ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮಕ್ಕಳು ಸುಮ್ಮನೆ ಕೂರಲಾರರು. ಕೂರಲೂಬಾರದು. ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರಲು ಅವರ ಮನಸ್ಸು ತುಡಿಯುತ್ತಿರುತ್ತದೆ. ಈಗೊಂದು ಚಟುವಟಿಕೆಯಲ್ಲಿ ತೊಡಗಿದ್ದರೆ ಇನ್ನೊಂದು ಕ್ಷಣದಲ್ಲಿ ಮತ್ತೊಂದು ಚಟುವಟಿಕೆಯಲ್ಲಿ ತೊಡಗಲು ಹಾತೊರೆಯುತ್ತಿರುತ್ತದೆ. ನಾವು ಯಾವುದೇ ಚಟುವಟಿಕೆ / ಆಟದಲ್ಲಿ ಅವರನ್ನು ತೊಡಗಿಸದಿದ್ದರೆ ಅತ್ತ ಇತ್ತ ನೋಡಿ ಟಿವಿ ಮುಂದೆ ಕೂರುತ್ತಾರೆ ಅಥವಾ ಮೊಬೈಲ್ ಗೇಮ್ಗಳಲ್ಲಿ ಕಳೆದುಹೋಗುತ್ತಾರೆ. ಇದು ಎಲ್ಲ ಪೋಷಕರನ್ನು ಕಾಡುವ ಅತಿ ದೊಡ್ಡ ಸಮಸ್ಯೆ. ಮಗು ಅತಿಯಾಗಿ ಟಿವಿ ನೋಡುತ್ತದೆ, ಇಲ್ಲ ಮೊಬೈಲ್ಗೆ ಅಂಟಿಕೊಂಡಿರುತ್ತದೆ. ಅದನ್ನು ತಪ್ಪಿಸುವುದು ಹೇಗೆ? ನಾನು ನಡೆಸಿರುವ ಅನೇಕ ಪೋಷಕರ ಸಭೆಯಲ್ಲಿ ಮಕ್ಕಳ ಬಗ್ಗೆ ಕೇಳಿಬಂದ ದೂರುಗಳಲ್ಲಿ ಇದೇ ಅತಿ ಪ್ರಮುಖವಾದದ್ದು. ಈ ನಡುವೆ ‘ಪರೀಕ್ಷೆ ಹತ್ತಿರ ಬಂದಿದೆ, ಹೆಚ್ಚು ಟಿವಿ ನೋಡಬೇಡ, ಓದಿಕೋ’ ಎಂದು ತಾಯಿ ಗದರಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೆಣ್ಣು ಮಗಳ ಸುದ್ದಿಯು ನಮ್ಮೆದುರಿಗಿದೆ.
ಮಕ್ಕಳು ಅತಿಯಾಗಿ ಟಿವಿ ನೋಡುವುದನ್ನು / ಮೊಬೈಲ್ ಉಪಯೋಗಿಸುವುದನ್ನು ತಪ್ಪಿಸುವುದು ಹೇಗೆ? ಅನುಭವದಿಂದ ನಾನು ಕಂಡುಕೊಂಡಿರುವ ದಾರಿ ಇದು: ಮಕ್ಕಳಿಗೆ ಟಿವಿ / ಮೊಬೈಲ್ಗೆ ಬದಲಿಯನ್ನು ತೋರಿಸಬೇಕು; ನಾವು ಅದಕ್ಕೊಂದು ಪರ್ಯಾಯ ಚಟುವಟಿಕೆಯನ್ನು ಸೂಚಿಸಬೇಕು. ಪೋಷಕರು ತಮ್ಮ ಅಜ್ಞಾನದಿಂದಲೋ ಸೋಮಾರಿತನ ದಿಂದಲೋ ಬೇಜವಾಬ್ದಾರಿತನದಿಂದಲೋ ಪ್ರಾರಂಭದಿಂದಲೇ ಮಗುವನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡದೆ ಅದು ಟಿವಿ / ಮೊಬೈಲ್ ವ್ಯಸನಿ (TV/ Mobile addict)ಯಾದ ಮೇಲೆ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಆಗ ಅವರಿಗೆ ಸುಲಭವಾಗಿ ಹೊಳೆಯುವ ‘ಉಪಾಯ’ವೆಂದರೆ ‘ಟಿವಿ ನೋಡಬೇಡ, ಮೊಬೈಲ್ ಮುಟ್ಟಬೇಡ. ಓದ್ಕೋ... ಟಿವಿ / ಮೊಬೈಲ್ನಿಂದ ಕಣ್ಣಿಗೆ ಅಪಾಯ, ದಡ್ಡ ಆಗ್ತೀಯ...’ ಮುಂತಾಗಿ ಉಪದೇಶ ಮಾಡುವುದು. ಇದರಿಂದೇನೂ ಪ್ರಯೋಜನ ವಾಗುವುದಿಲ್ಲ. ಇನ್ನೂ ಹಠ ಹಿಡಿಯುತ್ತವೆ. ಇಲ್ಲಿ ಮಾತುಗಳು ಕೆಲಸ ಮಾಡುವುದಿಲ್ಲ.
ಹಾಗಾದರೆ ನಾವು ಮಕ್ಕಳನ್ನು ಹೇಗೆ ಬೆಳೆಸಬೇಕು? ಅದಕ್ಕೆ ಪೋಷಕರೇನು ಮಾಡಬೇಕು? ಮಕ್ಕಳೊಂದಿಗೆ ಕಳೆಯುವ ಅಷ್ಟೂ ಕಾಲದಲ್ಲಿ, ಅವರೊಂದಿಗೆ ಆಟವಾಡುವ, ಮುದ್ದಿಸುವ ಅಷ್ಟೂ ಹೊತ್ತು ಅವರನ್ನು ಶ್ರೇಷ್ಠ ಶಿಕ್ಷಣಕ್ಕೆ ಸಜ್ಜುಗೊಳಿಸುವ ರೀತಿಯಲ್ಲೆ ಪೋಷಕರು ನಡೆದು ಕೊಳ್ಳಬೇಕು. ಅಂದರೆ, ಪೋಷಕರು ಮಕ್ಕಳೊಂದಿಗೆ ಕಳೆಯುವ ಅಷ್ಟೂ ಕಾಲವು ಗುಣಾತ್ಮಕ ವಾಗಿರಬೇಕು. ಗುಣಾತ್ಮಕವಾಗಿ ಕಳೆಯುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಅದಕ್ಕೆ ಪ್ರತ್ಯೇಕ ಸಮಯವೇನೂ ಬೇಕಾಗುವುದಿಲ್ಲ; ಹೆಚ್ಚು ಶ್ರಮಪಡಬೇಕಿಲ್ಲ; ತರಬೇತಿ ಬೇಕಿಲ್ಲ. ಒಂದಿಷ್ಟು ತಿಳಿವಳಿಕೆ ಮತ್ತು ಒಂದಿಷ್ಟು ಪ್ರಯತ್ನ ಇದ್ದರೆ ಸಾಕು. ಇದನ್ನೆಲ್ಲ ಮಾಡಲು ಬಹು ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ, ಅಗಾಧ ತಾಳ್ಮೆ ಮಾತ್ರ. ಈ ದಿಸೆಯಲ್ಲಿ ನಾನು ಹೇಗೆ ಆ ಸಮಯವನ್ನು ಉಪಯೋಗಿಸಿಕೊಂಡೆ ಎಂಬ ಅನುಭವವನ್ನಿಲ್ಲಿ ಹಂಚಿಕೊಂಡಿದ್ದೇನೆ.
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !