ಕೊರೊನಾ ಹರಡದಂತೆ 2020ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಲು ಕಾರಣವಾಯಿತು. ಅಸಹಾಯಕರಾದ ಕಾರ್ಮಿಕರು ಹೇಗಾದರೂ ಸರಿ ಮನೆ ತಲುಪಬೇಕೆಂದು ನಡೆದುಕೊಂಡು, ಸೈಕಲ್ ತುಳಿಯುತ್ತ ಊರುಗಳ ಹಾದಿ ಹಿಡಿದರು. ರಿತೇಶ್, ಆಶಿಶ್, ರಾಮ್‌ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್‌ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.