ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮರೆಯಲಾಗದ ಮಾಲತಿ ; ಡಾ. ನಾ. ಡಿಸೋಜ
ಸಾಗರದ ಜೈಹಿಂದ್ ಬೇಕರಿಯ ಶೇಷಗಿರಿಯಪ್ಪನವರ ಮಗಳು ಮಾಲತಿಯನ್ನು ನಾನು ಮೊದಲು ನೋಡಿದ್ದು ಯಾವಾಗ ಎಂಬುದು ನನ್ನ ನೆನಪಿನಲ್ಲಿ ಇಲ್ಲ. ಇದಕ್ಕೆ ಕಾರಣ ಮಾಲತಿ ಸಾಗರದವರು, ನಾನೂ ಸಾಗರದವನೇ. ಆದರೆ ಅದು ಗುರುತು ಪರಿಚಯ ಹಿಡಿದು ಮಾತಾಡಿಸುವ ವಯಸ್ಸಾಗಿರಲಿಲ್ಲ. ನಮಗೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಈ ಜೈಹಿಂದ್ ಬೇಕರಿ ಇತ್ತು. ಇದಕ್ಕೆ ಈ ಹೆಸರನ್ನು ಇಡಲು ಕೂಡ ತಕರಾರು ನಡೆದಿತ್ತಂತೆ. ಊರು ಸಣ್ಣದಾಗಿದ್ದರಿಂದ ಇದು ದೊಡ್ಡ ಸುದ್ದಿ ಆಗದೇ ಹೋಗಿರಬಹುದು. ಹೀಗೆಯೇ ಮಾಲತಿ ಕೂಡ ಸಾಗರದ ಸಾವಿರ ಜನರಲ್ಲಿ ಒಬ್ಬರಾಗಿ ನಾವು ವಿಶೇಷವಾಗಿ ಗಮನಿಸದೇ ಹೋಗಿರಬಹುದು. ಆದರೂ ಅವರು ಕಾಲೇಜಿನಲ್ಲಿ ಓದುವಾಗ ನೋಡಿದ ನೆನಪು. ನಾನಾಗ ಕಾರ್ಗಲ್ಲಿನಲ್ಲಿ ಇದ್ದುದರಿಂದ ಸಾಗರದ ಭೇಟಿ ವಾರಕ್ಕೊಮ್ಮೆ ಅನ್ನುವ ಹಾಗಿತ್ತು.
ಆದರೆ ಮಾಲತಿ ನಿಜಕ್ಕೂ ನನ್ನ ಗಮನಕ್ಕೆ ಬಂದದ್ದು ಶ್ರೀ ಪ್ರಸನ್ನ ಅವರನ್ನ ಮದುವೆ ಆಗಿದ್ದಾರೆ ಅಂದಾಗ. ಜಾತಿ ಬೇರೆ, ಮನೆ ಮಾತು ಬೇರೆ. ಇಂತಹಾ ಮದುವೆಗಳು ನಡೆಯಬೇಕು ಅನ್ನುವಾಗ ಈ ಕಾರಣದಿಂದಲೇ ನನ್ನಂತಹವನಿಗೆ ಸಂತಸ ಆಗಿದ್ದು ನಿಜ. ಆದರೆ ಹೊಂದಾಣಿಕೆಯ ಪ್ರಶ್ನೆಯೋ, ಇಲ್ಲ ಅಪಾರ್ಥದ ಪ್ರಶ್ನೆಯೋ, ಈ ಮದುವೆ ವಿಚ್ಛೇದನದಲ್ಲಿ ತನ್ನ ಅಂತ್ಯ ಕಂಡಿತು ಎಂದಾಗ ಮನಸ್ಸಿಗೆ ಕಸಿವಿಸಿ ಆಗಿದ್ದು ನಿಜ. ಈ ನಡುವೆ ಮಾಲತಿ ಸಾಗರದಲ್ಲಿ ಇರಲಿಲ್ಲ. ಅವರು ಬೆಂಗಳೂರು, ದೆಹಲಿ ಎಂದು ತಿರುಗಾಡಿಕೊಂಡು ಇದ್ದರು.
ಒಂದು ದಿನ ಹೆಗ್ಗೋಡಿಗೆ ಹೋಗುವ ಬಸ್ಸನ್ನು ಏರಲೆಂದು ನಾನು ಸಾಗರದ ಬಸ್ನಿಲ್ದಾಣಕ್ಕೆ ಬಂದಾಗ ಯಾರೋ ನನಗೆ ಮಾಲತಿಯ ಪರಿಚಯ ಮಾಡಿಕೊಟ್ಟರು. ಆಕೆ ಬದಲಾಗಿದ್ದರು. ಪ್ರೌಢರಾಗಿದ್ದರು. ಅತ್ಯಾಧುನಿಕ ಅನ್ನುವ ಉಡುಪು ಧರಿಸಿದ್ದ ಮಾಲತಿ ಆಕರ್ಷಕವಾಗಿ ಕಂಡರು. ಅವರ ಜೊತೆ ನಾನು ಮಾತನಾಡಿಕೊಂಡು ಹೆಗ್ಗೋಡಿನವರೆಗೂ ಹೋದ ನೆನಪು. ನಂತರ ಮಾಲತಿ ನನಗೆ ಹತ್ತಿರದವರಾದರು.
ಪುಟಗಳು: 240
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !