
ಸಾಮಾನ್ಯ ಕುಟುಂಬದ ಹುಡುಗಿಯೊಬ್ಬಳು ಅರಿಯದ ವಯಸ್ಸಿನಲ್ಲಿ ಬೆತ್ತಲೆ ಬೈರಾಗಿಯ ಮಾಯೆಗೆ ಒಳಗಾಗಿ ಮಾಟಗಾತಿಯಾಗಿಹೋದಳು. ಅವನ ಮಾತಿನಂತೆ ಬೇರೊಬ್ಬ ಹುಡುಗನನ್ನು ಮದುವೆಯೂ ಆದಳು. ಅರಿಯದೆ ಸಿಕ್ಕಿಕೊಂಡ ಬಲೆಯೊಳಗೆ ತನ್ನದೇ ಸಾಮ್ರಾಜ್ಯ ಕಟ್ಟಲು ಹೋಗಿ ಎಲ್ಲವನ್ನೂ ಕಳೆದುಕೊಂಡಳು. ತನ್ನ ಮನೆ, ಗಂಡ, ಅತ್ತೆ, ತಂದೆ ಕೊನೆಗೆ ತಾಯಿ ಮತ್ತು ತನ್ನದೇ ಅಮೂಲ್ಯ ಸಾಧನೆಯನ್ನೂ ಕಳೆದುಕೊಂಡಳು. ಇದಕ್ಕೆ ಅಡ್ಡವಾಗಿ ನಿಂತವರಲ್ಲಿ ಪ್ರಮುಖರು ಯುವ ಅಘೋರಿ ಅಗ್ನಿನಾಥ, ಎಳೆಯ ಹುಡುಗಿ ನಿಹಾರಿಕಾ, ಮುದುಕ ಶೇಷಸುಬ್ಬಾಶಾಸ್ತ್ರಿ, ಆಸಿಫ್ ಬಾಬಾ, ಕಾಳಾಗ್ನಿ ರುದ್ರಮುನಿ ಮತ್ತೂ ಹತ್ತಾರು ಮಂದಿ. ಜ್ವಾಲಾಮಾಲಿನಿ, ಪ್ರಹರಿ, ಮಾರ್ಕಾಂಡಿಗಳ ಸಂಘರ್ಷದಲ್ಲಿ ರಕ್ತ ಕಾರಿಕೊಂಡಾವರ್ಯಾರು? ಜೀವ ತೆತ್ತವಾರ್ಯಾರು? ಬದುಕು ಕಳೆದುಕೊಂಡಾವರ್ಯಾರು? ಕೇಳಿ ಮಾಟಗಾತಿ ರಣರೋಚಕ ಕಾದಂಬರಿ ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂದಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಶೀಕರಣ, ಶವ ಸಾಧನೆ, ಶವ ಭೋಜನ, ಸ್ಮಶಾನ ಜೀವನ-ಹೀಗೆ ನೂರೆಂಟು, ಸುಮಾರು ಇಪ್ಪತೈದು ವರ್ಷಗಳಿಂದಲೂ ಈ ಬಗ್ಗೆ ಒಂದು ಕುತೂಹಲ ಬೆಳೆಸಿಕೊಂಡು ಬಂದವನು ನಾನು. ಅದೇ ಗುಂಗಿನಲ್ಲಿ ಕೆಲವು ಕಾದಂಬರಿಗಳನ್ನು ಬರೆದೆ. ಮೊದಲನೆಯದು 'ಮಾಟಗಾತಿ'. ಎರಡನೆಯದು 'ಸರ್ಪ ಸಂಬಂಧ'. ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಂತಿವೆ. ಕೂತೂಹಲವಿದ್ದವರು ಓದಿಕೊಳ್ಳಬಹುದು. - ರವಿ ಬೆಳಗೆರೆ