ಈ ಪುಸ್ತಕವು ಕಥಾಸಂಕಲನವಾಗಿದೆ. ಇದರಲ್ಲಿ ಇರುವ ಕಥೆಗಳನ್ನು ವೈಜ್ಞಾನಿಕ ಮತ್ತು ಕಾಲ್ಪನಿಕ ತಳಹದಿಗಳ ಮೇಲೆ ಬರೆಯಲಾಗಿದೆ. ನನ್ನ ಅಚ್ಚುಮೆಚ್ಚಿನ ಕಥೆಗಾರ ಸತ್ಯಜಿತ್ ರೇ ಅವರ ನೆನಪಿನೊಂದಿಗೆ ಈ ಕಥೆಗಳನ್ನು ಬರೆಯುತ್ತಿದ್ದೇನೆ. ತನ್ನ ಕ್ರಿಕೆಟ್ ಆಟದ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಳ್ಳುವ ಅಮಾಯಕ ಹುಡುಗ, ಮನೆಗೆ ಬಂದ ಗೆಳೆಯನಿಗೆ ಆ ಸಮಯದಲ್ಲಿ ತಾನೇ ಮನೆಯಲ್ಲಿಲ್ಲದಿದ್ದರೂ ಅವನಿಗೆ ತನ್ನ ಅನುಪಸ್ಥಿತಿಯೇ ತಿಳಿಯದಂತೆ ನೋಡಿಕೊಂಡ ಜಾದೂಗಾರ, ಜಗತ್ತಿನ ಒಳಿತಿಗಾಗಿ ತಾನು ಕೈಗೊಂಡ ಪ್ರಯೋಗದಿಂದ ಜಗತ್ತಿಗೇ ಗಂಡಾಂತರ ಒದಗುವ ಸಂದರ್ಭ ಬಂದಾಗ ಆ ಗಂಡಾಂತರಕ್ಕೆ ತನ್ನನ್ನೇ ಒಡ್ಡಿಕೊಂಡು ತನ್ನ ಜೀವವನ್ನೇ ತ್ಯಾಗಮಾಡಿ ಆ ಗಂಡಾಂತರವನ್ನು ದೂರಮಾಡಿದ ವಿಜ್ಞಾನಿ ಹೀಗೆ ಅನೇಕ ಕಾಲ್ಪನಿಕ ವ್ಯಕ್ತಿಗಳು ಜೀವಂತವಾಗಿ ಓದುಗರ ಕಣ್ಣೆದುರು ನಿಲ್ಲುವಂತೆ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ವೈಜ್ಞಾನಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಫ್ಯಾಂಟಸಿ ಜಗತ್ತಿನ ಬಗೆಗೆ ಕುತೂಹಲ ಹೊಂದಿರುವವರೆಲ್ಲರಿಗೂ ಈ ಕಥೆಗಳು ಇಷ್ಟವಾಗುತ್ತವೆ ಎಂಬ ನಂಬಿಕೆ ನನ್ನದು. ಓದುಗರ ಸಲಹೆ ಸೂಚನೆಗಳಿಗೆ, ಟೀಕೆ ಟಿಪ್ಪಣಿಗಳಿಗೆ ಸದಾ ಸ್ವಾಗತವಿದೆ.