ಲೋಕದಲ್ಲಿ ಭಾರತ ದೇಶವು ಆಧ್ಯಾತ್ಮಿಕ ವಿದ್ಯೆಗೆ ತವರ್ಮನೆ. ಆರ್ಷೇಯ ಋಷಿಗಳು ಪರಮಾತ್ಮ ಸಾಕ್ಷಾತ್ಕಾರ ಪಥದಲ್ಲಿ ತಾವು ಕಂಡುಂಡ ಸತ್ಯವಿಚಾರಗಳನ್ನು ಮಾನವರ ಉದ್ಧಾರಕ್ಕೋಸ್ಕರವೂ, ಜಗತ್ತಿನ ಕಲ್ಯಾಣಕ್ಕೋಸ್ಕರವೂ ಉಪದೇಶ ಮಾಡಿದ್ದಾರೆ. ಈ ಉಪದೇಶಗಳು ಧರ್ಮಗ್ರಂಥಗಳಲ್ಲಿಯೂ ಶಾಸ್ತ್ರಗ್ರಂಥಗಳಲ್ಲಿಯೂ ಅಡಗಿವೆ. ಮೂಲಗ್ರಂಥಗಳು ಸಂಸ್ಕೃತದಲ್ಲಿವೆ. ಇವುಗಳಲ್ಲಿರುವ ಮಾತುಗಳು ಸಾಮಾನ್ಯವಾಗಿ ಶ್ಲೋಕ ಸೂತ್ರ ರೂಪದಲ್ಲಿವೆ. ಇವುಗಳ ವಿವರಣೆಯು ವಿದ್ವಾಂಸರುಗಳಿಂದ ಟೀಕಾ ತಾತ್ಪರ್ಯ ವ್ಯಾಖ್ಯಾನಗಳಿಂದ ಕೊಡಲ್ಪಟ್ಟಿದೆ. ಅವುಗಳನ್ನು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳಲು ವಿಶೇಷ ಪಾಂಡಿತ್ಯವಿರಬೇಕಲ್ಲದೆ ಮೂಲದ ಪರಿಚಯವೂ ಸಾಕಷ್ಟಿರಬೇಕಾಗುತ್ತದೆ.
ಇಂದಿನ ಭಾರತದ ಪರಿಸ್ಥಿತಿಯಲ್ಲಿ ಸಂಸ್ಕೃತವು ವ್ಯವಹಾರಿಕ ಭಾಷೆಯಾಗಿಲ್ಲ. ಅದು ಗ್ರಾಂಥಿಕ ಭಾಷೆಯಾಗಿದ್ದು, ಕೆಲವು ಮಂದಿ ಸಂಸ್ಕೃತ ಭಾಷಾ ವಿದ್ವಾಂಸರ ಸ್ವತ್ತಾಗಿದೆ. ಭಾರತದ ಹಲವಾರು ವ್ಯಾವಹಾರಿಕ ಭಾಷೆಗಳ ನಡುವೆ ಸಂಸ್ಕೃತ ಗ್ರಂಥಗಳನ್ನು ಅಭ್ಯಸಿಸುವವರು ತೀರಾ ಕಡಿಮೆಯೆಂದೇ ಹೇಳಬಹುದು. ದೇಶೀಯ ಭಾಷಾ ಜನರ ಪ್ರಯೋಜನಕ್ಕಾಗಿ ಸಂಸ್ಕೃತ ಗ್ರಂಥಗಳ ಅನುವಾದಗಳೂ, ಟೀಕಾ ತಾತ್ಪರ್ಯ ವ್ಯಾಖ್ಯಾನಗಳೂ ದೇಶಭಾಷೆಗಳಲ್ಲಿ ಅವತರಿಸಿದುವು. ಆದರೂ ಮೂಲಗ್ರಂಥವನ್ನು ಅರ್ಥವತ್ತಾಗಿ ಅಭ್ಯಸಿಸಿ ಪಡೆಯುವಷ್ಟು ಮಟ್ಟಿನ ಪ್ರಯೋಜನವು ಇವುಗಳಿಂದುಂಟಾದೀತೆಂದು ಹೇಳಬರುವುದಿಲ್ಲ.
ಧರ್ಮ ವಿಷಯಗಳೂ ಶಾಸ್ತ್ರ ವಿಷಯಗಳೂ ಶ್ಲೋಕ ಸೂತ್ರ ರೂಪದಲ್ಲಿರುವುದರ ಮುಖ್ಯ ಉದ್ದೇಶ, ವಿಷಯವು ಸುಲಭವಾಗಿ ಕಂಠಸ್ಥವಾಗಲೆಂಬುದೇ ಆಗಿದೆ. ಕಂಠಸ್ಥವಾಗುವುದರಿಂದ ಮತ್ತೆ ಮತ್ತೆ ಪಠಿಸಿಕೊಳ್ಳಲೂ, ಪಠಿಸಿದ್ದನ್ನು ಮನನ ಮಾಡಲೂ, ಮನನ ಮಾಡಿದುದನ್ನು ಕುರಿತು ವಿಚಾರ ಮಾಡಲೂ, ವಿಚಾರ ಮಾಡಿದುದರಲ್ಲಿನ ಸತ್ಯಾಂಶವನ್ನು ವಿವೇಕ ದೃಷ್ಟಿಯಿಂದ ಅರಿತುಕೊಳ್ಳಲೂ ಬರುತ್ತದೆ. ಇದರಿಂದ ಜ್ಞಾನ ಸಾಧನವಾಗುವುದಲ್ಲದೆ ಧ್ಯಾನ ತಪಸ್ಸುಗಳೂ ಸಾಧಿತವಾಗುತ್ತವೆ. ಐಹಿಕಾಮುಷ್ಮಿಕಫಲಗಳೂ ಸಿದ್ಧಿಸುವುವಂದು ಬೇರೆ ಹೇಳಬೇಕಾಗಿಯೇ ಇಲ್ಲ. ರಾಮಚಾರಿತ್ರ ಪಠನಾಭ್ಯಾಸಯೋಗದಿಂದ ಕುಶಲವರಿಗುಂಟಾದ ಫಲದಂತೆ ಫಲವುಂಟಾಗುವುದು.
ಸಂಸ್ಕೃತವನ್ನು ಚೆನ್ನಾಗಿ ಬಲ್ಲವರು ಮೂಲಪಾಠವನ್ನು ಕಂಠಸ್ಥವಾಗಿಸಿ ಕೊಳ್ಳಬಹುದು, ಚೆನ್ನಾಗಿ ತಿಳಿಯದವರು ಕಂಠಸ್ಥವಾಗಿಸಿಕೊಳ್ಳುವುದು ಕಷ್ಟವಾಗುವುದಿಲ್ಲವೆ? ಒಂದು ವೇಳೆ ಕಂಠಸ್ಥವಾಗಿಸಿಕೊಂಡರೂ ಅರ್ಥ ಸ್ಫುರಿಸೀತೆ? ಹಾಗಾದರೆ ಹೆಚ್ಚು ಮಂದಿ ಹಾಗೆ ಮಾಡಲು ಸಾಧ್ಯವೆ? ಮನಸ್ಸಿಟ್ಟು ಶ್ರದ್ಧಾಬುದ್ಧಿಗಳಿಂದ ಮಾಡಿದ ಕೆಲಸವಾವುದಾದರೂ ಸಾಧ್ಯವಾಗುತ್ತದೆ. ಸಂಸ್ಕೃತ ಬಲ್ಲವರಲ್ಲಿ ಅನೇಕರು ನಾಮಮಾತ್ರವಾಗಿ ಗ್ರಂಥಾಭ್ಯಾಸ ಮಾಡಿರುವವರೂ ಇಲ್ಲದೆ ಇಲ್ಲ, ಬಾರದವರಲ್ಲಿಯೂ ಕೆಲವು ಮಂದಿ ಮೂಲಪಾಠವನ್ನು ಅರ್ಥವತ್ತಾಗಿ ಅಭ್ಯಾಸ ಮಾಡಿ ಮನನ ಮಾಡಿರುವವರೂ ಇಲ್ಲದೆ ಇಲ್ಲ. ಆದರೆ ಬಹುಪಾಲು ಜನರಿಗೆ ಈ ರೀತಿಯ ಸೌಲಭ್ಯವಿರುವುದಿಲ್ಲ. ಅವರವರಿಗೆ ಅವರವರ ಭಾಷೆಯಲ್ಲಿಯೇ ವಿಷಯವನ್ನರಿಯುವ ಅನುಕೂಲವಿರಬೇಕಾದುದು ಅಗತ್ಯ.
ಆಧ್ಯಾತ್ಮಿಕ ವಿವೇಕದಿಂದಲೇ ಅತ್ಮೋನ್ನತಿ ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಗ್ರಂಥದ ಮೂಲಪಾಠವನ್ನು ಆದಷ್ಟು ಸರಳವಾಗಿ ದೇಶಭಾಷಾ ಜನತೆಯು ಅಭ್ಯಸಿಸಲು ಅನುಕೂಲವಾಗುವಂತೆ ಅವರ ನುಡಿಯಲ್ಲಿಯೇ ಬರೆಯಬೇಕಾದುದು ವಿದ್ವಾಂಸರು ಮಾಡಬೇಕಾದ ಮುಖ್ಯ ಸೇವಾಕಾರ‍್ಯ.
ಇದು ಅನೇಕ ವಿಧದಲ್ಲಿ ಈಗಾಗಲೇ ನಡೆಯುತ್ತಿದೆ. ಈ ರೀತಿ ಮಾಡುವಾಗ ಮೂರು ಮುಖ್ಯ ವಿಷಯಗಳನ್ನು ಗಮನದಲ್ಲಿ ಇಡಬೇಕಾಗುವುದು:-
೧. ಕಂಠಸ್ಥವಾಗಲು ಅನುಕೂಲವಾದ ಒಂದೇ ಪದ್ಯ ರೀತಿಯ ಬಳಕೆ;
೨. ಸಾಧ್ಯವಿದ್ದ ಮಟ್ಟಿಗೂ ಮೂಲಕ್ಕೆ ಅನುಸಾರವಾಗಿರುವಿಕೆ;
೩. ಸರಳತೆ.
ಭಗವದ್ಗೀತೆಯು ಜಗತ್ತಿನಲ್ಲೇ ಅತ್ಯಂತ ಚಿಕ್ಕದಾದ ಆಧ್ಯಾತ್ಮಿಕ ಗ್ರಂಥವೂ ಹಿಂದೂ ಧರ್ಮಗ್ರಂಥವೂ ಆಗಿದೆ. ಇದು ಲೌಕಿಕ ಗ್ರಂಥವೂ ಹೌದು. ನಿರಾಸಕ್ತಿ, ಬುದ್ಧಿ, ಕರ್ಮ, ಜ್ಞಾನ, ಸದಸದ್ವಿವೇಕ, ರಾಜವಿದ್ಯೆ, ಭಕ್ತಿ, ಯೋಗ, ವೈರಾಗ್ಯಗಳನ್ನು ಬೋಧಿಸುತ್ತದೆ. ಅಲ್ಲದೆ ಲೌಕಿಕರಿಗೂ ಇವುಗಳ ಯುಕ್ತ ರೀತಿಯ ಆಚರಣೆಯನ್ನು ನಿರ್ದೇಶಿಸುತ್ತದೆ. ಈ ಭಗವದ್ಗೀತೆಯು ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಗೊಂಡಿರುವುದಲ್ಲದೆ ಭಾರತದ ಪ್ರಾದೇಶಿಕ ಭಾಷೆಗಳೆಲ್ಲದರಲ್ಲಿಯೂ ಸಮೃದ್ಧಿಯಾಗಿ ಭಾಷಾಂತರಗೊಂಡಿದೆ. ಇದರ ಮೇಲಿನ ಟೀಕಾತಾತ್ಪರ್ಯ ವ್ಯಾಖ್ಯಾನಗಳೂ ಬೇಕಾದಷ್ಟು ಇವೆ. ಆದರೇನು? ಭಾರತದ ಜನಸಂಖ್ಯೆಯ ಶತಾಂಶದಲ್ಲಿ ಎಷ್ಟು ಜನಕ್ಕೆ ಗೀತೆಯ ಸ್ವಾರಸ್ಯದ ನಿಜವಾದ ಅರಿವು ಉಂಟಾಗಿದೆ? ಅತ್ಯಲ್ಪಕ್ಕೆಂದೇ ಹೇಳಬೇಕು. ಇದೊಂದು ಕೊರತೆಯಲ್ಲವೆ? ನಾಡುನುಡಿಗಳ ಉದ್ಧಾರದ ಜೊತೆಯಲ್ಲಿ ಬಹುಪಾಲು ಜನತೆಯ ಆತ್ಮೋದ್ಧಾರವೂ ಆಗಬೇಡವೆ? ದೇಶದ ಪ್ರತಿಯೊಬ್ಬರೂ ಅವರವರ ಭಾಷೆಯಲ್ಲಿ ಇದನ್ನು ಕಂಠಸ್ಥವಾಗಿಸಿಕೊಂಡರೆ ಅದರಿಂದ ಮೇಲೆ ಹೇಳಿದ ಫಲವನ್ನು ಪಡೆಯಲಾಗುವುದಿಲ್ಲವೆ?
