ಲೇಖಕರು:
ಮೂಲ: ವಿಮಲಾ ಫ಼ರೂಕಿ
ಕನ್ನಡಕ್ಕೆ: ಎ. ಜ್ಯೋತಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತೀಯ ಸಮಾಜದಲ್ಲಿ ಮಹಿಳೆಯು ಶತಶತಮಾನಗಳಿಂದಲೂ ತುಳಿತಕ್ಕೊಳಪಟ್ಟಿದ್ದಾಳೆ. ಮಹಿಳೆಯ ಆಸ್ತಿ ಹಕ್ಕನ್ನು ಕಿತ್ತುಕೊಂಡು ಅವಳ ಸ್ವಾವಲಂಬಿ ಬದುಕಿನ ಮೇಲೆ ದಾಳಿ ನಡೆಸಿದ್ದು ಜಗತ್ತಿನಾದ್ಯಂತ ನಡೆದ ಸರ್ವವ್ಯಾಪಿ ಪ್ರಕ್ರಿಯೆಯಾದರೆ ಹೆಣ್ಣಿನ ಮೇಲೆ ಹಲವು ಬಗೆಗಳ ಸಾಮಾಜಿಕ, ಸಾಂಸ್ಕೃತಿಕ ಸಾಂಪ್ರದಾಯಿಕ ನಿಷೇಧಗಳನ್ನು ಹೇರಿ ಮೌಢ್ಯಾಚರಣೆಗಳ ಮೂಲಕ ಅವಳ ಸ್ವಾತಂತ್ರ್ಯವನ್ನೂ ಸ್ವಾವಲಂಬನೆಯನ್ನೂ ಬದುಕಿನ ಹಕ್ಕುಗಳನ್ನೂ ಕಸಿದುಕೊಂಡಿದ್ದು ಭಾರತೀಯ ಸಮಾಜದ ವಿಶಿಷ್ಟ ಅನಿಷ್ಟ ಎಂದೇ ಹೇಳಬಹುದು.
ಇಂದಿಗೂ ಭಾರತೀಯ ಸಮಾಜವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವುದು ಶತಮಾನಗಳ ಹಿಂದೆ ರೂಪಿಸಲ್ಪಟ್ಟಿದ್ದ ಶಾಸನಗಳೇ ಎಂದರೆ ತಪ್ಪಾಗಲಾರದು. ಅವುಗಳೇ ಇಂದಿಗೂ ಕೂಡ ಬಹುಪಾಲು ಅಲಿಖಿತ ಕಾನೂನುಗಳಾಗಿ ನಡೆದುಕೊಂಡು ಬಂದಿವೆ. ಭಾರತೀಯ ಸಮಾಜದಲ್ಲಿ ವೈದಿಕ ಧರ್ಮವು (ಹಿಂದೂ ಧರ್ಮ ಎಂದು ಕರೆಯಲ್ಪಡುವ) ಪುರುಷಪ್ರಧಾನ ವ್ಯವಸ್ಥೆಯನ್ನು ನಿರ್ಮಿಸಿ ಅದನ್ನು ಪ್ರಬಲಗೊಳಿಸುವುದರಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂಬ ಸತ್ಯವನ್ನು ಕಡೆಗಣಿಸಲಾಗದು. ಮನುವಿನಂತಹ ವಿವಿಧ ಧರ್ಮಗ್ರಂಥಕಾರರು ತಮ್ಮ ಕಾನೂನುಗಳ ಮೂಲಕ ಹೆಣ್ಣನ್ನು ಬಂಧಿಸಿ ಇಂದು ಅವಳು ಎರಡನೇ ದರ್ಜೆ ಪ್ರಜೆಯಾಗಿ ಬದುಕುವಂತೆ ಮಾಡಿಹೋಗಿದ್ದಾರೆ. ಭಾರತದ ಸಂವಿಧಾನ ಮಹಿಳೆಯರಿಗೆ ಸಮಾನ ಸ್ಥಾನಮಾನ ಖಾತರಿಪಡಿಸಿದ್ದರೂ ಸಹ ಸಮಾಜ ಅದನ್ನು ಗೌರವಿಸದಿರುವುದಕ್ಕೆ ಜನರ ಮನಸ್ಸುಗಳಲ್ಲಿ ಛಾಪು ಮೂಡಿಸಿರುವ ಈ ಅಲಿಖಿತ ನಿಯಮಗಳೇ ಕಾರಣವೆಂದು ಹೇಳಬಹುದು.
ಮಹಿಳಾ ಚಳವಳಿಯ ಚರಿತ್ರೆ ಸುದೀರ್ಘವಾದುದು. ಭಾರತೀಯ ಮಹಿಳಾ ಚಳವಳಿಯು ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಚಳವಳಿಗಳೊಂದಿಗೆ ಬೆರೆತು ಬೆಳೆದುಬಂದಿರುವುದನ್ನು ಇಲ್ಲಿ ಲೇಖಕಿ ಗುರುತಿಸಿದ್ದಾರೆ. ಇಂತಹ ಮಹಿಳಾ ಚಳವಳಿಯ ಪರಿಣಾಮ ಇಂದು ದೇಶದ ಮಹಿಳೆಯರು ಸಾಕಷ್ಟು ಸೌಲಭ್ಯಗಳನ್ನು ಪಡೆದಿದ್ದಾರೆ, ಮಹಿಳಾಪರವಾದ ಕಾನೂನುಗಳು ರೂಪುಗೊಂಡಿವೆ. ರಾಷ್ಟ್ರದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುತ್ತಿರುವ ರಾಜಕೀಯ ಬೆಳವಣಿಗೆಗಳು ನಮ್ಮ ದೇಶದ ಮಹಿಳೆಯರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿ ಅವರ ಘನತೆಯ ಬದುಕಿನ ಹಕ್ಕಿಗೆ ಘಾಸಿ ಮಾಡುತ್ತಿದೆ. ದೇಶದ ಮಹಿಳಾ ಚಳವಳಿ ದಿಟ್ಟ ಹೆಜ್ಜೆಗಳನ್ನಿಟ್ಟು ಇನ್ನೂ ಸಾಕಷ್ಟು ದೂರ ಪಯಣಿಸಬೇಕಿದೆ.
ಇಂತಹ ಸಂದರ್ಭದಲ್ಲಿ ಶ್ರೀಮತಿ ವಿಮಲಾ ಫ಼ರೂಕಿಯವರು ಆಂಗ್ಲಭಾಷೆಯಲ್ಲಿ ರಚಿಸಿರುವ ‘ಭಾರತೀಯ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ’ ಕೃತಿಯ ಓದು ಅತ್ಯಂತ ಪ್ರಸ್ತುತ ಮತ್ತು ಅಗತ್ಯ ಎಂದು ಕಂಡುಬಂದು ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ.
- ಎ. ಜ್ಯೋತಿ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !