ಲೇಖಕರ ನಾಲ್ಕು ಬೇರೆ ಬೇರೆ ಕಥಾಗುಚ್ಛಗಳಿಂದ ಆಯ್ದ ಅತ್ಯುತ್ತಮ ಕತೆಗಳ ಸಂಕಲನವಿದು. `ಇಲ್ಲಿನ ಕತೆಗಳು ವಿಭಿನ್ನ ಚೌಕಟ್ಟಿನಲ್ಲೇ ಮುಕ್ತವಾಗಿವೆ. ಓದಿಸಿಕೊಳ್ಳುತ್ತವೆ, ಸಂವೇದನೆಯನ್ನು ಕೆದಕುತ್ತವೆ. ಅಲ್ಲಲ್ಲಿ ಚಿಂತನೆಗೂ ಹಚ್ಚುತ್ತವೆ. ಒಂದು ಜನಜೀವನದ ಸಂಕಷ್ಟಗಳನ್ನು ಮನಸ್ಸಿಗೆ ತಾಕುವಂತೆ ವಿವರಿಸುತ್ತವೆ. ವಿಶಿಷ್ಟ ವ್ಯಕ್ತಿಗಳ ಮನಸ್ಥಿತಿಯನ್ನು ಸಂದರ್ಭಕ್ಕೆ ಅನುಸಾರ ಅನಾವರಣಗೊಳಿಸುತ್ತವೆ. ಆತ್ಮಸಾಕ್ಷಿ ಕೆಣಕುತ್ತವೆ. ಕತೆಗಾರ ಇಲ್ಲಿ ತನ್ನ ವ್ಯಕ್ತಿತ್ವವೇ ಅನಾವರಣಗೊಳ್ಳುವ ಬಗೆಯಲ್ಲಿ ಇಲ್ಲಿಯ ಹಲವು ಕತೆಗಳನ್ನು ಬರೆದಿದ್ದಾನೆ. ಆ ಮೂಲಕ ಅಖಂಡ ಬದುಕಿನ ವಿಮರ್ಶಕನಾಗಿ ನಾನಾ ಕೋನಗಳಲ್ಲಿ ನಿಂತು ಜೀವನವನ್ನು ಅರ್ಥೈಸಿಕೊಳ್ಳುತ್ತ ಬರೆದ ಕತೆಗಳಿವು’ ಎಂದು ಈ ಕೃತಿಗೆ ಮುನ್ನುಡಿ ಬರೆದಿರುವ ಕತೆಗಾರ್ತಿ ಸುನಂದಾ ಕಡಮೆ ಅವರು ಇಲ್ಲಿನ ಕತೆಗಳ ಕುರಿತು ವಿವರಿಸಿದ್ದಾರೆ. ಈ ಕೃತಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನಿಂದ `ಜಿ.ಎನ್. ಹೇಮರಾಜ ದತ್ತಿ ಪ್ರಶಸ್ತಿ’ ಲಭಿಸಿದೆ.