ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಮಾತುಗಳನ್ನು ಕೇಳಿಸಿಕೊಳ್ಳುತ್ತೇವೆ. ಆದರೆ, ಕೆ.ವಿ.ಅಕ್ಷರ ಅವರ ಮಾತುಗಳನ್ನು ಕೇಳಿಸಿಕೊಂಡರಷ್ಟೇ ಸಾಲದು, ನೋಡಲೂಬೇಕು. ಒಂದು ಲಯದಲ್ಲಿ ಕವಳ ನುಜ್ಜುಗುಜ್ಜಾಗಿಸುತ್ತ, ಬಿಡುವಿನಲ್ಲಿ ಧ್ಯಾನಭಂಗಗೊಂಡವರಂತೆ ಮಾತನಾಡುವ ಅವರನ್ನು ನೋಡುವುದೇ ಒಂದು ಹಿತ. ಕವಳ ಎನ್ನುವುದು ಶಕ್ತಿಯುತ ಸವಿತಿನಿಸಾಗಿರುವುದರ ಜೊತೆಗೆ ರಸಿಕ ಪರಂಪರೆಯ ಕುರುಹೂ ಹೌದು. ಅಕ್ಷರರ ‘ಅಂತಃಪಠ್ಯ’ದ ಬರಹಗಳು ನನಗೆ ‘ಕವಳ ಮೀಮಾಂಸೆ’ಯಂತೆಯೇ ತೋರುತ್ತವೆ.
ಇಲ್ಲಿನ ಶಕ್ತಿ ಮತ್ತು ರಸಿಕತೆ ಕನ್ನಡದ ಸಾಂಸ್ಕ ತಿಕ ಶ್ರೀಮಂತಿಕೆಗೆ ಸಂಬಂಧಿಸಿದ್ದು. ಓದು, ಮಾತು, ಮಾಧ್ಯಮ, ಸಂಚಾರ -- ಹೀಗೆ, ತಮ್ಮ ನಿಲುಕಿಗೆ ಎಟಕುವ ಎಲ್ಲ ಕಡೆಗಳಿಂದಲೂ ಹೆಕ್ಕಿದ ಅನೇಕ ಪಠ್ಯ ಒಳಪಠ್ಯಗಳನ್ನು ತಳುಕು ಹಾಕುವ ಮೂಲಕ ಹೊಸ ಪಠ್ಯವೊಂದನ್ನು ಸೃಷ್ಟಿಸುವ ಅಕ್ಷರ, ‘ಅಂತಃಪಠ್ಯ’ದ ಮೂಲಕ ಕನ್ನಡದ ಗದ್ಯಕ್ಕೆ ಹೊಸ ಚೆಲುವು ಕಸುವನ್ನು ಕೂಡಿಸಿದ್ದಾರೆ. ಸಿಕ್ಕುಗಳಿಲ್ಲದ ಈ ಗದ್ಯದ ಚೆಲುವು ಪ್ರಖರವಾಗಿದ್ದರೂ, ಅದು ನಿರಾಭರಣ ಸುಂದರಿಯಂತೆ ಸಹಜವೂ ಹೌದು. ಕವಳದ ಕಾರಣದಿಂದಾಗಿ ಅವರಿಗೆ ಜೋರು ಮಾತು ಕಷ್ಟ. ಆದರವರ ಮೆಲುದನಿಯ ಮಾತುಗಳಲ್ಲೂ ಒಂದು ಎಚ್ಚರದ ಕಾವು ಗಮನಿಸಬಹುದು. ಸಹೃದಯ ಅಹುದಹುದೆನ್ನುವಂತೆ ತಮ್ಮ ವಿಚಾರಗಳನ್ನು ದಾಟಿಸುವ ಅಸಲಿ ಕಸುಬಿನ ಬರಹ ಅಕ್ಷರ ಅವರದ್ದು. ಆದರೆ, ಅವರ ಬರಹಗಳು ಓದುಗನನ್ನು ತಮ್ಮಲ್ಲಿ ಲೀನವಾಗಿಸಿಕೊಳ್ಳದೆ, ಒಂದು ಅಂತರದಲ್ಲಿಯೇ ಉಳಿಸಿಕೊಂಡು ಹೃದಯ ಸಂವಾದಕ್ಕೆ ಒತ್ತಾಯಿಸುತ್ತವೆ. ಅದು ‘ಅಂತಃಪಠ್ಯ’ದ ಶಕ್ತಿ.
ಹೆಗ್ಗೋಡಿನಿಂದ ಅಮೆರಿಕಾದವರೆಗೆ ವಿಸ್ತಾರ ಹೊಂದಿರುವ ‘ಅಂತಃಪಠ್ಯ’ದ ಬರಹಗಳ ಇನ್ನೊಂದು ವಿಶೇಷ ಶೈಲಿಯ ಕುರಿತಾದದ್ದು. ಕಥನ, ಪ್ರಬಂಧ, ವಿಚಾರ ಬರಹ -- ಎಲ್ಲವೂ ಹೌದಾದ, ಯಾವುದಕ್ಕೂ ಕಟ್ಟುಬೀಳದ ಈ ಬರಹಗಳು ಸೃಷ್ಟಿಶೀಲ ಬರಹಗಾರನೊಬ್ಬನ ಅತೃಪ್ತಿಯ ಅಕ್ಷಯಪಾತ್ರೆಯಲ್ಲಿನ ಅಪೂರ್ವ ಫಲಗಳಾಗಿವೆ. ಕನ್ನಡಕ್ಕೆ ವಿಶಿಷ್ಟವಾದ ಗದ್ಯಗುಚ್ಛವಿದು.
-ರಘುನಾಥ ಚ.ಹ.
ಪುಟಗಳು: 272
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !