ನಾನು ನನ್ನ ಬಾಲ್ಯವನ್ನು ನನ್ನಜ್ಜ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಕಳೆದವನು. ನೂರಾರು ಕಥೆಗಳನ್ನು ಅಜ್ಜ ನನಗೆ ಹೇಳಿದ್ದರು. ಆದರೆ ಅದರಲ್ಲಿ ನನಗೆ ನೆಪಿರುವ ಕಥೆಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲವೇನೋ! ಇನ್ನೂ ಐದು ವರ್ಷ ತುಂಬದ ನನ್ನ ಮಗಳು ಕಥೆ ಹೇಳು ಎಂದು ಪೀಡಿಸುತ್ತಿದ್ದಾಗ ಕೆಲವೊಂದು ಜ್ಞಾಪಕಕ್ಕೆ ಬರುತ್ತಿದ್ದವು. ಹಾಗೆ ನೆನಪಿಗೆ ಬಂದ ಕಥೆಗಳನ್ನೆಲ್ಲಾ ದಾಖಲಿಸಲು ತೀರ್ಮಾನಿಸಿದ್ದೆ. ಅಜ್ಜ ಹೇಳಿದ್ದ ಕಥೆಗಳು’ಎಂಬ ಶಿರ್ಷಿಕೆಯಲ್ಲಿ ನೆನಪಾದಾಗ ಬರೆದು ಬ್ಲಾಗಿನಲ್ಲಿ ಹಾರಿಬಿಡುತ್ತಿದ್ದೆ. ಇನ್ನು ಕೆಲವು ಅಲ್ಲಲ್ಲಿ ಓದಿದ ಕತೆಗಳಿಂದ ಪ್ರೇರೇಪಿತವಾದವುಗಳು. ಬುದ್ಧ ನಕ್ಕ ಕತೆಯಂತೂ ನನ್ನ ಮಗಳು ಹೇಳಿದ ಒಂದು ಸಣ್ಣ ಇಂಗ್ಲಿಷ್ ಕತೆಯಿಂದ ಸ್ಫೂರ್ತಿಗೊಂಡಿದ್ದು. ಭೂಮಿ ಸೃಷ್ಟಿದೇವತೆಯಾದ ಕತೆ ನನ್ನದೇ ಕಲ್ಪನೆ! ಹೀಗೆ ಬರೆಯಿಸಿಕೊಂಡ ಬಹುತೇಕ ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದವು. ಆ ಎಲ್ಲಾ ಪತ್ರಿಕೆಗಳ ಸಂಪಾದಕರುಗಳಿಗೆ, ಅವುಗಳಿಗೆ ಚಿತ್ರಗಳನ್ನು ಬಿಡಿಸಿಕೊಟ್ಟ ಕಲಾವಿದರುಗಳಿಗೆ ನಾನು ಋಣಿ. ಅವೆಲ್ಲವನ್ನೂ ಈ “ಬುದ್ಧ ನಕ್ಕ!” ಸಂಕಲನದಲ್ಲಿ ಸಂಗ್ರಹಿಸಿದ್ದೇನೆ. ಈ ಕಥೆಗಳು ಎಲ್ಲ ವಯೋಮಾನದ ಮಕ್ಕಳಿಗೂ ಇಷ್ಟವಾಗುವಂತವುಗಳು. ಆದರೆ ಅಲ್ಲಿನ ಕೆಲವು ಪದಗಳು ಇಂದು ಬಳಕೆಯಲ್ಲಿಲ್ಲ. ನಗರದ ಮಕ್ಕಳಿಗಂತೂ ಅವು ಅರ್ಥವಾಗುವುದಿಲ್ಲ. ಅದನ್ನು ತಿಳಿಸಿ, ಅಗತ್ಯಬಿದ್ದಲ್ಲಿ ಇಂಗ್ಲಿಷ್ ಪದಗಳನ್ನೇ ಬಳಸಿ ಮಕ್ಕಳಿಗೆ ಹೇಳಿದರೆ ಖಂಡಿತಾ ಎಂಜಾಯ್ ಮಾಡುತ್ತವೆ. ಜನಪದ ಮತ್ತು ಜಾನಪದ ಬೆಳೆದು ಬಂದಿದ್ದೇ ಹಾಗೆ.
- ಡಾ. ಬಿ.ಆರ್. ಸತ್ಯನಾರಾಯಣ
ಪುಟಗಳು: 102
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !