ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಡಾ|| ಸಂತೋಷ ಹಾನಗಲ್ಲ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತೀಕಂಠ, ಸ್ವರಶಿರೋಮಣಿ, ಸಂಗೀತ ಕಲಾರತ್ನ, ಸಪ್ತಗಿರಿ ಸಂಗೀತ ವಿದ್ವನ್ಮಣಿ ಗಂಗೂಬಾಯಿ ಹಾನಗಲ್ಲ (೧೯೧೩-೨೦೦೯) ಕರ್ನಾಟಕದ ಪ್ರಮುಖ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರು. ಅವರ ಹುಟ್ಟು ಹೆಸರು ‘ಗಾಂಧಾರಿ ಹಾನಗಲ್ಲ’. ಗಾಯಕಿಯಾಗಿ ಭಾರತೀಯ ಸಂಗೀತ ವಲಯದಲ್ಲಿ ಗಂಗೂಬಾಯಿ ಅವರು ಪ್ರಸಿದ್ಧಿಯನ್ನು ಪಡೆಯತೊಡಗಿ ದಂತೆ ತಮ್ಮ ಹೆಸರನ್ನು ‘ಗಂಗೂಬಾಯಿ ಹುಬ್ಳೀಕರ’ ಎಂದು ಬದಲಾಯಿಸಿ ಕೊಂಡರು. ಮುಂದೆ ಗಂಗೂಬಾಯಿ ಹಾನಗಲ್ಲರವರು ಮತ್ತೊಮ್ಮೆ ತಮ್ಮ ಹೆಸರನ್ನು ಬದಲಿಸಿಕೊಂಡ ಪ್ರಸಂಗ ಕುತೂಹಲಕರವಾಗಿದೆ. ೧೯೩೬ರಲ್ಲಿ ಗಂಗೂಬಾಯಿಯವರು ‘ಮಿಯಾ ಕಿ ಮಲ್ಹಾರ’ ರಾಗವನ್ನು ಹಾಡುತ್ತಾರೆ. ಈ ರಾಗವನ್ನು ಆಕಾಶವಾಣಿ ಪ್ರಸಾರ ಮಾಡಲು ಮುಂದೆ ಬರುತ್ತದೆ. ಆಗ ಗಂಗೂಬಾಯಿಯವರ ಸೋದರಮಾವ ಕೃಷ್ಣಪ್ಪನವರು ಗಂಗೂಬಾಯಿ ಯವರ ಹೆಸರಿನ ಜೊತೆ ಅವರ ಪೂರ್ವಜರ ಹಾನಗಲ್ಲವನ್ನು ಸೇರಿಸ ಬೇಕೆಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ ‘ಗಂಗೂಬಾಯಿ ಹಾನಗಲ್ಲ’ ಎನ್ನುವ ಹೆಸರಿನೊಡನೆ ಆಕಾಶವಾಣಿ ಮಿಯಾ ಕಿ ಮಲ್ಹಾರ್ ರಾಗವನ್ನು ಪ್ರಸ್ತುತಪಡಿಸುತ್ತದೆ. ಅಂದಿನಿಂದ ‘ಗಂಗೂಬಾಯಿ ಹಾನಗಲ್ಲ’ ಎನ್ನುವ ಹೆಸರಿನೊಂದಿಗೆ ತಮ್ಮ ಸಂಗೀತ ಯಾತ್ರೆಯನ್ನು ಮುಂದುವರೆಸುತ್ತಾರೆ.
ಗಂಗೂಬಾಯಿಯವರ ತಾಯಿ ಅಂಬಾಬಾಯಿ. ಆಕೆಯು ಸ್ವತಃ ಉತ್ತಮ ಕರ್ನಾಟಕ ಸಂಗೀತ ಪಟು. ಆರಂಭದಲ್ಲಿ ಗಂಗೂಬಾಯಿಯವರು ತಾಯಿಯ ಹಾಡುಗಾರಿಕೆಯನ್ನು ಅನುಸರಿಸಿ ಸೊಗಸಾಗಿ ಕೀರ್ತನೆ, ಜಾವಡಿಗಳನ್ನು ಹಾಡುವುದನ್ನು ನೋಡಿ ಅಂಬಾಬಾಯಿಯವರು ತಾವು ಸಂಗೀತ ಕಾರ್ಯಕ್ರಮಗಳನ್ನು ನೀಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಇದು ತಾಯಿಯಾದವಳು ಮಗಳಿಗಾಗಿ ಮಾಡಿದ ಅಪೂರ್ವ ತ್ಯಾಗ. ಅಂಬಾಬಾಯಿಯವರಿಗೆ ಮಗಳು ಹಿಂದೂಸ್ತಾನಿ ಸಂಗೀತವನ್ನು ಕಲಿಯಲಿ ಎಂದು ಆಸೆ. ಅದಕ್ಕಾಗಿ ಧಾರವಾಡವನ್ನು ಬಿಟ್ಟು ಹುಬ್ಬಳ್ಳಿಗೆ ಬಂದು ಮಗಳಿಗೆ ಸಂಗೀತವನ್ನು ಕಲಿಸುತ್ತಾರೆ. ಶಾಲಾಭ್ಯಾಸವು ಐದನೆಯ ತರಗತಿಗೆ ಮುಕ್ತಾಯವಾದರೂ, ಗಂಗೂಬಾಯಿಯವರು ತಮ್ಮ ಸಂಗೀತ ಸಾಧನೆಯನ್ನು ಮುಂದುವರೆಸಿ, ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಕರ್ನಾಟಕ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಮುಂತಾದ ಮಹೋನ್ನತ ವಿದ್ಯಾಲಯಗಳಿಂದ ಗೌರವ ಡಾಕ್ಟೋರೇಟ್ ಪದವಿಗಳನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಜೊತೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗುತ್ತಾರೆ. ೯೭ ವರ್ಷಗಳ ತುಂಬು ಜೀವನವನ್ನು ನಡೆಸಿದ ಗಂಗೂಬಾಯಿ ಹಾನಗಲ್ಲರವರು ಮರಣೋತ್ತರ ತಮ್ಮ ಕಣ್ಣುಗಳನ್ನು ದಾನಮಾಡಿದ್ದು ಅವರ ಮಾನವೀಯ ಗುಣದ ಪ್ರತೀಕವಾಗಿದೆ.
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !