ಲೇಖಕರು:
ಲೇಖಕ - ಸಂಪಾದಕರು
ಶಾಂತಾ ಆರ್. ನಾಡಗೀರ
ಮೋಹನ ಡಿ. ದೇಶಪಾಂಡೆ
ಆನಂದ ಡಿ. ದೇಶಪಾಂಡೆ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕನ್ನಡಕ್ಕೆ ಇದೀಗ ಸೇರ್ಪಡೆಯಾಗುತ್ತಿರುವ ಅಪರೂಪದ ಕೃತಿ “ಜಿಪುಣರ ಕಥೆಗಳು” ಕೃತಿಗೆ ಸಂತೋಷದಿಂದ ಮುನ್ನುಡಿಯಾಗಿ ಒಂದೆರಡು ಮಾತುಗಳನ್ನು ಸೇರಿಸುತ್ತಿದ್ದೇನೆ. ಸಾಂಸ್ಕೃತಿಕ ಅಭಿವ್ಯಕ್ತಿಗಳಾದ ಇಂಥ ಕಥೆಗಳು ಯಾವುದೇ ಮಾಧ್ಯಮ, ಜನಪ್ರಿಯ ಮಾಧ್ಯಮಕ್ಕಿಂತ ಭಿನ್ನವಾದ ಪ್ರಚಾರ ಪಡೆಯುವಂಥವು, ಮತ್ತು ವ್ಯಾಪಿಸುವಂಥವು, ಮತ್ತು ಯಾವುದೇ ಮಾಧ್ಯಮಕ್ಕಿಂತ ಹೆಚ್ಚು ದಿನ ಬಾಳುವಂಥವು. ಉಳಿದ ಮಾಧ್ಯಮಗಳಾದರೋ ಚರಿತ್ರೆಯ ಕೂಸುಗಳು. ಮೌಖಿಕತೆಯನ್ನೇ ಹೆಚ್ಚು ಅವಲಂಬಿಸಿದ ಈ ಕಥೆಗಳು ಚರಿತ್ರೆಯನ್ನೂ ಮೀರುವಂಥವು. ಇವನ್ನು ಬರವಣಿಗೆಯಲ್ಲಿ ಹಿಡಿದಿಡುವದೇ ಕಷ್ಟ. ಯಾಕೆಂದರೆ ಹೇಳಿದಾಗೊಮ್ಮೆ ಹೇಳಿದ ಸಂದರ್ಭ ಮತ್ತು ಹೇಳಕೇಳುವ ವ್ಯಕ್ತಿಗಳಿಂದ ಬದಲಾವಣೆ ಹೊಂದುವಂಥವು. ಆದರೂ ಕೃತಿಗಿಳಿಸಿ ಗಟ್ಟಿಮುಟ್ಟಾದ ಕೆಲಸ ಮಾಡಿದ ಈ ಲೇಖಕ-ಸಂಪಾದಕರನ್ನು ನಾವು ಅಭಿನಂದಿಸಲೇಬೇಕು.
ಇಂಥ ಮೌಖಿಕ ಕಥೆಗಳಲ್ಲಿ ಒಂದು ಉದ್ದೇಶ ಇದ್ದೇ ಇರುತ್ತದೆ. ಅದು ಸಾಂಸ್ಕೃತಿಕ ಅಭಿವ್ಯಕ್ತಿಯಾದ್ದರಿಂದ ನಾವದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ನವ್ಯರು ಬಂದಮೇಲೆ ನಮ್ಮ ಪ್ರಾಚೀನ ಸಾಹಿತ್ಯವನ್ನೇ ನಿರ್ಲಕ್ಷಿಸಿದ ಪಂಡಿತವರ್ಗದ ಕಣ್ಣಿಗೆ ಇಂಥ ಜಾನಪದ ರೂಪ ಬೀಳುವದೇ ವಿರಳ. ಬಿದ್ದರೂ ಇದೊಂದು ಲಘು ಹಾಸ್ಯದ ತುಕಡಿಯೆಂದು ಅಪಹಾಸ್ಯಕ್ಕೆ ಈಡಾಗುವದೇ ಹೆಚ್ಚು. ಆದ್ದರಿಂದಲೇ ಇರಬೇಕು ಈ ಬಗ್ಗೆ ಹೇಳಿಕೊಳ್ಳುವಂಥ ಕೆಲಸವನ್ನು ನಮ್ಮ ಜಾನಪದ ವಿದ್ವಾಂಸರ್ಯಾರೂ ಈವರೆಗೆ ಮಾಡಿಲ್ಲ. ಸಧ್ಯ ಲೇಖಕ-ಸಂಪಾದಕರೇ ತುಂಬ ಉಪಯುಕ್ತವಾದ “ನಮ್ಮ ಮಾತು” ಹೇಳಿದ್ದಾರೆ, ಈ ಕಥೆಗಳ ಸಾಂಸ್ಕೃತಿಕ ಮೌಲ್ಯವನ್ನು ಗುರುತಿಸಿದ್ದಾರೆ.
ಇತ್ತೀಚೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ, ಅಪರೂಪದ ಜಾನಪದ ಕೃತಿಯೆಂದು ನನ್ನ ಭಾವನೆ. ಈ ಕೃತಿಯ ಲೇಖಕ-ಸಂಪಾದಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಚಂದ್ರಶೇಖರ ಕಂಬಾರ
ಪುಟಗಳು: 152
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !