅಗಾಧವಾಗಿ ಬೆಳೆದಿದೆ. ಈ ಸಂಕಲನವನ್ನು ಕಹಳೆ ತಂಡ ವಿನಯ ಕುಮಾರ ಸಜ್ಜನರರಿಗೆ ಅರ್ಪಿಸಿರುವುದು ಕೂಡ ಅರ್ಥಪೂರ್ಣ. ಅತಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ ವಿನಯಕುಮಾರರ ಕನಸು ಹೂ ಬಿಟ್ಟ ಕ್ಷಣ ಇದು. ಆ ಕಾರಣಕ್ಕೆ ಈ ಸಂಕಲನಕ್ಕೆ ವಿಶೇಷ ಮಹತ್ವವಿದೆ. ಇಲ್ಲಿರುವ ಅನೇಕ ಕತೆಗಳು ಅಮರತ್ವ ಮತ್ತು ನಶ್ವರತೆಯನ್ನು ಮೈಗೂಡಿಸಿಕೊಂಡಂತೆ ಕಾಣುವುದು ಕೂಡ ಈ ಅಪೂರ್ವ ನಟನೆಗೆ ಅತ್ಯುತ್ತಮ ರೂಪಕ.
ಎಲ್ಲ ಕತೆಗಾರರಿಗೂ ಅಭಿನಂದನೆ.
-ಜೋಗಿ
ಪುಟಗಳು: 130
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !