ಪ್ರಕಾಶಕರು: ಟೋಟಲ್ ಕನ್ನಡ
Publisher: Total Kannada
ಚಿತ್ರಕಥೆ ಎನ್ನುವುದು ಚಿತ್ರಕಥಾ ಲೇಖಕ ಅಥವಾ / ಹಾಗೂ ಚಿತ್ರ ನಿರ್ದೇಶಕ ತನಗಾಗಿ ಮತ್ತು ತನ್ನ ಚಿತ್ರತಂಡದವರಿಗಾಗಿ ಸಿದ್ಧ ಮಾಡಿಟ್ಟ ಒಂದು “ಬ್ಲೂ ಪ್ರಿಂಟ್”. ಸೂಸಾನ್ ಸೊಂಟಾಗ್ ನಂತಹವರು ಚಿತ್ರಕತೆಯು ಸಾಹಿತ್ಯದ ಒಂದು ವಿಭಾಗ ಎಂದು ಎಷ್ಟೇ ವಾದಿಸಿದರೂ ಚಿತ್ರಕತೆಗೊಂದು ಸ್ವತಂತ್ರ ಅಸ್ತಿತ್ವವಿದೆಯೇ ಎಂಬ ಅನುಮಾನ ನನಗಿದ್ದೇ ಇದೆ. ಹಾಗೆನ್ನಿಸಲಿಕ್ಕೆ ಹಲವು ಕಾರಣಗಳು ಇವೆ. ಮೊದಲನೆಯದಾಗಿ ಚಿತ್ರಕತೆಯ ಬರವಣಿಗೆಯ ಸ್ವರೂಪ. ಎಚ್ಚರದಿಂದ ಆರಿಸಿದ, ರೂಪಕಾತ್ಮಕವಾದ ಭಾಷೆ ಇಲ್ಲಿ ವಜ್ರ್ಯ. ಮನೋಲಹರಿಯೂ ಸೇರಿದಂತೆ ಎಲ್ಲ ವರ್ತನೆಗಳನ್ನೂ ಮೂರ್ತ ವಿವರಗಳಲ್ಲೇ ಹೇಳುವ ಅಗತ್ಯ ಚಿತ್ರಕತೆಯಲ್ಲಿ ಇರುತ್ತದೆ. ವಾಕ್ಯ ರಚನೆಯೂ ಅಷ್ಟೆ, ಎಲ್ಲವೂ ನಿರಂತರ ವರ್ತಮಾನ ಕಾಲದಲ್ಲೇ ಇರುತ್ತದೆ. ಹಾಗಾಗಿ ಸಾಹಿತ್ಯ ಓದುವಾಗಿನ ರಸಾನುಭೂತಿ ಚಿತ್ರಕಥೆಯ ಓದುಗನಿಗೆ ಸಿಗುವುದಿಲ್ಲ. ಚಿತ್ರಕತೆಯ ಓದುಗ ಕೃತಿಯೊಂದಿಗೆ ಇಟ್ಟುಕೊಳ್ಳುವ ಸಂಬಂಧವೂ ಸಾಹಿತ್ಯದ ಓದುಗನ ಸಂಬಂಧಕ್ಕಿಂತ ಭಿನ್ನವಾದದ್ದು. ಸಾಹಿತ್ಯದ ಓದುಗ ಓದುತ್ತೋದುತ್ತ್ತ ತನ್ನ ಮನಃಪಟಲದಲ್ಲಿ ಕೃತಿಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಿರುತ್ತಾನೆ. ಸಾಹಿತ್ಯ ಕೃತಿಯ ಓದುಗನಿಗಿರುವ ಈ ಸ್ವಾತಂತ್ರ್ಯ ಚಿತ್ರಕತೆಯ ಓದುಗನಿಗಿರುವುದಿಲ್ಲ. ಆತ ಚಿತ್ರಕತೆಯನ್ನು ಓದುವಾಗ ವಿವರಗಳ ಒಳಹೊಕ್ಕು ಚಿತ್ರ ನಿರ್ದೇಶಕನ ಕಲ್ಪನೆಯ ಮೂಲಕ ಅದನ್ನು ಆಸ್ವಾದಿಸ ಬೇಕಾಗುತ್ತದೆ. ಈ ರೀತಿಯಲ್ಲಿ ಓದುಗ ನಿರ್ದೇಶಕನಾಗಿ ಪರಕಾಯ ಪ್ರವೇಶ ಮಾಡದಿದ್ದರೆ, ಚಿತ್ರಕತೆಯ ಓದು ಸ್ವಾರಸ್ಯಕರವಾಗಿರುವುದಿಲ್ಲ. ನಿರ್ದೇಶಕನೊಬ್ಬ ಸಿನಿಮಾದಲ್ಲಿ ದೃಶ್ಯ ಕಟ್ಟುವ ಕ್ರಮ ಅಂದರೆ ಸಿನಿಮಾದಲ್ಲಿ ದೃಶ್ಯ ಕಟ್ಟುವ ಕ್ರಮ, ರೂಪಕಗಳನ್ನು ಅನಾವರಣ ಮಾಡುವ ಪರಿ, ದೃಶ್ಯ, ಸಂಗೀತ, ಶಾಬ್ಧಿಕ ಘಟಕಗಳನ್ನು ಜೋಡಿಸಿ ಧ್ವನಿಶಕ್ತಿ ಹುಟ್ಟಿಸುವ ರೀತಿ ಇವುಗಳೆಲ್ಲದರ ಅರಿವು ಓದುಗನಿದ್ದಾಗ ಚಿತ್ರಕತೆಯ ಓದು ಹೆಚ್ಚು ಖುಷಿಕೊಡುತ್ತದೆ.
ನನ್ನ ಈ 35 ವರ್ಷಗಳ ಸಿನಿಮಾ ಜೀವನದಲ್ಲಿ ಅದೆಷ್ಟೋ ಚಿತ್ರಕತೆಗಳನ್ನು ಓದಿದ್ದೇನೆ. ನನ್ನ ಸಿನಿಮಾಗಳ ಚಿತ್ರಕತೆಯನ್ನು ಅನೇಕ ಮಿತ್ರರಿಗೆ ಓದಿ ಹೇಳಿದ್ದೇನೆ. ಆ ಅನುಭವಗಳಿಂದ ಹುಟ್ಟಿದ ಅನಿಸಿಕೆ ಇದು.
- ಗಿರೀಶ್ ಕಾಸರವಳ್ಳಿ
ಪುಟಗಳು: 147
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !