ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ನೃತ್ಯಕಲೆಗೆ ಮೀಸಲಾದ ಗ್ರಂಥಗಳಲ್ಲಿ ಅಭಿನಯದರ್ಪಣವು ಪ್ರಮುಖವಾದುದು; ತುಂಬ ಜನಪ್ರಿಯವಾದುದೂ ಹೌದು. ಈ ಕೃತಿಯು ಭರತನ ನಾಟ್ಯಶಾಸ್ತ್ರವೂ ಸೇರಿದಂತೆ ಅದುವರೆಗೆ ಬಂದಿರುವ ನಾಟ್ಯಮೀಮಾಂಸೆಯ ಗ್ರಂಥಗಳ ಸಾರವನ್ನು ಒಳಗೊಳ್ಳುತ್ತದೆ; ಜತೆಗೆ, ನಾಟ್ಯಶಾಸ್ತ್ರ ಇತ್ಯಾದಿಯಾಗಿ ಯಾವ ಗ್ರಂಥಗಳಲ್ಲಿಯೂ ದೊರೆಯದ ಅನೇಕ ಸಂಗತಿಗಳನ್ನು ಪ್ರಸ್ತಾಪಿಸುತ್ತದೆ.
ಅಭಿನಯದರ್ಪಣದ ಪ್ರಧಾನವಾದ ಲಕ್ಷ್ಯವು ಹಸ್ತಾಭಿನಯದ ಕಡೆಗೆ. ನಾಟ್ಯಶಾಸ್ತ್ರಕಾರರ ಪ್ರಕಾರ ಜಗತ್ತಿನಲ್ಲಿರುವ ಎಲ್ಲ ಭಾವಗಳನ್ನೂ ವಸ್ತುಗಳನ್ನೂ ಹಸ್ತದ ಮೂಲಕ ಸೂಚಿಸಲು ಸಾಧ್ಯ. ಅದು ಸ್ಪಷ್ಟವಾದ ಆಕಾರವನ್ನು ಹೊಂದಿದ ಮೂರ್ತವಸ್ತುವೇ ಆಗಲಿ, ಅಂಥ ಆಕಾರವಿಲ್ಲದ ಅಮೂರ್ತವಸ್ತುವೇ ಆಗಲಿ, ಜಡವೇ ಆಗಲಿ, ಚೇತನವೇ ಆಗಲಿ ಹಸ್ತದ ಮೂಲಕ ಸೂಚಿಸಲು ಸಾಧ್ಯವೆಂಬ ನಿಲುಮೆ ಇವರದು. ಅದಕ್ಕಾಗಿ ಅಲ್ಲಿ ಹಸ್ತಾಭಿನಯವನ್ನು ವಿಪುಲವಾಗಿ ಬೆಳೆಸಲಾಗಿದೆ; ಭಾಷೆಯು ಮಾಡುವ ಕೆಲಸವನ್ನೆಲ್ಲ ಹಸ್ತಾಭಿನಯವೂ ಮಾಡಬಲ್ಲುದೆಂದು ಆ ಅಭಿನಯಕ್ರಮ ನಂಬುತ್ತದೆ. ಇಂಥ ಹಸ್ತಮುದ್ರೆಗಳನ್ನು ಕುರಿತಂತೆ ಮತ್ತು ಚಾರೀ, ಮಂಡಲ ಮೊದಲಾದ ಅಭಿನಯ ತಂತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ನಾಟ್ಯ-ನೃತ್ಯ ಪರಂಪರೆಯಲ್ಲಿ ಬಂದಿರುವ ಪ್ರಮುಖ ಆಕರ ಗ್ರಂಥ - ಅಭಿನಯದರ್ಪಣ. ಭಾರತದ ಹಲವು ಸಾಂಪ್ರದಾಯಿಕ ನಾಟ್ಯ ಮತ್ತು ನೃತ್ಯ ಪ್ರಕಾರಗಳಲ್ಲಿ ಇವತ್ತಿಗೂ ಪಠ್ಯಪುಸ್ತಕವೆಂಬಂತೆ ಬಳಕೆಯಾಗುವ ಗ್ರಂಥ ಇದು.
ಈ ಪ್ರಮುಖ ಆಕರ-ಪಠ್ಯವನ್ನು ಇಲ್ಲಿ ಮೂಲ ಶ್ಲೋಕಗಳ ಸಮೇತ ಹೊಸ ಕನ್ನಡ ಅನುವಾದದಲ್ಲಿ ಪ್ರಸ್ತುತಪಡಿಸಲಾಗಿದೆ; ವಿವರವಾದ ಪ್ರಸ್ತಾವನೆ, ಟಿಪ್ಪಣಿ, ಅನುಬಂಧಗಳ ಸಮೇತ ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಉಪಯುಕ್ತವಾಗುವಂತೆ ನಿರೂಪಿಸಲಾಗಿದೆ.
ABOUT THE AUTHOR
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಜೋಗಿನ್ಮನೆಯವರು. ಸಂಸ್ಕೃತದಲ್ಲಿ ಎಂ.ಎ. ಪದವೀಧರರು. ಸಿದ್ಧಾಪುರದ ಮಹಾತ್ಮಾಗಾಂಧೀ ಶತಾಬ್ದಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ಪ್ರಾಂಶುಪಾಲರಾಗಿ ಸೇವೆ. ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತ, ವೇಷಧಾರಿ. ತತ್ವಶಾಸ್ತ್ರ, ಅಲಂಕಾರಶಾಸ್ತ್ರ, ಮೊದಲಾದ ಶಾಸ್ತ್ರೀಯ ವಿಷಯಗಳಲ್ಲಿ ಇವರ ಕೆಲವು ಗ್ರಂಥಗಳೂ, ಹಲವು ಲೇಖನಗಳೂ ಪ್ರಕಟವಾಗಿವೆ. ‘ಭಾರತೀಯ ತತ್ತ್ವಶಾಸ್ತ್ರ ಪ್ರವೇಶ’, ‘ಶಬ್ದ ಮತ್ತು ಜಗತ್ತು’, ‘ಬಾಲರಾಮಾಯಣ’ - ಮೊದಲಾದವು ಇವರ ಪ್ರಕಟಿತ ಪುಸ್ತಕಗಳು. ಹದಿನೈದು ಯಕ್ಷಗಾನ ಪ್ರಸಂಗಗಳನ್ನು ಇವರು ಬರೆದಿದ್ದಾರೆ.
ಪುಟಗಳು: 255
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !