ಹರಿಕಿರಣ್. ಹೆಚ್ ರವರದ್ದು ದಿ. ಶ್ಯಾಮ ಭಟ್ ಮತ್ತು ಶಕುಂತಲಾರವರ ಮಗನಾಗಿ ಜನವರಿ ೨೮, ೧೯೮೩ ರಂದು ಕಾಸರಗೋಡಿನ ಬದಿಯಡ್ಕದಲ್ಲಿ ಜನನ. ಈಗ ಕಾಸರಗೋಡಿನ ಕುಂಬ್ಳೆಯ ಸಮೀಪ ನಾಯ್ಕಾಪು ಎಂಬಲ್ಲಿ ವಾಸವಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮುಗಿಸಿ, ಬಿ. ಫಾರ್ಮ ಮತ್ತು ಎಂ. ಫಾರ್ಮಗಳನ್ನು ಮಂಗಳೂರಿನಲ್ಲಿ ಅಭ್ಯಸಿಸಿರು ತ್ತಾರೆ. ಅನಂತರ ಕೆಲವು ವರ್ಷಗಳ ಕಾಲ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಔಷಧಿ ವ್ಯಾಪಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತಿದ್ದು, ಕೆಲವೊಂದು ಕತೆಗಳು ಕನ್ನಡದ ಕೆಲವು ಹೆಸರಾಂತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿದೆ. ‘ಲಾಲಿಪಾಪ್ ಮತ್ತು ಇತರ ಕತೆಗಳು’ ಇವರ ಚೊಚ್ಚಲ ಕೃತಿ. ವಿಭಿನ್ನ ರೀತಿಯ ಸಣ್ಣ ಕತೆಗಳ ಕತಾಸಂಕಲನ ಇದಾಗಿದೆ.