ವಿನಯ್ ಸೃಷ್ಟಿಸಿರುವ ಪಾತ್ರಗಳೆಲ್ಲ ತೇಜಸ್ವಿಯವರ ಕಾಲಕ್ಕಿಂತ ಹಿಂದಿನವು ಮತ್ತು ಮುಂದಿನವು, ತೇಜಸ್ವಿಯವರು ಸುಮಾರು 60-80ರ ದಶಕದ ಪಾತ್ರಗಳನ್ನು ತಮ್ಮ ಕಾದಂಬರಿಗಳಲ್ಲಿ ತಂದರು. ಇಲ್ಲಿನ ಹಲವು ಪಾತ್ರಗಳು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸೇರಿದಂಥವು. ಹೀಗಾಗಿ ತೇಜಸ್ವಿ ಪಾತ್ರಗಳ ಜತೆ ಹೋಲಿಕೆ ಮಾಡುವ ಅಪಾಯದಿಂದ ಆ ಪಾತ್ರಗಳನ್ನು ವಿನಯ್ ಪಾರು ಮಾಡಿದ್ದಾರೆ.
ವಿನಯ್ ಕತೆಗಳಲ್ಲೂ ಅತಿಭಾವುಕತೆಯ ಲವಲೇಶವೂ ಇಲ್ಲ. ಅವರು ಮೂಲತಃ ವರದಿಗಾರ ಆಗಿರುವುದರಿಂದ ಒಂದು ಮಟ್ಟಗಿನ ವಸ್ತುನಿಷ್ಠತೆ ಅವರಿಗೆ ದಕ್ಕಿದೆ. ಆದರೆ ಎಷ್ಟೋ ಸಲ ವರದಿಗಾರನ ವಸ್ತುನಿಷ್ಠತೆಯೇ ಕಲೆಗೆ ಶತ್ರುವಾಗಿ ಪರಿಣಮಿಸುವುದನ್ನೂ ನಾವು ನೋಡಿದ್ದೇವೆ. ವಸ್ತುನಿಷ್ಟತೆ ಮತ್ತು ಕಲ್ಪನೆ ಇವುಗಳ ನಡುವಿನ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಅದನ್ನು ವಿನಯ್ ಬಹಳ ಸಹಜವಾಗಿಯೇ ಸಾಧಿಸಿದ್ದಾರೆ.
ಮಲೆನಾಡಿನ ಕತೆಗಳ ಪರಂಪರೆಗೆ ಈ ಹೊಸ ಸೇರ್ಪಡೆ, ಮಲೆನಾಡಿನ ಕುರಿತ ನಮ್ಮ ನೋಟವನ್ನು ಬದಲಾಯಿಸುವಷ್ಟು ಶಕ್ತವಾಗಿವೆ ಎಂದು ಹೇಳುತ್ತಾ, ಈ ಕತೆಗಳಿಗಾಗಿ ವಿನಯ್ ಅವರನ್ನು ಅಭಿನಂದಿಸುತ್ತೇನೆ.
- ಜೋಗಿ
ಮುನ್ನುಡಿಯಿಂದ