ಕನ್ನಡದ ಜನಪ್ರಿಯ ವಾರಪತ್ರಿಕೆ “ಮಂಗಳ”ದಲ್ಲಿ ೨೦೨೧ರಲ್ಲಿ ಧಾರಾವಾಹಿಯಾಗಿ ಇಪ್ಪತ್ನಾಲ್ಕು ಕಂತುಗಳಲ್ಲಿ ಮೂಡಿಬಂದು ಓದುಗರನ್ನು ರೋಮಾಂಚನಗೊಳಿಸಿದ ಕಾದಂಬರಿ ಛಾಯಾ-ಯುದ್ಧ! ದೇಶದ ರಕ್ಷಣಾ ಮಂತ್ರಿಗಳ ಹತ್ಯೆಯ ವಿಫಲ ಪ್ರಯತ್ನವೊಂದು ನಡೆಯುತ್ತದೆ. ಹಂತಕ ಇದ್ದಕ್ಕಿದ್ದಂತೆ ಸಚಿವರ ಬೆಡ್ರೂಮಿನಲ್ಲಿ ಪ್ರತ್ಯಕ್ಷನಾಗಿರುತ್ತಾನೆ. ಆತ್ಮ ರಕ್ಷಣೆಗಾಗಿ ಸಚಿವರು ಗುಂಡು ಹಾರಿಸುತ್ತಾರೆ! ಅ ವ್ಯಕ್ತಿ ಅವರ ಕಣ್ಣೆದುರೇ ಅದೃಶ್ಯನಾಗುತ್ತಾನೆ. ಭಯೋತ್ಪಾದನೆಯ ನಿಯಂತ್ರಣ ಮತ್ತು ನಿರ್ಮೂಲನಾ ಸಂಸ್ಥೆ ಎನ್.ಅಯ್.ಎ ಸಂಸ್ಥೆಯ ಮುಖ್ಯಸ್ಥರು ಮತ್ತು ಏಜೆಂಟ್ ಕಾರ್ತಿಕ್ ಈ ವಿಷಯ ಚರ್ಚಿಸುತ್ತಾರೆ. ರಾಷ್ಟ್ರೀಯ ಮೆಂಟಲ್ ಇನ್ಸಿಟ್ಯೂಟಿನ ಮುಖ್ಯಸ್ಥರು ತಮ್ಮ ಗಮನಕ್ಕೆ ಬಂದ ಎರಡು ಮಾನಸಿಕ ರೋಗಿಗಳ ವಿಚಿತ್ರ ಕೇಸುಗಳನ್ನು ವಿವರಿಸುತ್ತಾರೆ. ಆ ಕೇಸುಗಳಿಗೂ ಸಚಿವರ ಹತ್ಯೆಯ ಪ್ರಯತ್ನಕ್ಕೂ ಸಂಬಂಧವಿದೆಯಿಯೆಂದು ಕಾರ್ತಿಕ್ ತರ್ಕಿಸುತ್ತಾನೆ. ಇಡೀ ಕೇಸಿನ ತಪಾಸಣೆಯ ಹೊಣೆ ಕಾರ್ತಿಕ್ ಹೊರುತ್ತಾನೆ. ಚೆನ್ನೈಯಲ್ಲಿ ಒಬ್ಬ ಮಾನಸಿಕ ವಿಕಲ್ಪದಿಂದ ನರಳುತ್ತ, ಅದೃಷ್ಯರಾಗಿ ಮತ್ತೆ ಪುನರೂಪುಗೊಳ್ಳುವ ಜನರನ್ನು ನೋಡಿದ್ದ, ಅಂತ ಘಟನೆಯಲ್ಲಿ ಭಾಗಿಯಾಗಿದ್ದ ರೋಗಿಯನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಾನೆ. ಎಲ್ಲಿಂದಲೋ ಅವತರಿಸಿದ ಹಂತಕನೊಬ್ಬ ರೋಗಿಯ ಹತ್ಯೆ ಮಾಡಿ ಮಾಯವಾಗುತ್ತಾನೆ! ಇನ್ನೊಬ್ಬ ಮಾನಸಿಕ ರೋಗಿಯನ್ನು ಭೇಟಿ ಮಾಡಿ ಕಾಲದಲ್ಲಿ ಹಿಂದೆ ಹೋಗುವ ರಿಗ್ರೆಶನ್ ಟೆಕ್ನಿಕ್ ಉಪಯೋಗಿಸಿ, ಇಂತಾದೊAದು ಸಂಶೋಧನೆಯನ್ನು ಮಿಲಿಟರಿಯಲ್ಲಿದ್ದ ಒಬ್ಬ ಕ್ಯಾಪ್ಟನ್ ಮಾಡುತ್ತಿದ್ದ ರಹಸ್ಯವನ್ನು ತಿಳಿದುಕ್ಕೊಳ್ಳುತ್ತಾನೆ. ರಾತ್ರಿಯ ಬಸ್ಸಿನಲ್ಲಿ ಪ್ರಯಾಣಿಸುವಾಗ ಶಕೀಲಾ ಎಂಬ ಸುಂದರ ತರುಣಿ ಜೊತೆಯಾಗುತ್ತಾಳೆ. ಅವಳೊಂದಿಗೆ ಸಖ್ಯ ಬೆಳಸುತ್ತಾನೆ. ಅಪರಾಧಿಯ ಹುಡುಕಾಟದಲ್ಲಿ ಆಕೆ ಅವನಿಗೆ ಪದೇಪದೇ ಸಿಕ್ಕುತ್ತಿರುತ್ತಾಳೆ. ಕಾರ್ತಿಕ್‌ಗೆ ಅನುಮಾನ-ಆಕೆ ಶತೃ ಗ್ಯಾಂಗಿನವಳು ಎಂದು! ಕೇಸಿನ ತಲೆ-ಬುಡ ಸಿಕ್ಕದಿದ್ದಾಗ ಕಾರ್ತಿಕ್ ಖ್ಯಾತ ವಿಜ್ಞಾನಿಯೊಬ್ಬರನ್ನು ಭೇಟಿ ಮಾಡಲು ಹಿಮಾಚಲ ಪ್ರದೇಶಕ್ಕೆ ಹೋಗುತ್ತಾನೆ. ಡಾ.ರಾಮಯ್ಯ ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರ ಎನರ್ಜಿ ಫಾರ್ಮುಲಾವನ್ನು ಆಧರಿಸಿ ಟೆಲಿಪೋರ್ಟೇಶನ್ ಎನ್ನುವ ತಂತ್ರಜ್ಞಾನವನ್ನು ಒಬ್ಬ ಆವಿಷ್ಕಾರ ಮಾಡುತ್ತಿದ್ದ ಎನ್ನುವ ಸುದ್ದಿ ನೀಡುತ್ತಾರೆ. ಆ ವ್ಯಕ್ತಿಯ ಬೆನ್ನು ಹೋದಾಗ ಮನೆಯೊಂದರಲ್ಲಿ ಶಕೀಲಾಳನ್ನು ಕಂಡು ಅಚ್ಚರಿಪಡುತ್ತಾನೆ. ಅವನ ಶೋಧನೆ ಹತ್ತು ಹಲವು ಜಾಡುಗಳನ್ನು ಹಿಡಿಯುತ್ತದೆ. ಕೊನೆಗೆ ತನ್ನೊಂದಿಗೆ ಸಖ್ಯ ಬೆಳಸಿರುವವಳು ಶತೃ ಗ್ಯಾಂಗಿನ ಸದಸ್ಯೆ ಎನ್ನುವುದು ಕಾರ್ತಿಕ್‌ಗೆ ಅರಿವಾಗುತ್ತದೆ! ಆಕೆಯ ಗ್ಯಾಂಗಿನವರು ಕಾರ್ತಿಕ್‌ನನ್ನು ಬಂಧಿಸಿ ಬರ್ಮಾ(ಮೈಯಾನ್ಮಾರ್)ಕ್ಕೆ ಟೆಲಿಪೋರ್ಟ್ ಮಾಡುತ್ತಾರೆ! ನಿಜವಾದ ಖಳನಾಯಕ ಅಲ್ಲಿರುತ್ತಾನೆ!! ಅಲ್ಲಿ ಖಳನಾಯಕನನ್ನು ಮಾತಿಗೆಳೆದು, ಅವನ ರಹಸ್ಯವನ್ನೆಲ್ಲಾ ತಿಳಿದುಕೊಳ್ಳುತ್ತಾನೆ ಕಾರ್ತಿಕ್. ದೇಶದ ಸಂಪನ್ಮೂಲ ಉಪಯೋಗಿಸಿ ಸರ್ಕಾರವನ್ನು ಬ್ಲಾಕ್‌ಮೈಲ್ ತನ್ನದೇ ಒಂದು ಸ್ಯಾಟಲೈಟ್ ಲಾಂಚ್ ಮಾಡಿ ವಿಶ್ವಕ್ಕೇ ಒಡೆಯನಾಗುವ ತನ್ನ ಯೋಜನೆಯ ಬಗೆಗೆ ಕೊಚ್ಚಿಕ್ಕೊಳ್ಳುತ್ತಾನೆ ಖಳನಾಯಕ! ಆವಿಷ್ಕಾರವನ್ನು ದೇಶಕ್ಕೆ ಒಪ್ಪಿಸುವಂತೆ ಕಾರ್ತಿಕ್ ಹೇಳಿ ಖಳನಾಯಕನ ಮನ ಒಲಿಸಲು ಪ್ರಯತ್ನಿಸುತ್ತಾನೆ. ಹಲವಾರು ಪ್ರಾಣಾಪಾಯಗಳನ್ನು ಎದುರಿಸುತ್ತಾ, ಸುಂದರ ಹೆಣ್ಣುಗಳ ಬಲೆಯಲ್ಲಿ ಸಿಕ್ಕದೆ ಅಡಿಗಡಿಗೂ ರೋಮಾಂಚಕ ತಿರುವು ಪಡೆಯುವ ಶೋಧನೆಯಲ್ಲಿ ಕಾರ್ತಿಕ್ ಹೇಗೆ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ಮಯಾನ್ಮಾರ್‌ನಿಂದ ಭಾರತಕ್ಕೆ ಮರುಳುತ್ತಾನೆ ಎನ್ನುವುದು ಕಾದಂಬರಿಯಲ್ಲಿ ರಸವತ್ತಾಗಿ ಮೂಡಿದೆ.