ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಮಿಮಿ ಬೇರ್ಡ್ ಅವರು ತಮ್ಮ ತಂದೆಯ ಕುರಿತಾಗಿ ಬರೆದ ಈ ಮನೋವೈಜ್ಞಾನಿಕ ಜೀವನಚರಿತ್ರೆಯನ್ನು, ಪ್ರಜ್ಞಾ ಶಾಸ್ತ್ರಿಯವರು ಕನ್ನಡಕ್ಕೆ ತಂದಿದ್ದಾರೆ. ಆ ಕೃತಿಯ ಕುರಿತು ಕಾದಂಬರಿಕಾರ ಡಾ. ಕೆ.ಎನ್. ಗಣೇಶಯ್ಯ ಅವರು ಹೀಗೆ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಎರಡು ತಲೆಮಾರುಗಳ ನಡುವಿನ ದುರಂತ ಕೊಂಡಿಗಳನ್ನು ಬೆಸೆಯುವ ಸತ್ಯಗಾಥೆ ಈ ಕೃತಿ. ತಂದೆಯು ಪ್ರಸಿದ್ಧ ವೈದ್ಯನಾಗಿದ್ದರೂ ತಾಯಿಯ ಕೆಲವು ಕಠಿಣ ನಿರ್ಧಾರಗಳಿಂದಾಗಿ ಆತನ ಪರಿಚಯವೇ ಇಲ್ಲದಂತೆ ಮಗಳು (ಮಿಮಿ ಬೇರ್ಡ್) ಬೆಳೆಯುತ್ತಾಳೆ. ಮುಂದೊಮ್ಮೆ ತಂದೆಯನ್ನು ಹುಡುಕಿಕೊಂಡು ಭೂತಕಾಲಕ್ಕೆ ತೆರಳಿದಾಗ, ಮನೋರೋಗಿಯಾಗಿದ್ದ ಅಪ್ಪನ ದುರಂತ ಜೀವನವು ಅವಳೆದುರು ತೆರೆದುಕೊಳ್ಳುತ್ತದೆ.
ಉನ್ಮಾದಗ್ರಸ್ತ ಖಿನ್ನತೆಗೆ ಒಳಗಾಗಿ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗಿ, ಸಾಲದೆಂಬಂತೆ ಆ ಕಾಲದ ವಿಕೃತ ಶುಶ್ರೂಷೆಗಳನ್ನೂ ಅನುಭವಿಸಿದ ಅವನ ಬವಣೆಯ ವಿವರಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ಕತ್ತಲಲ್ಲಿ ಹುದುಗಿ ಹೋಗಿದ್ದ ಅಪ್ಪ ಮಗಳಿಗೆ ಕಾಣಿಸತೊಡಗುತ್ತಾನೆ. ಆತ ಅನುಭವಿಸಿದ ಹಿಂಸೆ, ಕ್ರೌರ್ಯಗಳ ಜೊತೆಗೆ ತಾಯಿಯ ಕಾಠಿಣ್ಯ ಹಾಗೂ ಆ ವರ್ತನೆಯ ಹಿಂದಿನ ಅನಿವಾರ್ಯತೆಯೂ ಅರಿವಾಗತೊಡಗುತ್ತದೆ. ಪುಟಗಳನ್ನು ತಿರುವುತ್ತಿದ್ದಂತೆ, ಮಗಳ ಕಣ್ಣೀರಿಗೆ ಓದುಗರದ್ದೂ ಜೊತೆಯಾಗುತ್ತದೆ.
ಮನೋರೋಗಿಯೆಂದೋ ಅಥವಾ ಅಸಹಜ ವರ್ತನೆಯ ವ್ಯಕ್ತಿಯೆಂದೋ ಹಣೆಪಟ್ಟಿ ಹೊತ್ತು, ಸಮಾಜದಿಂದ ತಿರಸ್ಕೃತಗೊಳ್ಳುವ ವ್ಯಕ್ತಿಗಳಲ್ಲಿಯೂ ಒಂದು ನವಿರಾದ ಅಂತರಾಳ ಅಡಗಿರುತ್ತದೆ. ಅದು ಸುತ್ತಲಿನವರ ಕ್ರೂರದೃಷ್ಟಿಗೆ, ಅಪಹಾಸ್ಯಕ್ಕೆ ಸಿಕ್ಕು ಮತ್ತಷ್ಟು ನಲುಗಿಹೋಗುತ್ತದೆ. ಈ ಕಹಿವಾಸ್ತವಕ್ಕೆ ಸಮಾಜವಷ್ಟೇ ಅಲ್ಲದೆ ವೈದ್ಯ ವ್ಯವಸ್ಥೆಯೂ ಕುರುಡಾಗಿರುವ ಶೋಚನೀಯ ಸಂಗತಿಯನ್ನು ಈ ಕೃತಿಯು ಅನಾವರಣಗೊಳಿಸುತ್ತದೆ.
ರೋಗಿಗಳ ಮತ್ತು ವೈದ್ಯರ ನಡುವೆ ಇರಬೇಕಿದ್ದ ಭಾವನಾತ್ಮಕ ಕೊಂಡಿಗಳು ಮಾಯವಾಗಿ, ಆ ಜಾಗವನ್ನು ಕೇವಲ ಯಂತ್ರಗಳು, ಮಾಪನಗಳು ಹಾಗೂ ಗಣಕಗಳ ಜಾಲಗಳೇ ತುಂಬುತ್ತಿರುವ ಇಂದಿನ ವೈದ್ಯಕೀಯ ವ್ಯವಸ್ಥೆಯ ತೊಡೆ ಗಿಲ್ಲಿ ಎಚ್ಚರಿಸುವ ಶಕ್ತಿ ಇರುವ ಈ ಕೃತಿಯು, ಸಹೃದಯ ಓದುಗರಲ್ಲಿ ವಿಚಾರ ಮಂಥನದ ಬೀಜವನ್ನೂ ಬಿತ್ತುತ್ತದೆ.
ಪುಟಗಳು: 250
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !