Click here to Download MyLang App

ಹಸಿರು ಹಾದಿ,  ಸತೀಶ್ ಚಪ್ಪರಿಕೆ,  ಯಲ್ಲಪ್ಪ ರೆಡ್ಡಿ,   Yellappa Reddy environmentalist,  yellappa reddy,  yallappa Reddy,  Sathish Chapparike,  hasuru,  Hasiru haadi,  hasiru,  hasaru,

ಹಸಿರು ಹಾದಿ (ಇಬುಕ್)

e-book

ಪಬ್ಲಿಶರ್
ಸತೀಶ್ ಚಪ್ಪರಿಕೆ
ಮಾಮೂಲು ಬೆಲೆ
Rs. 59.00
ಸೇಲ್ ಬೆಲೆ
Rs. 59.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

’ಮತ್ತೊಂದು ಮೌನ ಕಣಿವೆ’ ಮತ್ತು ’ಹಸಿರು ಹಾದಿ’ ಎರಡೂ ಪರಿಸರ ಮತ್ತು ಪರಿಸರ ಜೀವಿಗಳಿಗೆ ಸಂಬಂಧಿಸಿದ್ದು. ಮೊದಲ ಕೃತಿಯಲ್ಲಿ ಪರಿಸರ- ಪಶ್ಚಿಮ ಘಟ್ಟದ ಕುರಿತಾದ ಲೇಖನಗಳಿವೆ. ಎರಡನೇ ಕೃತಿ ಆ.ನ.ಯಲ್ಲಪ್ಪ ರೆಡ್ಡಿ ಅವರ ಜೀವನಗಾಥೆ ಆದರೂ ಇಲ್ಲಿ ಕೂಡ ಪರಿಸರ ರಕ್ಷಣೆಯೇ ಮುಖ್ಯ ದ್ಯೇಯವಾಗಿರುವ ಒಬ್ಬ ಅಪರೂಪದ ಪ್ರಾಮಾಣಿಕ ಅರಣ್ಯ ಸಂರಕ್ಷಣಾಧಿಕಾರಿಯ ಕಥೆ. ತೊಂಬತ್ತರ ದಶಕದ ಪರಿಸರ ರಾಜಕೀಯದ ಚಿತ್ರ ನೀಡುವ ಕೃತಿಗಳಿವು.

- ಸತೀಶ್ ಚಪ್ಪರಿಕೆ 

 

ಆಡಳಿತದಲ್ಲಿ ದಕ್ಷತೆಯ ಪಾತ್ರವೊಂದಿದೆಯೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪಿಯಾರು. ಆದರೆ ದಕ್ಷತೆಯ ಜೊತೆಗೆ ಪ್ರಾಮಾಣಿಕತೆಯ ಪಾತ್ರವೂ ಅಷ್ಟೇ ಅಗತ್ಯವೆಂಬುದು ಹಲವರ ಅರಿವಿನಲ್ಲಿರದು. ಎಷ್ಟೋ ವೇಳೆ, ಅಧಿಕಾರಿಗೆ ದಕ್ಷತೆಯಿಲ್ಲದಿದ್ದರೂ ನಡೆಯುತ್ತದೆ; ಕಾನೂನಿನ ಬಿಗಿ, ಕಾರಕೂನರ ಒಪ್ಪ ಓರಣ, ಕೈಕೆಳಗಿನವರ ಶಿಸ್ತು ಇವು ಆ ಕೊರತೆಯನ್ನು ನೀಗಿಸುವುದುಂಟು. ದಕ್ಷತೆಯಿದ್ದೂ ಪ್ರಾಮಾಣಿಕತೆ ಇಲ್ಲದಿದ್ದರೆ ಇದರಿಂದ ಜನರಿಗೆ ತುಂಬಾ ಹಾನಿ; ಆಗಬೇಕಾದ ಕೆಲಸಕ್ಕೆ ಅಡ್ಡಿ; ಆಡಳಿತವನ್ನು ಕುರಿತಂತೆ ಅವಿಶ್ವಾಸ, ಪ್ರಾಮಾಣಿಕತೆಯಿದ್ದಾಗಲೇ ದಕ್ಷತೆಗೆ ಬೆಲೆ. ಈ ಪುಸ್ತಕವನ್ನು ರಚಿಸಿರುವ ನನ್ನ ಸನ್ಮಾನ್ಯ ಮಿತ್ರರು, ಶ್ರೀ ಯಲ್ಲಪ್ಪ ರೆಡ್ಡಿ ಅವರು, ಅರಣ್ಯ ಇಲಾಖೆಯ ಮೇಲಧಿಕಾರಿಗಳಾಗಿ ಇರುವಷ್ಟು ದಿನವೂ ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದವರು, ದಕ್ಷತೆ ಪ್ರಾಮಾಣಿಕತೆಯಿಂದ ಮುಪ್ಪುರಿಗೊಂಡಿದ್ದಿತು; ಹಾಗೆಂದೇ ಅವರ ಕೈಕೆಳಗೆ ಕೆಲಸ ಮಾಡಿದವರೆಲ್ಲ ಅವರನ್ನು ಗೌರವದಿಂದ ಕಂಡು, ಮೇಲಧಿಕಾರಿಗಳು ಕೂಡ ಅವರಿಗೆ ಅಂಜಿಕೊಳ್ಳುವಂತಾಗಿದ್ದಿತು. ಅವರು ಅಧಿಕಾರಿಗಳಾಗಿ ನಾಡಿಗೆ, ನಾಡಿನವರಿಗೆ ಸಲ್ಲಿಸಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ.

ಈ ಸೇವೆಯ ಅವಧಿಯಲ್ಲಾದರೋ ಅವರು ಪಟ್ಟ ಕಷ್ಟ, ತಾಳಿಕೊಂಡ ಕೋಟಲೆಗಳು, ಅನುಭವಿಸಿದ ಉಪದ್ರಗಳು ಇವನ್ನು ಅವರು ಮರೆಯುವಂತಿಲ್ಲ. ಇವುಗಳ ಸ್ಪಷ್ಟ ಚಿತ್ರಣವನ್ನು ಈ ಪುಸ್ತಕದಲ್ಲಿ ಅವರು ಒದಗಿಸಿಕೊಟ್ಟಿದ್ದಾರೆ. ಪ್ರಜಾಸತ್ತೆಯ ಆಡಳಿತದಲ್ಲಿ ಅಧಿಕಾರಿಗಳ ದಕ್ಷತೆಗೆ ಮಿತಿಯಿರುತ್ತದೆ; ಪ್ರಾಮಾಣಿಕತೆಗಂತೂ ಅವಕಾಶವೇ ಕಡಿಮೆ. ಲಾಭಕೋರರು, ಹಿಂಸಕರು, ಅಹಮಿಕೆಯುಳ್ಳವರು, ಲೋಭಿಗಳು, ಲಂಚಪರರು, ಭಂಡರು ಇಂಥವರು ಆಡಳಿತದೊಂದಿಗೆ ತೆಕ್ಕೆ ಹಾಕಿಕೊಂಡರೆ ದಕ್ಷ ಅಧಿಕಾರಿಗಳಿಗೆ ಕಿರುಕುಳ ತಪ್ಪಿದ್ದಲ್ಲ, ಪ್ರಾಮಾಣಿಕರಿಗಂತೂ ಉಳಿಗಾಲವೇ ಇರದು. ಸ್ವಾಭಿಮಾನವುಳ್ಳವರು, ಸೇವಾ ಮನೋಭಾವವುಳ್ಳವರು, ಧರ್ಮಭೀರುಗಳು, ಸತ್ಯನಿಷ್ಕರು ಅಧಿಕಾರಿಗಳಾಗಿರುವ ಅವರು ಉಸಿರಾಡುವುದು ಆಯಾಸವೆನಿಸುತ್ತದೆ. ಇದರ ಓರೆನೋಟವನ್ನೂ ಈ ಪುಸ್ತಕದಲ್ಲಿ ಕಾಣಬಹುದು.

ದಕ್ಷತೆ ಕೆಲವರಿಗೆ ಹುಟ್ಟಿನಿಂದಲೇ ಬರುತ್ತದೆ; ಸ್ವಭಾವದಿಂದಲೇ ಸಿದ್ಧವಾಗಿರುತ್ತದೆ. ಮತ್ತೆ ಕೆಲವರು ಕಲಿಯುತ್ತಾರೆ, ಅಭ್ಯಾಸದಿಂದ ಸಿದ್ಧಿಸಿಕೊಳ್ಳುತ್ತಾರೆ. ಆದರೆ ಪ್ರಾಮಾಣಿಕತೆಗೆ ಹೆಚ್ಚಿನ ಸಂಸ್ಕಾರದ ಅಗತ್ಯವಿದೆ. ಸ್ವಭಾವದ ಒತ್ತಾಸೆಯಿರಬೇಕು ದಿಟ, ಆದರೆ ಕರ್ತವ್ಯ ಶ್ರದ್ದೆ, ಸಂಯಮ ನಿಸ್ಪೃಹತೆ, ಸ್ಥೈರ್ಯ ಇದ್ದರೆ ಪ್ರಾಮಾಣಿಕತೆ ಅರ್ಥವತ್ತಾಗುತ್ತದೆ. ದಕ್ಷತೆಗೆ ಅಗತ್ಯವಾದ ಧೈರ್ಯ ಪ್ರಾಮಾಣಿಕತೆಗೂ ಬೇಕು. ಅಂಜುಕುಳಿಯಾಗಿದ್ದರೆ ದಕ್ಷತೆಯೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ. ಧೈರ್ಯದಲ್ಲಿ ಸಾತ್ವಿಕ (ಎಂದರೆ ತತ್ವ ನಿಷ್ಠೆಯಿಂದ ಮೈದಳೆದದ್ದು), ರಾಜಸಿಕ (ಹುಮ್ಮಸ್ಸಿನಿಂದ ಉತ್ಸಾಹದಿಂದ ಕಾಣಿಸಿಕೊಂಡದ್ದು) ಮತ್ತು ತಾಮಸಿಕ (ಭಂಡ ಧೈರ್ಯ, ವಿವೇಚನೆಯಿಲ್ಲದ್ದು) ಎಂದು ಮೂರು ಬಗೆಗಳು. ಯಲ್ಲಪ್ಪ ರೆಡ್ಡಿಯವರ ಬದುಕಿನುದ್ದಕ್ಕೂ ಸಾತ್ವಿಕ ಧೈರ್ಯ ಕೆಲಸ ಮಾಡುತ್ತ ಬಂದಿದೆ. ಕರ್ತವ್ಯ ಪ್ರಜ್ಞೆಗೆ ಅಡ್ಡಿಯಾಗಿ ಬರುವ ಯಾವುದಕ್ಕೂ ಮಣಿದಿರುವ ಧೈರ್ಯ ಅದು. ಅಧಿಕಾರವಿರುವುದು ಶಿಷ್ಟರಕ್ಷಣ, ದುಷ್ಟಶಿಕ್ಷಣಗಳಿಗಾಗಿ; ಅಮಾಯಕರನ್ನು ಶೋಷಿಸಲೆಂದಲ್ಲ. ಈ ಅರಿವು ಅವರ ಅಧಿಕಾರಾವಧಿಯಲ್ಲಿ ಬೇರೂರಿದ್ದಿತಾಗಿ ಅವರು ದಿಟ್ಟತನದಿಂದಲೇ ತಮ್ಮ ಅಧಿಕಾರವನ್ನು ನಿರ್ವಹಿಸುವಂತಾಯಿತು. ಇದು ಈ ಪುಸ್ತಕದಲ್ಲಿ ಹಾಸುಹೊಕ್ಕಾಗಿ ಬಂದಿರುವ ವಿವರ.

ಸರಕಾರದ ಒಂದು ಇಲಾಖೆಯಲ್ಲಿ ಬಂದೊದಗುವ ಸಮಸ್ಯೆಗಳು; ಅವನ್ನು ಇರುವ ದಾರಿಗಳು: ದಾರಿಗಳಲ್ಲಿ ನೇರವಾದುವು ಬಳಸಿನವು ವಕ್ರವಾದುವು; ರಾಜಕಾರಣಿಗಳು ಸ್ವಯಂಸ್ಫೂರ್ತಿಯಿಂದಲೋ ಬೇರೆಯವರ ಪ್ರೇರಣೆಯಿಂದಲೋ ವಹಿಸುವ ವೇಷಗಳು: ಇದರಿಂದಾಗುವ ಏರುಪೇರುಗಳು ಆಂಕುಡೊಂಕುಗಳು ಕಹಿ ಕಸರುಗಳು; ಪ್ರಾಮಾಣಿಕತೆಗೆ ಇರುವ ಆತಂಕಗಳು; ಗೆದ್ದ ಎತ್ತಿನ ಬಾಲ ಹಿಡಿಯುವ ಪ್ರವೃತ್ತಿಯುಳ್ಳವರ ಉದ್ದಿಮೆಗಳು; ಹಣದ ಆಸೆಗೆ ಇರುವ ಹತ್ತು ಮುಖಗಳು; ಜೋರು ಜಬರದಸ್ತಿಗಳ ಪಾತ್ರ; ದುರ್ಬಲರಿಗೆ ಒದಗುವ ಸಂಕಟ; ನ್ಯಾಯಕ್ಕೆ ಕುಡುಕರಿಂದ ಒದಗುವ ಗಾಸಿ ಇವೆಲ್ಲವನ್ನೂ ಸ್ವಾರಸ್ಯವಾಗಿ ಈ ಪುಸ್ತಕ ವಿವರಿಸುತ್ತದೆ.

ಯಲ್ಲಪ್ಪ ರೆಡ್ಡಿಯವರು ದಕ್ಷರು ಮಾತ್ರವಲ್ಲ, ಪ್ರಾಮಾಣಿಕರಷ್ಟೆ ಅಲ್ಲ; ತುಂಬಾ ಬುದ್ದಿವಂತರು, ಮೇಧಾವಿಗಳು, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಪ್ರಕಾರಗಳಲ್ಲಿ ನಿಷ್ಣಾತರು, ಮತ್ತೆ, ಪರಿಸರವನ್ನು ಕುರಿತಂತೆ ಅತ್ಯಂತ ಕಳಕಳಿಯುಳ್ಳವರು. ಈ ವಿಶಾಲ ಕ್ಷೇತ್ರದ ಸಿದ್ದಾಂತ, ಸಂಶೋಧನಾ, ಪ್ರಯೋಗ, ಅನ್ಯ, ಪ್ರಭಾವ ಇವೆಲ್ಲವನ್ನೂ ಮನದಟ್ಟು ಮಾಡಿಕೊಂಡವರು; ಅಂಕಿ ಅಂಶಗಳನ್ನೆಲ್ಲ ತಟ್ಟನೆ ನೆನಪಿಗೆ ತಂದುಕೊಂಡು ತಮ್ಮ ವಿಚಾರಕ್ಕೆ ದೃಢವಾದ, ಸುಸಂಗತವನಿಸುವ ಆಯಾಮವೊಂದನ್ನು ಸಿದ್ಧಮಾಡುವ ಚಾತುರ್ಯವುಳ್ಳವರು. ಇಂಥ ಅಧಿಕಾರಿ ಯಾವ ಇಲಾಖೆಗಾದರೂ ಹೆಮ್ಮೆಯ, ಯಾವ ಸರಕಾರಕ್ಕಾದರೂ ಭಾಗ್ಯ, ಯಾವ ನಾಡಿಗಾದರೂ ಗೌರವವೇ.

ರೆಡ್ಡಿಯವರು ತುಳಿದದ್ದು ಹಸಿರು ಹಾದಿಯನ್ನು, ಹಸಿರೆಂದರೆ ಬದುಕಿ, ಬಾಗಿ, ಬೀಗುವ ಮರಗಿಡಗಳು; ಅರಣ್ಯವೆಂದರೆ ಅದೊಂದು ಹಸಿರು ರಾಜ್ಯವೇ. ಇದು ಹಸಿರಾಗಿರುವಷ್ಟು ಕಾಲವೂ ನನ್ನ ಹಸಿವು ಇಂಗುತ್ತದೆ, ಮನಸ್ಸಿನ ಹರುಷ ಹೆಚ್ಚುತ್ತದೆ, ಸ್ಫೂರ್ತಿಯ ಸೆಲೆ ಹೊಸಹೊಸದಾಗಿ ಹರಡಿಕೊಳ್ಳುತ್ತದೆ. ಕಾಡಿಗೂ ಮನುಷ್ಯನಿಗೂ ಇರುವ ನಂಟು ನಿಕಟವಾದದ್ದು; ನಂಟಿನ ಕೊಂಡಿ ಹಸಿರು, ಕಾಡು ತನ್ನ ಹಸಿರನ್ನು ಕಳೆದುಕೊಂಡು ಬರಡಾದರೆ ಮನುಷ್ಯನ ಬದುಕಿನಲ್ಲಿರುವ ಹರುಷವು ಮರೆಯಾಗುತ್ತದೆ. ಕಾಡಿನ ಹಸಿರನ್ನು ಉಳಿಸಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ. ಈ ಗುಟ್ಟನ್ನು ಮನದಟ್ಟು ಮಾಡಿಕೊಂಡ ಅಧಿಕಾರಿಗಳಲ್ಲಿ ರೆಡ್ಡಿಯವರು ಪ್ರಮುಖರು. ಹಸಿರು ಹಾದಿಯನ್ನು ಹಸಿರಾಗಿಯೇ ಉಳಿಸುವ ಕಳಕಳಿಯಿಂದಲೇ ಅವರು ತಮ್ಮ ಅಧಿಕಾರಾವಧಿಯನ್ನು ಕಳೆದರು. ಈ ಕಥೆಯನ್ನು ಇಲ್ಲಿ ಸ್ವಾರಸ್ಯವಾಗಿ ನಿರೂಪಿಸಿದ್ದಾರೆ. ಅವರ ಬರವಣಿಗೆಯಲ್ಲಿ ಇದೇ ಕಳಕಳಿ ಕಾಣುತ್ತದೆ.

ರೆಡ್ಡಿಯವರು ನನಗೆ ಬಹುಕಾಲದ ಮಿತ್ರ. ಅವರ ಮಾತುಗಾರಿಕೆಯ ಬಂಡನ್ನುಂಡು ಸಂತೋಷಪಟ್ಟಿದ್ದೇವೆ, ಕಾಡುಗಳಲ್ಲಿ ಅವರೊಂದಿಗೆ ಸುತ್ತಾಡುವಾಗ ಅವರ ಅನುಭವಗಳನ್ನು ಕೇಳಿ ಪುಳಕಿತನಾಗಿದ್ದೇನೆ; ಗಿಡಮರಗಳ, ಪಶುಪಕ್ಷಿಗಳ ಮಾಹಿತಿಗಳನ್ನು ಅವರು ಒದಗಿಸುತ್ತಿರುವಾಗ ನಿಬ್ಬೆರಗಾಗಿದ್ದೇನೆ. ಪುಂಡರ ತಂಟೆಯನ್ನು ತಾಳಿಕೊಳ್ಳುವ, ತಡೆಗಟ್ಟುವಾಗ ತಾವು ದಿಟ್ಟತನದಿಂದ ತಳೆದ ಧೋರಣೆಯನ್ನು ಕುರಿತು ಅವರು ಹೇಳುವಾಗ ಮೆಚ್ಚಿಕೊಂಡಿದ್ದೇನೆ. ಅವರ ಮಾತೆಂದರೆ ನನಗೆ, ನನ್ನ ಮಡದಿಗೆ, ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ತುಂಬಾ ಸೊಗಸು, ತುಂಬಾ ರುಚಿ, ಅವರ ಅನುಭವಗಳನ್ನು ಅನಿಸಿಕೆಗಳನ್ನು ಕುರಿತು ಇದೊಂದು ಪುಸ್ತಕವನ್ನು ಅವರು ಬರೆದು ಇನ್ನೂ ನೂರಾರು ಸಾವಿರಾರು ಮಂದಿಗೆ ಸೊಗಸನ್ನೂ ರುಚಿಯನ್ನೂ ಒದಗಿಸಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಇದು ಲೇಖನಮಾಲೆಯಾಗಿ ಪ್ರಕಟವಾದಾಗಲೇ ಹಲವರು ಇದು ಪುಸ್ತಕವಾಗಿ ಬರಲೆಂದು ಬಯಸಿದ್ದರು. ಈಗ ಅದು ಕೈಗೂಡಿದೆ.

ರಂಜಕವಾದ, ರೋಮಾಂಚಕವಾದ ಘಟನೆಗಳು; ಮೈನವಿರೇಳಿಸುವ ಪ್ರಸಂಗಗಳು; ಆಡಳಿತದಲ್ಲಿನ ಓರೆಕೋರೆಗಳು, ದುರುಳತನ ನಾನಾ ಮುಖಗಳು; ವಿಷ ವೃತ್ತ; ಅಧಿಕಾರಿಗಳನ್ನು ಸೆಣಸುವ ಸುಳಿಗಳು, ಬಿರುಗಾಳಿಗಳು, ಇವೆಲ್ಲದರ ನಡುವೆ ಬೆಳೆದು, ಬದುಕಿ, ಬಾಳಿ, ತಮ್ಮತನವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಕಹಿ ವಾತಾವರಣದಲ್ಲೂ ನೆಮ್ಮದಿಯಿಂದ ತಾವಾಗಿಯೇ ನಿವೃತ್ತರಾದ ರೆಡ್ಡಿಯವರ ವ್ಯಕ್ತಿತ್ವ ಎಷ್ಟು ಉಜ್ವಲವಾದುದೆಂದು ಯಾವ ಓದುಗನಿಗಾದರೂ ಮನದಟ್ಟಾದೀತು. ರೆಡ್ಡಿಯವರು ಸ್ನೇಹಜೀವಿ, ಸಹೃದಯರು, ಕಲಾ ಪಕ್ಷಪಾತಿ, ಸಂಗೀತ ರಸಿಕರು, ಆಧ್ಯಾತ್ಮಪರರು; ಮನವೀಯತೆಯ ಆರಾಧಕರು, ಮನುಷ್ಯ ಸಂಕುಲದಾಚಿಯೂ ಪ್ರಾಣಿವರ್ಗವೆಲ್ಲದರ ಹಿತೈಷಿಗಳು, ಅವರ ದೃಷ್ಟಿ ವಿಶಾಲವಾದುದು; ಅವರು ವೃತ್ತಿಯಲ್ಲಿ ವಿಜ್ಞಾನಿಯಾದರೂ ಪ್ರವೃತ್ತಿಯಲ್ಲಿ ಸಂಪ್ರದಾಯ ಮೌಲ್ಯಗಳಲ್ಲಿ ಶ್ರದ್ಧೆಯುಳ್ಳವರು. ಹಲವಾರು ಪ್ರಕಾರಗಳ ಸುಮಧುರ ಸಂಗಮದಂತೆ ಅವರ ನಿಲುವು. ಉದ್ಯೋಗದಿಂದ ನಿವೃತ್ತರಾದ ಮೇಲೆ ಕೂಡ ತಾವು ಒಲಿದ ಪರಿಸರ ರಕ್ಷಣೆಯ ಗೀಳನ್ನು ಹಚ್ಚಿಕೊಂಡು ಹಗಲೂ ಇರುಳೂ ದುಡಿಯುತ್ತಲೇ ಇದ್ದಾರೆ.

ಇವರ ಪುಸ್ತಕದಿಂದ ಜನರೂ, ಅಧಿಕಾರಿಗಳೂ, ಆಡಳಿತದವರೂ, ತಜ್ಞರೂ ಕಲಿಯಬೇಕಾದದ್ದು ಬಹಳ ಇದೆಯೆನಿಸುತ್ತದೆ. ಹಸಿರು ಹಾದಿಯಲ್ಲಿ ಹಲವು ಕೆಂಪು ದೀವಟಿಗೆಗಳನ್ನು ಗಮನಿಸಬಹುದು, ಬೇಕಾದವರು ಬೆಳಕನ್ನು ಕಾಣಬಹುದು; ನಿದ್ದೆಯ ಮಂಪರದಲ್ಲಿರುವವರು ಎಚ್ಚೆತ್ತು ನಿಲ್ಲಬಹುದು; ದಿಕ್ಕುಗಾಣದೆ ತೊಳಲುತ್ತಿರುವವರು ಧೈರ್ಯವನ್ನು ತಂದುಕೊಳ್ಳಬಹುದು. ಹಲವರಿಗೆ “ಇಲ್ಲಿ ಪ್ರೇರಣೆ ದೊರೆಯಬಹುದು, ಸ್ಫೂರ್ತಿ ಸಿಗಬಹುದು, ಮಾರ್ಗದರ್ಶನ ದೊರಕಬಹುದು. ಹೀಗಾದರೇ ಇಂಥ ಪುಸ್ತಕದ ಪ್ರಯೋಜನ, ಸುಮ್ಮನೆ ಒಮ್ಮೆ ಓದಿ ಅತ್ತ ಸರಿಸುವ ಪುಸ್ತಕವಲ್ಲ ಇದು. ಮತ್ತೆ ಮತ್ತೆ ಮನನ ಮಾಡಬೇಕಾದ, ವಿಚಾರ ಮಾಡಬಹುದಾದ ಅಂಶಗಳು ಅನೇಕ ಇವೆ. ಓದುವಾಗ ಸ್ವಾರಸ್ಯವೇ; ಆದರೆ ಆಲೋಚನೆ ಮಾಡತೊಡಗಿದರೆ ದಿಗಿಲಾಗುತ್ತದೆ. ಪರಿಸ್ಥಿತಿಯು ಮಾರ್ಪಡದಿದ್ದರೆ, ಆಡಳಿತದಲ್ಲಿ ಪ್ರಾಮಾಣಿಕತೆಗೆ ಮಾನವೀಯತೆಗೆ ಬೆಲೆ ಬಾರದಿದ್ದರೆ ಬಾಳ ಹಸಿರು ಉಳಿಯಲಾರದು. ಇದು ಪುಸ್ತಕದ ಸಂದೇಶ, ಇದಕ್ಕೆ ಎಲ್ಲರೂ ಓಗೊಟ್ಟರೆ ಜನತೆಗೆ ಒಳಿತು, ಉಳಿವು.

 

ಪ್ರೊ. ಸಾ. ಕೃ. ರಾಮಚಂದ್ರ ರಾವ್

 

ಪುಟಗಳು: 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)