ಆಧ್ಯಾತ್ಮಿಕ ದೃಷ್ಟಿ, ಧಾರ್ಮಿಕ ಭಾವನೆ, ಲೌಕಿಕ ಸದ್ವ್ಯವಹಾರ ಇವು ಮೂರೂ ಸಾರ್ವತ್ರಿಕವಾಗಿ ವ್ಯಕ್ತಿಯಲ್ಲಿ ಮುಪ್ಪುರಿಗೊಂಡು ಸಾಮರಸ್ಯ ಪಡೆದಾಗಲೇ ವ್ಯಕ್ತಿಯ ಉದ್ಧಾರ, ಕುಟುಂಬ ಸಂಸ್ಕರಣ, ಸಮಾಜದ ಕಲ್ಯಾಣ, ರಾಷ್ಟ್ರದ ಉನ್ನತಿಗಳು ಸಿದ್ಧಿಸುತ್ತವೆಯೆಂಬುದರಲ್ಲಿ ಸಂದೇಹವೇ ಇರಲಾರದು.
ಕನ್ನಡ ನಾಡಿನ ಜನತೆಯ ಸೇವೆಗಾಗಿ ಇಂಥ ವಿನಮ್ರ ಪ್ರಯತ್ನವನ್ನು ಇಲ್ಲಿ ಕೈಗೊಳ್ಳಲಾಗಿದೆ. ಭಗವದ್ಗೀತೆಯ ಪದ್ಯಾನುವಾದವು ಕನ್ನಡದಲ್ಲಿ ಈಗಾಗಲೇ ಕೆಲವಾರು ಇವೆ. ೧) ಕನ್ನಡ ಭಾರತದಲ್ಲಿರುವ ಗೀತಾರ್ಥಪ್ರಕಾಶಿಕೆ. ೨) ನಾಗರಸ ವಿರಚಿತ ಕರ್ಣಾಟಕ ಭಗವದ್ಗೀತೆ. ಇವೆರಡೂ ಭಾಮಿನಿ ಷಟ್ಪದಿಯಲ್ಲಿವೆ. ಇವು ಪೂರ್ವ ಕವಿ ವಿರಚಿತವಾದುವು. ಅಲ್ಲದೇ ಈಚಿನ ಕೆಲವು ಕರ್ತೃಗಳಿಂದ ಷಟ್ಪದಿ,ಸಾಂಗತ್ಯ, ಲಾವಣಿ ಮತ್ತು ಹೊಸಗನ್ನಡದ ವಿವಿಧ ಛಂದೋಪದ್ಯಗಳಿಂದಲೂ ಭಗವದ್ಗೀತೆಯು ಅನುವಾದಗೊಂಡಿದೆ. ಭಗವದ್ಗೀತಾಧ್ರುವ ಜಲಸರಸ್ಸಾರಾಮೃತವನ್ನು ಯಾರು ಬೇಕಾದರೂ ತಮತಮಗೆ ಶಕ್ಯವೂ ಯೋಗ್ಯವೂ ಎನಿಸಿದ ಕುಂಭಗಳಿಂದ ತುಂಬಿಕೊಂಡು ಬೇಕಾದವರಿಗೆ ಪಾನ ಮಾಡಿಸಬಹುದು. ಕೆಲವರು ರತ್ನಮಯ ಸ್ವರ್ಣಕುಂಭಗಳಿಂದಲೂ, ಇನ್ನು ಕೆಲವರು ರಜತಕುಂಭಗಳಿಂದಲೂ ಮತ್ತೆ ಕೆಲವರು ಇತರ ಪಾತ್ರ ವಿಶೇಷಗಳಿಂದಲೂ ತುಂಬಿಕೊಳ್ಳಬಹುದು. ಒಟ್ಟಿನಲ್ಲಿ ಉದ್ದೇಶ ಒಂದೇ ಆಗಿರುತ್ತದೆ. ಪ್ರಸ್ತುತ ಪ್ರಯತ್ನದಲ್ಲಿ ಮಾತ್ರ ಮೃಣ್ಮಯ ಕುಂಭದಿಂದಲೇ ತುಂಬಲಾಗಿದೆ. ಅಂದರೆ ಸಾಧ್ಯವಿದ್ದ ಮಟ್ಟಿಗೂ ಸಾಮಾನ್ಯ ಜನತೆಗೆ ಸುಗಮವೂ, ಸುಲಭವೂ ಆದ ಪದ್ಯರೀತಿಯ ಬಳಕೆಯಿಂದ ಅನುವಾದವನ್ನು ಕೈಗೊಳ್ಳಲಾಗಿದೆ.
ಅಂತೆಯೇ ಭೋಗಷಟ್ಪದಿಯನ್ನು ಸ್ವಲ್ಪ ಮಾರ್ಪಡಿಸಿ ನಾಲ್ಕು ಸಾಲಾಗಿ ಪ್ರತಿ ಸಾಲಿಗೂ ಪ್ರಾಸವಿಟ್ಟು ಯೋಗಷಟ್ಪದಿಯನ್ನಾಗಿ ಮಾಡಿ ಈ ಅನುವಾದವನ್ನು ರಚಿಸಲಾಗಿದೆ. ಪದ್ಯವು ಕಂಠಸ್ಥವಾಗಲು ಪ್ರಾಸದಿಂದ ಅನುಕೂಲವಾಗುವುದು. ಈ ಷಟ್ಪದಿಯನ್ನು ಬಳಸಿಕೊಳ್ಳಲು ಹಿಂದಿನ ಕಾಲದಲ್ಲಿ ಮನೆಯ ಹೆಣ್ಣು ಮಕ್ಕಳು ಹೇಳಿಕೊಳ್ಳುತ್ತಿದ್ದು ಕೆಲವೆಡೆ ಇಂದೂ ಹೇಳಿಕೊಳ್ಳುತ್ತಿರಬಹುದಾದ ಸುಧಾಮಚರಿತ್ರೆ ಹಾಡಿನಿಂದ ಸ್ಫೂರ್ತಿ ದೊರೆಯಿತು. ನಾಡಿನ ಪ್ರತಿ ಹೆಣ್ಣೂ ಗೀತಾಭ್ಯಾಸ ಮಾಡಿದರೆ ನಾಡಿಗೆ ನಾಡೇ ಉನ್ನತಿ ಹೊಂದುವುದರಲ್ಲಿ ಸಂದೇಹವಿರಲಾರದು. ಭಾಮಿನೀ ಷಟ್ಪದಿಯು ಕಂಠಸ್ಥವಾಗಿಸಿಕೊಳ್ಳಲು ದೊಡ್ಡದಾಗುವುದು. ಭೋಗ ಅಥವ ಯೋಗ ಷಟ್ಪದಿಯು ಈ ಕೊರತೆಯನ್ನು ನಿವಾರಿಸುವುದೆಂದು ಭಾವಿಸಲಾಗಿದೆ.
ಪರಮಾತ್ಮ ಪ್ರೀತ್ಯರ್ಥವಾಗಿ ಪರಮಾತ್ಮ ಪ್ರೇರಣೆಯಿಂದಲೇ ಕೈಗೊಂಡಿರುವ ಈ ಪ್ರಯತ್ನದಿಂದ ನಾಡಿನ ಹೆಣ್ಣು ಗಂಡು ಜನತೆಗೆ ಕಿಂಚಿತ್ತಾದರೂ ಪ್ರಯೋಜನವಾಗುವುದೆಂದು ಆಶಿಸಲಾಗಿದೆ. ಹಾಗಾದರೆ ಲೇಖಕನ ಶ್ರಮ ಸಾರ್ಥಕ.
ಶಕವರ್ಷ ೧೮೮೭ ಮಾರ್ಗಶೀರ್ಷ ಶುದ್ಧ
ಏಕಾದಶೀ ಮಂಗಳವಾರ
‘ಶ್ರೀ ಗೀತಾಜಯಂತಿ’
ತಾರೀಖು ೧೫-೧೨-೬೪
ಅಮೃತ ಚನ್ನಶಾಮ
ತುಮಕೂರು
ಓಂ
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !